ವಿಜಯಸಾಕ್ಷಿ ಸುದ್ದಿ, ಗದಗ:
ದೀಪಾವಳಿ ಅಮಾವಾಸ್ಯೆಯಂದು ಶಹರ ಠಾಣೆಯಲ್ಲಿ ಸಂತೋಷ್ ಕರಕಿಕಟ್ಟಿ ಎನ್ನುವ ಯುವಕ ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ಆತ ಹೃದಯಾಘಾತದಿಂದ ಸತ್ತಿದ್ದಾನೆ ಎಂದು ಪೊಲೀಸರು ಹೇಳಿದರೆ, ಯುವಕನಿಗೆ ಪಿಟ್ಸ್ ಬಂದಿತ್ತೆಂದು ಎಸ್ಪಿ ಶಿವಪ್ರಕಾಶ್ ದೇವರಾಜು ಹೇಳಿದ್ದರು.
ಆದರೆ, ಪೊಲೀಸರ ಹೊಡೆತದಿಂದಲೇ ಸಂತೋಷ ಕೊನೆಯುಸಿರೆಳೆದಿದ್ದಾನೆ ಎನ್ನುವ ಅನುಮಾನ ಗದಗ-ಬೆಟಗೇರಿ ಜನರನ್ನು ಬಲವಾಗಿ ಕಾಡಿತ್ತು. ಇದಕ್ಕೆ ಪೂರಕವಾಗಿ ಪೊಲೀಸರ ಹೊಡೆತದಿಂದ ನೋವು ತಡೆಯಲಾಗುತ್ತಿಲ್ಲ ಎಂದು ಹೇಳಿರುವ ಸಂತೋಷನದು ಎನ್ನಲಾದ ಆಡಿಯೋ ಒಂದು ಹರಿದಾಡಿ ಮತ್ತಷ್ಟು ಆತಂಕ ಮೂಡಿಸಿತ್ತು. ಅದೂ ಸಾಲದೆಂಬಂತೆ, ಆಸ್ಪತ್ರೆಯಲ್ಲಿ ಮಗನ ಶವದ ಮುಂದೆಯೇ ಅನಸಮ್ಮನವರಿಗೆ ಪೊಲೀಸರು ಗದರಿಸಿ ಹೊರಗೆ ಕಳುಹಿಸಿದ ವೀಡಿಯೋ ಕೂಡ ಬಹಿರಂಗವಾಗಿತ್ತು.
ಆತ ಪಿಟ್ಸ್ ಅಥವಾ ಹೃದಯಾಘಾತದಿಂದ ಸತ್ತಿದ್ದರೆ ಮರಣೋತ್ತರ ಪರೀಕ್ಷೆಯನ್ನೇಕೆ ಮಾಡಬೇಕಿತ್ತು? ಹೂಳಬೇಕಿದ್ದ ಶವವನ್ನು ತರಾತುರಿಯಲ್ಲಿ ಸುಟ್ಟಿದ್ದೇಕೆ ಎನ್ನುವ ಪ್ರಶ್ನೆಗಳಿಗೂ ಪೊಲೀಸರ ಬಳಿ ಉತ್ತರವಿಲ್ಲ. ಸಾಕ್ಷ್ಯನಾಶಕ್ಕಾಗಿ ಇಷ್ಟನ್ನೆಲ್ಲ ಮಾಡಿದರೇ? ಗೊತ್ತಿಲ್ಲ.
ಇಡೀ ಪ್ರಕರಣದ ತನಿಖೆಯಲ್ಲಿ ಪೊಲೀಸರ ಅಸಹಕಾರ ಎದ್ದು ಕಾಣುತ್ತಿದೆ. ಸಂತೋಷ ಠಾಣೆಯಲ್ಲೇ ಮೃತಪಟ್ಟಿದ್ದಾನೆ ಎಂದು ಆತನ ತಾಯಿ ಅನಸಮ್ಮ ಎಸ್ಪಿ ಅವರ ಮುಂದೆಯೇ ಹೇಳಿದ್ದರೂ ಅವರೂ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ ಎನ್ನಲಾಗಿದೆ.
