ಹಾಡುಹಗಲೇ ಜನರ ಮಧ್ಯೆಯೇ 10 ಲಕ್ಷ ರೂ. ಎಗರಿಸಿದ ಖದೀಮ; ಕಳ್ಳತನದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

0
Spread the love

ಪೊಲೀಸರ ಮುಂದೆ ಕಣ್ಣೀರಿಟ್ಟ ರಾಮನಗೌಡ್ರ

Advertisement

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ:

ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್‌ನಿಂದ ೧೦ ಲಕ್ಷ ರೂ.ಗಳ ಹಣವನ್ನು ತೆಗೆದುಕೊಂಡು(ಡ್ರಾ) ಬೈಕ್ ಸೈಡ್ ಬ್ಯಾಗ್‌ನಲ್ಲಿರಿಸಿಕೊಂಡು ಹೋಗುವಾಗ ಕಳ್ಳನೋರ್ವ ಹಣ ದೋಚಿಕೊಂಡು ಹೋಗಿರುವ ಘಟನೆ ಶುಕ್ರವಾರ ನಡೆದಿದೆ.

ಪಟ್ಟಣದ ರಾಜೇಂದ್ರ ಕಾಟನ್ ಇಂಡಸ್ಟ್ರೀಜ್‌ನಲ್ಲಿ ಹಲವಾರು ವರ್ಷಗಳಿಂದ ಕಾರ್ಖೂನನಾಗಿ ಸೇವೆ ಸಲ್ಲಿಸುತ್ತಿರುವ ರಾಮನಗೌಡ್ರ ಫಕ್ಕೀರಗೌಡ ಪಾಟೀಲ ಎನ್ನುವವರು ಹಣ ಕಳೆದುಕೊಂಡಿದ್ದಾರೆ.

ರಾಮನಗೌಡ್ರ ರಾಜೇಂದ್ರ ಕಾಟನ್ ಇಂಡಸ್ಟ್ರೀಜ್ ಅಕೌಂಟ್‌ನಿಂದ ಹಣ ಡ್ರಾ ಮಾಡಿ ಚೀಲದಲ್ಲಿ ಹಾಕಿಕೊಂಡು ಬೈಕ್ ಸೈಡ್ ಬ್ಯಾಗ್‌ನಲ್ಲಿರಿಸಿಕೊಂಡು ಹೊರಟಿದ್ದಾರೆ. ಹೊಂಚು ಹಾಕಿಯೇ ಕುಳಿತಿದ್ದ ಖದೀಮರು ಬೈಕ್ ಹಿಂಬಾಲಿಸಿದ್ದಾರೆ. ಈ ವೇಳೆ ಎದುರಿಗೆ ವಾಹನವೊಂದು ಬಂದಾಗ ರಾಮನಗೌಡ್ರ ಬೈಕ್‌ನ್ನು ನಿಧಾನ ಮಾಡಿದ್ದು, ಆಗ ಕಳ್ಳನೋರ್ವ ಕ್ಷಣ ಮಾತ್ರದಲ್ಲಿ ಹಣ ಲಪಟಾಯಿಸಿ ಪರಾರಿಯಾಗಿದ್ದಾನೆ. ಬ್ಯಾಂಕಿನಿಂದ ಕೆಲವೇ ಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ.

ಎಪಿಎಂಸಿ ಎದುರುಗಡೆಯ ರಸ್ತೆಯಲ್ಲಿಯೇ ಈ ಘಟನೆ ನಡೆದಿರುವುದರಿಂದ ವ್ಯಾಪಾರಸ್ಥರು ಭಯಭೀತರಾಗಿದ್ದಾರೆ. ಹಣ ಕಳೆದುಕೊಂಡ ವ್ಯಕ್ತಿ ರಾಮನಗೌಡ್ರ ಅವರು ಹೇಳಿಕೆ ನೀಡಿ, ಪ್ರತಿ ದಿನದಂತೆ ಬ್ಯಾಂಕ್‌ಗೆ ಹಣ ಪಾವತಿಸುವುದು, ಬ್ಯಾಂಕ್‌ನಿಂದ ಹಣ ತೆಗೆದುಕೊಂಡು ಹೋಗುವುದು ಮಾಡುತ್ತೇನೆ. ಎಂದಿನಂತೆ ಇವತ್ತೂ ಹಣವನ್ನು ಡ್ರಾ ಮಾಡಿ ವಾಹನದ ಬ್ಯಾಗ್‌ನಲ್ಲಿ ಇಟ್ಟುಕೊಂಡು ಹೋಗುತ್ತಿರುವಾಗ ನನಗೆ ತಿಳಿಯದಂತೆ ಬ್ಯಾಗ್‌ನಿಂದ ಹಣ ಎಗರಿಸಿದ್ದಾರೆ. ಇದರಿಂದ ನನಗೆ ಏನು ಮಾಡಬೇಕೆಂದು ದಿಕ್ಕು ತೋಚದಂತಾಗಿದೆ ಎಂದು ಹಣ ಕಳೆದುಕೊಂಡ ರಾಮನಗೌಡ್ರ ಪೊಲೀಸರ ಮುಂದೆ ಕಣ್ಣೀರಿಟ್ಟರು.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಾಹಿತಿ ಪಡೆದು ಸುತ್ತಮುತ್ತಲಿನ ಸಿಸಿ ಟಿವ್ಹಿಯಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಪರಿಶೀಲಿಸಿದರು. ಸಿಸಿ ಟಿವಿಯಲ್ಲಿ ಬೈಕ್‌ನಿಂದ ಓರ್ವ ಹಣ ಎಗರಿಸುತ್ತಿರುವ ದೃಶ್ಯಗಳು ಸೆರೆಯಾಗಿವೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿ ಟಿವಿಯಲ್ಲಿನ ದೃಶ್ಯ ಅಸ್ಪಷ್ಟವಾಗಿದ್ದು ಬಲ್ಲ ಮೂಲಗಳಿಂದ ಕಳ್ಳರ ಮಾಹಿತಿ ಕಲೆ ಹಾಕುತ್ತಿದ್ದೇವೆ. ಆದಷ್ಟು ಶೀಘ್ರವೇ ಖದೀಮರನ್ನು ಸೆರೆಹಿಡಿಯಲಾಗುವುದು ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here