ಜಲ್ಲಿಕಲ್ಲು ಸಿಡಿದು ಅವಘಡ
ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ಪಟ್ಟಣದಲ್ಲಿ ಇದೀಗ ಎಲ್ಲೆಡೆ ರಸ್ತೆಗುಂಡಿಗಳದ್ದೇ ಹಾವಳಿಯಾಗಿದ್ದು, ಪ್ರಮುಖ ರಸ್ತೆಗಳು ಸಹ ಇದಕ್ಕೆ ಹೊರತಾಗಿಲ್ಲ. ಸೋಮವಾರ ಪಟ್ಟಣದ ಶಿಗ್ಲಿನಾಕಾದ ತಿರುವಿನಲ್ಲಿ ಲಾರಿಯೊಂದರ ಟೈರ್ ಸ್ಫೋಟಗೊಂಡು ರಸ್ತೆಯಲ್ಲಿಯೆ ನಿಂತ ಪರಿಣಾಮ ಸ್ಫೋಟದ ರಭಸಕ್ಕೆ ರಸ್ತೆಯಲ್ಲಿ ಹಾಕಿದ್ದ ಜಲ್ಲಿಕಲ್ಲುಗಳು ಬಡಿದು ಕೆಲವರಿಗೆ ಗಾಯಗೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಇದರ ಪರಿಣಾಮವಾಗಿ ಕಿಲೋ ಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು ಪರದಾಡುವಂತಾಗಿತ್ತು.
ಟೈರು ಸಿಡಿದ ರಭಸದಿಂದ ಕಲ್ಲುಗಳು ಬಡಿದು ಕೆಲವರು ಗಾಯಗೊಂಡಿದ್ದು, ಒಬ್ಬನ ಕೈ ಮುರಿದಿದೆ. ಬಾಲಕಿಯೋರ್ವಳಿಗೆ ಹೊಟ್ಟೆಗೆ ಪೆಟ್ಟು ಬಿದ್ದಿದೆ. ಮಹಿಳೆಗೆ ಕಿವಿ ಬಳಿ ಕಲ್ಲು ತಗುಲಿ ಆ ಭಾಗ ಊದಿಕೊಂಡಿದೆ ಹಾಗೂ ಎರಡು ಆಟೋರಿಕ್ಷಾ ಗ್ಲಾಸ್ ಚೂರಾಗಿದ್ದು ಘಟನೆಯಿಂದ ಸುತ್ತಮುತ್ತಲಿನ ಜನರು ಕಂಗಾಲಾಗುವಂತಾಗಿದೆ.
ಗಾಯಗೊಂಡವರನ್ನು ಚಿಕಿತ್ಸೆಗಾಗಿ ಲಕ್ಷ್ಮೇಶ್ವರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಂ.ಸ್ಯಾಂಡ್ ತುಂಬಿಕೊಂಡು ಹುಬ್ಬಳ್ಳಿ ಕಡೆಗೆ ಹೊರಟಿದ್ದ ಲೈಲಾಂಡ್ ಲಾರಿಯೊಂದರ ಟೈರ್ ಸಿಡಿದು ಘಟನೆ ನಡೆದಿದೆ. ಆಗ ಲಾರಿಯ ಹಿಂಬದಿ ಬರುತ್ತಿದ್ದ ಸಾರ್ವಜನಿಕರು ಗಾಯಗೊಂಡಿದ್ದಾರೆ.
ಘಟನೆಯಲ್ಲಿ 5ಕ್ಕೂ ಹೆಚ್ಚು ಜನ ಗಾಯಗೊಂಡು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಕೆಲ ಕಾಲ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಘಟನೆ ನಡೆದ ತಕ್ಷಣ ಲಾರಿ ಚಾಲಕ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿ ಪೋಲೀಸ್ ಠಾಣೆಗೆ ಹೋಗಿದ್ದಾನೆಂದು ತಿಳಿದು ಬಂದಿದೆ. ತನಿಖೆ ಮುಂದುವರಿದಿದೆ.