ಹೀಗಾಗಿ, ನೊಂದ ಮಹಿಳೆ ನಿರ್ವಾಹವಿಲ್ಲದೆ ಮಾಜಿ ಶಾಸಕ ಡಿ.ಆರ್. ಪಾಟೀಲ ಅವರಲ್ಲಿ ನ್ಯಾಯಕ್ಕಾಗಿ ಅಂಗಲಾಚಿದ್ದಾರೆ. ನಗರಸಭೆ ಚುನಾವಣೆಯ ಭರಾಟೆಯಲ್ಲೂ ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಮುಂದಾಗಿರುವ ಡಿ.ಆರ್. ಪಾಟೀಲರು, ಎಸ್ಪಿ ಅವರ ಬಳಿ ಪ್ರಕರಣದ ಬಗ್ಗೆ ಮಾಹಿತಿ ಪಡೆದರು. ನೊಂದ ಕುಟುಂಬಕ್ಕೆ ಸೂಕ್ತ ನ್ಯಾಯ ಕೊಡಲು ಮನವಿ ಮಾಡಿದ್ದಾರೆ.
ಪ್ರಕರಣದ ಹಿನ್ನೆಲೆ
ಕಬ್ಜಾದಾರರಿಗೆ ಕಿರುಕುಳ ಕೊಟ್ಟ ಆರೋಪದಲ್ಲಿ ಆದರ್ಶನಗರದ ಸಂತೋಷ ಕರಕಿಕಟ್ಟಿಯನ್ನು ಶಹರ ಠಾಣೆಯ ಪೊಲೀಸರು ಕರೆ ಮಾಡಿ ಠಾಣೆಗೆ ಕರೆಸಿಕೊಂಡಿದ್ದರು. ಆಗ ಕರ್ತವ್ಯದಲ್ಲಿದ್ದ ಒಂದಿಬ್ಬರು ಪೊಲೀಸರು ಸಂತೋಷನನ್ನು ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆಮೇಲೆ ಠಾಣೆಯ ಹೊರಗಡೆ ಕಟ್ಟೆಯ ಮೇಲೆ ಕುಳಿತಿದ್ದಾಗ ತನ್ನ ಆಪ್ತನಿಗೆ ಕರೆ ಮಾಡಿದ್ದ ಸಂತೋಷ, ಪೊಲೀಸರು ಥಳಿಸಿದ ಬಗ್ಗೆ ವಿವರ ಕೊಟ್ಟಿದ್ದ. ನೋವು ತಡೆಯಲಾಗುತ್ತಿಲ್ಲ, ಬಂದು ಆಸ್ಪತ್ರೆಗೆ ಕರೆದೊಯ್ಯುವಂತೆ ಅಂಗಲಾಚಿದ್ದ. ಆ ಆಡಿಯೋ ಕೂಡ ವೈರಲ್ ಆಗಿತ್ತು.
ಆಮೇಲೆ ಮೃತ ಸಂತೋಷನ ತಾಯಿಗೆ ಕರೆ ಮಾಡಿದ ಪೊಲೀಸರು ಅರ್ಜೆಂಟ್ ಜಿಲ್ಲಾ ಆಸ್ಪತ್ರೆಗೆ ಬನ್ನಿ ಅಂತ ಹೇಳಿ ಕರೆ ಕಟ್ ಮಾಡಿದ್ದರು. ತಾಯಿ ಅನಸಮ್ಮ ಹಾಗೂ ಸಹೋದರ ಶಿವಕುಮಾರ್ ಆಸ್ಪತ್ರೆಗೆ ಹೋದಾಗ ಅಲ್ಲಿ, ತಾಯಿ ಅನಸಮ್ಮನನ್ನು ಪೊಲೀಸರ ತಡೆದು, ಸಂತೋಷನ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಕೆಲವು ಪತ್ರಗಳಿಗೆ ಸಹಿ ಹಾಕಿಸಿಕೊಂಡಾಗ, ಯಾಕ್ರೀ ಯಪ್ಪಾ ಏನಾಗೈತೀ ನನ್ನ ಮಗ್ಗ ಅಂದಾಗ, ಅಂವ ಸತ್ತಾನ ಅಂತ ಪೊಲೀಸರು ಕಿವಿಗಪ್ಪಳಿಸುವಂತೆ, ಎದೆಯೇ ಒಡೆದು ಹೋಗುವಂತೆ ಕರ್ಕಶವಾಗಿ ಹೇಳಿದ್ದಾರೆ. ಗಾಬರಿಬಿದ್ದ ತಾಯಿ ಶವಾಗಾರದಲ್ಲಿದ್ದ ಮೃತದೇಹ ನೋಡಿದ್ದಾಳೆ. ತಾಯಿಗೆ ದುಃಖ ಉಮ್ಮಳಿಸಿ ಬಂದಾಗ, ಪೊಲೀಸನೊಬ್ಬ ಆಕೆಯನ್ನು ಗದರಿಸಿ, ಹೊರಗೆ ಹೋಗುವಂತೆ ಕೈಸನ್ನೆ ಮಾಡಿದ್ದ. ಆ ವಿಡಿಯೋ ಕೂಡ ಬಹಿರಂಗವಾಗಿ ಪೊಲೀಸರ ವಿರುದ್ಧವೇ ಎಲ್ಲರ ದೃಷ್ಟಿ ತಿರುಗುವಂತೆ ಮಾಡಿತ್ತು.
