25 ಸಾವಿರ ರೂ.ಹಣ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತರ ದಾಳಿ……
ವಿಜಯಸಾಕ್ಷಿ ಸುದ್ದಿ, ಗದಗ/ರೋಣ
ಕೋರ್ಟ್ ಮೂಲಕ ಇಬ್ಬರಿಗೆ ಹಂಚಿಕೆಯಾಗಿದ್ದ ಆಸ್ತಿಯ ವಂಶಾವಳಿ ಪ್ರಮಾಣಪತ್ರ ಕೊಡಲು ಲಂಚ ಪಡೆದ ಬ್ರೋಕರ್ ಓರ್ವನ ಮೇಲೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಗದಗ ಜಿಲ್ಲೆಯ ರೋಣದ ತಾಲೂಕು ಪಂಚಾಯತಿ ಕಾರ್ಯಾಲಯದ ಆವರಣದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ರೆವಿನ್ಯೂ ಇನ್ಸ್‌ಪೆಕ್ಟರ್ ನಿಂಗಪ್ಪ ಅಡವೆಣ್ಣವರ ಹಾಗೂ ಬ್ರೋಕರ್ ಹುಸೇನಸಾಬ್ ಗೋನಾಳ ಎಂಬುವವರು, ಫಿರ್ಯಾದಿ ಸಲಾಯುದ್ದೀನ್ ಕಲಾದಗಿ ಎಂಬುವರು ಆಸ್ತಿಗೆ ಸಂಬಂಧಿಸಿದ ವಂಶಾವಳಿ ಪ್ರಮಾಣಪತ್ರ ಕೊಡಲು 25 ಸಾವಿರ ರೂ.ಗಳ ಲಂಚ ಕೇಳಿದ್ದರು.
ಗುರುವಾರ ಮಧ್ಯಾಹ್ನ ಫಿರ್ಯಾದಿ ಸಲಾಯುದ್ದೀನ ಲಂಚದ ಹಣ 25 ಸಾವಿರ ರೂ.ಗಳನ್ನು ಬ್ರೋಕರ್ ಹುಸೇನಸಾಬ ಗೋನಾಳಿಗೆ ಕೊಡುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಆರೋಪಿ ಹುಸೇನಸಾಬನನ್ನು ವಶಕ್ಕೆ ಪಡೆದಿದ್ದಾರೆ.
ಈ ಮಾಹಿತಿ ತಿಳಿಯುತ್ತಿದ್ದಂತೆಯೇ ರೆವಿನ್ಯೂ ಇನ್ಸ್‌ಪೆಕ್ಟರ್ ನಿಂಗಪ್ಪ ಅಡವೆಣ್ಣವರ ಪರಾರಿಯಾಗಿದ್ದು, ಬಂಧಿಸಲು ಲೋಕಾಯುಕ್ತ ಪೊಲೀಸರು ಬಲೆ ಬೀಸಿದ್ದಾರೆ.
ವಂಶಾವಳಿ ಪ್ರಮಾಣಪತ್ರಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ಈ ಮೊದಲೇ ಮೂರು ಬಾರಿ ತಿರಸ್ಕರಿಸಲಾಗಿತ್ತು ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.
ಲೋಕಾಯುಕ್ತ ಎಸ್ಪಿ ಸತೀಶ್ ಚಿಟಗುಪ್ಪಿ, ಡಿವೈಎಸ್ಪಿ ಶಂಕರ ಎಮ್ ರಾಗಿ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರಗಳಾದ ರವಿ ಪುರುಷೋತ್ತಮ್, ಅಜೀಜ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.
ಸಿಬ್ಬಂದಿಗಳಾದ ಎಸ್ ಎಸ್ ಅಮರಶೆಟ್ಟಿ, ಮಂಜುನಾಥ್ ಗಾರ್ಗಿ, ಲಕ್ಕನಗೌಡರ್, ಮುತ್ತುರೆಡ್ಡಿ ಬಾರಡ್ಡಿ, ಗುಬ್ಬಿ, ಅಯ್ಯನಗೌಡರ, ವಿರೂಪಾಕ್ಷ ಅರಿಷಿಣದ ಹಾಗೂ
ವಾಹನ ಚಾಲಕರಾದ ನೈನಾಪೂರ ಹಾಗೂ ಹೆಬ್ಬಳ್ಳಿ ಈ ಕಾರ್ಯಾಚರಣೆಯಲ್ಲಿ ಇದ್ದರು.