ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ಆಯುರ್ವೇದವು ಭಾರತೀಯರ ಪುರಾತನ ಚಿಕಿತ್ಸಾ ಪದ್ಧತಿ. ಆಯುರ್ವೇದದ ಅರಿವಿದ್ದರೆ ಕಾಯಿಲೆಗಳಿಂದ ದೂರವಿರಲು ಸಾಧ್ಯ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಗದಗ ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿ ಹೇಳಿದರು.
ಸೋಮವಾರ ಪಟ್ಟಣದ ಚನ್ನಮ್ಮ ವನದಲ್ಲಿ ಡಿಜಿಎಂ ಆಯುರ್ವೇದಿಕ್ ವೈದ್ಯಕೀಯ ಕಾಲೇಜು ಹಾಗೂ ಸುಜಾತಾ ದೊಡ್ಡಮನಿ ಫೌಂಡೇಶನ್ ಸಹಯೋಗದಲ್ಲಿ ಮಹಿಳೆಯರಿಗೆ ಹಮ್ಮಿಕೊಂಡಿದ್ದ ೭ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ನಿಮಿತ್ತ ಆಯುರ್ವೇದದ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನೆಯಲ್ಲಿ ಬಳಸುವ ಬೆಳ್ಳುಳ್ಳಿ, ಅರಿಷಿನ, ಶುದ್ಧ ಕೊಬ್ಬರಿ ಎಣ್ಣೆ ಸೇರಿ ಬಹುತೇಕ ವಸ್ತುಗಳೇ ಆಯುರ್ವೇದದ ಭಾಗವಾಗಿವೆ. ಎಲ್ಲವನ್ನೂ ನಾವು ಮಿತವಾಗಿ ಬಳಸುವ, ಯಾವ ಕಾಲಕ್ಕೆ ಎಷ್ಟು ಬಳಸುವ ಮಾಹಿತಿಯನ್ನು ಇಂದಿನ ಪೀಳಿಗೆಗೆ ನೀಡುವ ಕೆಲಸವಾಗಬೇಕಿದೆ.
ಒಂದು ಕುಟುಂಬದ ಆರೋಗ್ಯ ಅಡುಗೆ ಮನೆಯಲ್ಲಿ ಇರುವುದರಿಂದ ಮಹಿಳೆಯರಿಗೆ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಸುಜಾತಾ ದೊಡ್ಡಮನಿ ಹೇಳಿದರು.
ಲಕ್ಷ್ಮೇಶ್ವರ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಮ್ಮ ಕಳ್ಳಿ ಅವರು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸಂಯೋಜಕರಾದ ದಾನೇಶ್ವರಿ ಭಜಂತ್ರಿ, ಭುವನೇಶ್ವರಿ ಕಲಕುಟಿಗರ, ಮಹಾ ದೇವಮ್ಮ ಹಳ್ಳಿ, ಬಸಮ್ಮ ಕಾಮಣ್ಣವರ, ಲಕ್ಷ್ಮವ್ವ ಕುರಿ, ಸುಶೀಲಮ್ಮ ಹುರಕಡ್ಲಿ, ಶಶಿಕಲಾ ಬಡಿಗೇರ, ಡಾ.ಸುವರ್ಣ ನಿಡಗುಂದಿ, ಡಾ.ಪಲ್ಲವಿ ಸೇರಿ ಅನೇಕರಿದ್ದರು.