ವಿಜಯಸಾಕ್ಷಿ ಕೂಡ ಆ ಕುಟುಂಬಕ್ಕೆ ಆದ ಅನ್ಯಾಯದ ಬಗ್ಗೆ ಸರಣಿ ವರದಿಗಳನ್ನು ಪ್ರಕಟಿಸಿತ್ತು.
ಎಚ್ಚೆತ್ತುಕೊಳ್ತಾರಾ ಪೊಲೀಸರು?
ಪೊಲೀಸರಿಗೆ ಪಾಪಪ್ರಜ್ಞೆಯೇ ಇದ್ದಂತಿಲ್ಲ. ಜನ ಏನು ಭಾವಿಸುತ್ತಾರೋ ಎಂಬ ಬಗ್ಗೆಯೂ ಕಾಳಜಿಯಿಲ್ಲ. ಥಳಿಸಿದ ಪೊಲೀಸರ ವಿರುದ್ಧ ಒಂದು ಸಣ್ಣ ಇಲಾಖಾ ತನಿಖೆಗೂ ಆದೇಶಿಸದೆ, ಏನೂ ಆಗೇ ಇಲ್ಲ ಎಂಬಂತೆ ಪೊಲೀಸ್ ಇಲಾಖೆ ಪ್ರಕರಣಕ್ಕೆ ಎಳ್ಳು-ನೀರು ಬಿಟ್ಟಿದೆ. ಸಂತೋಷನನ್ನು ಥಳಿಸಿದ ಪೊಲೀಸರನ್ನು ರಕ್ಷಣೆ ಮಾಡಲು ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿತ್ತು. ಸಂತೋಷನ ತಾಯಿ ಕೂಡ ಮಗನ ಸಾವಿಗೆ ಕಾರಣವಾದ ಪೊಲೀಸರಿಗೆ ಹಿಡಿಶಾಪ ಹಾಕಿದ್ದಳು.
ಈಗ ಸ್ವತಃ ಮಾಜಿ ಶಾಸಕ ಡಿ ಆರ್ ಪಾಟೀಲ ಅವರೇ ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸಲು ಮುಂದಾಗಿದ್ದು, ಪೊಲೀಸ್ ಇಲಾಖೆಗೆ ದಿಗಿಲು ಮೂಡಿಸಿದೆ. ಮುಚ್ಚಿ ಹೋಗಲಿದ್ದ ಪ್ರಕರಣಕ್ಕೆ ಜೀವ ಬಂದಿದೆ.
ಈಗಲಾದರೂ ಸಿಬ್ಬಂದಿ ರಕ್ಷಣೆಯ ಹೊಣೆಗಾರಿಕೆ ಅಷ್ಟೇ ಅಲ್ಲ, ಸಾರ್ವಜನಿಕರ ಅದರಲ್ಲೂ ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸುವ ಹೊಣೆಗಾರಿಕೆಯೂ ಜಿಲ್ಲಾ ಪೊಲೀಸ್ ಇಲಾಖೆಯ ಮೇಲಿದೆ ಎಂಬುದನ್ನು ಮರೆಯಬಾರದು ಎಂದು ಪ್ರಜ್ಞಾವಂತರು ಅಭಿಪ್ರಾಯ ಪಟ್ಟಿದ್ದಾರೆ. ಎಸ್ಪಿ ಶಿವಪ್ರಕಾಶ್ ದೇವರಾಜು ಅವರು ನಿಷ್ಪಕ್ಷಪಾತ ತನಿಖೆ ನಡೆಸಿ ನೊಂದ ಕುಟುಂಬಕ್ಕೆ ನ್ಯಾಯ ಕೊಡಸ್ತಾರಾ ಎಂಬುದನ್ನು ಕಾದು ನೋಡಬೇಕಿದೆ.