- ದೂರವಾಗಲಿದ್ದ ದಂಪತಿಗಳ ಬಾಂಧವ್ಯ ಬೆಸೆದ ನ್ಯಾಯಾಲಯ
ವಿಜಯಸಾಕ್ಷಿ ಸುದ್ದಿ, ರೋಣ
ಬಾಳಿ ಬೆಳಗಬೇಕಿದ್ದ ನವ ದಂಪತಿಗಳು ವೈವಾಹಿಕ ಹಕ್ಕುಗಳ ಪುನರ್ ಸ್ಥಾಪನೆಗೆ ಅರ್ಜಿ ಸಲ್ಲಿಸುವ ಮೂಲಕ ನ್ಯಾಯಲಯದ ಮೆಟ್ಟಿಲೇರಿದ್ದರು. ನ್ಯಾಯಾಧೀಶ ಚನ್ನಸ್ವಾಮಿರವರ ನ್ಯಾಯಯುತ ಸಲಹೆಯನ್ನು ಪಡೆದು ದಂಪತಿಗಳು ಲೋಕ ಅದಾಲತ್‌ನಲ್ಲಿ ಮತ್ತೆ ಒಂದಾಗುವ ಮೂಲಕ ಹೊಸ ಜೀವನದತ್ತ ಹೆಜ್ಜೆ ಹಾಕಿದ್ದಾರೆ.
ತಾಲೂಕಿನ ಅಬ್ಬಿಗೇರಿ ಗ್ರಾಮದ ಮುತ್ತಪ್ಪ ಜೋಗಿನ ಎಂಬುವರ ವಿರುದ್ಧ ಪತ್ನಿ ವಿದ್ಯಾ ಮುತ್ತಪ್ಪ ಜೋಗಿನ ಹಿರಿಯ ದಿವಾಣಿ ನ್ಯಾಯಾಧೀಶರುಗಳ ನ್ಯಾಯಾಲಯದಲ್ಲಿ ವೈವಾಹಿಕ ಹಕ್ಕುಗಳ ಪುನರ್‌ಸ್ಥಾಪನೆ ಕುರಿತು ಅರ್ಜಿ ಸಲ್ಲಿಸಿದ್ದರು.
https://youtube.com/live/buee8YcjQPQ
ಪತಿ ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಕೆಲಸದಲ್ಲಿದ್ದು, ಪತ್ನಿ ವಿದ್ಯಾ ಶೇತ್ಕಿ ಕೆಲಸದಲ್ಲಿ ತೊಡಗಿಕೊಂಡಿದ್ದರು ಹಾಗೂ ಈ ದಂಪತಿಗಳಿಗೆ ಮಗು ಕೂಡ ಇದೆ.
ಹಿಂದೂ ಧರ್ಮ ಪದ್ಧತಿಯಂತೆ ಏಪ್ರಿಲ್ 8, 2019ರಲ್ಲಿ ಇವರು ವಿವಾಹವಾಗಿದ್ದು, ಎರಡು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದರು. ಆದರೆ ಮುತ್ತಪ್ಪ ವಿದ್ಯಾಳಿಂದ ದೂರ ಸರಿದಾಗ, ಆಕೆ ಹಿಂದೂ ವಿವಾಹ ಅಧಿನಿಯಮ ಕಾಯ್ದೆಯನ್ವಯ ವೈವಾಹಿಕ ಹಕ್ಕುಗಳ ಪುನರ್‌ಸ್ಥಾಪನೆಗೆ ನ್ಯಾಯಲಯದ ಮೊರೆ ಹೋಗಿದ್ದರು.
https://youtube.com/live/buee8YcjQPQ
ನ್ಯಾಯಾಧೀಶರಾದ ಚನ್ನಸ್ವಾಮಿಯವರು ದಂಪತಿಗಳಿಗೆ ಭವಿಷ್ಯದ ಬಗ್ಗೆ ತಿಳುವಳಿಕೆ ನೀಡಿ, ಮಗುವಿನ ಭವಿಷ್ಯದ ದೃಷ್ಟಿಯಿಂದ ತಂದೆ-ತಾಯಿಗಳ ಪಾತ್ರ ದೊಡ್ಡದಾಗಿದೆ. ಜೀವನದಲ್ಲಿ ಉತ್ತಮ ಭವಿಷ್ಯದತ್ತ ಸಾಗಬೇಕಿರುವ ನೀವುಗಳು ಹಾದಿ ತಪ್ಪಿದರೆ ಹೇಗೆ ಎಂದು ಮನಃಪರಿವರ್ತನೆಯ ಪೂರಕ ಸಲಹೆಗಳನ್ನು ನೀಡಿದ್ದಾರೆ.
ಇದರಿಂದ ಮನಸ್ಸು ಬದಲಿಸಿದ ಪತಿ ಮುತ್ತಪ್ಪ, ಪತ್ನಿ ವಿದ್ಯಾಳೊಂದಿಗೆ ಸಹಬಾಳ್ವೆ ನಡೆಸಿ ಮಗುವಿನ ಉಜ್ವಲ ಭವಿಷ್ಯಕ್ಕೆ ಬುನಾದಿಯಾಗುತ್ತೇನೆ ಎಂದು ನ್ಯಾಯಾಧೀಶರುಗಳ ಸಮ್ಮುಖದಲ್ಲಿ ವಿದ್ಯಾಳನ್ನು ಸ್ವೀಕರಿಸಿದ್ದು ಸ್ವಾಗತರ್ಹವಾಗಿದೆ. ಇದೇ ಸಂದರ್ಭದಲ್ಲಿ ಇಬ್ಬರೂ ಹಾರ ಬದಲಾಯಿಸಿಕೊಂಡು ನೆಮ್ಮದಿಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅರ್ಜಿದಾರಳ ಪರವಾಗಿ ನ್ಯಾಯವಾದಿ ಆಯ್.ಎ. ಕಿರೇಸೂರು ಸೇರಿದಂತೆ ನ್ಯಾಯವಾದಿಗಳಾದ ಶ್ರೀಶೈಲ್ ಹೂಗಾರ, ಎಸ್.ಬಿ. ಕುಂಬಾರ, ಪಿ.ಎಸ್. ಪಲ್ಲೇದ, ಜಿ.ಎಂ. ಹೆಬ್ಬಳಿಮಠ, ವಾಯ್.ಎಂ. ಗಡ್ಡಿ ಸೇರಿದಂತೆ ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.