‘ಜಾನುವಾರುಗಳಿಗೆ ಕಾಲುಬಾಯಿ ಲಸಿಕಾಕರಣ ಯಶಸ್ವಿಗೊಳಿಸಿ’
ವಿಜಯಸಾಕ್ಷಿ ಸುದ್ದಿ, ಗದಗ
ಜಿಲ್ಲೆಯಲ್ಲಿ ಬೀಡಾಡಿ ಜಾನುವಾರುಗಳ ಹಾವಳಿ ಅಧಿಕವಾಗಿದ್ದು ಇದರಿಂದ ಜನಸಾಮಾನ್ಯರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಬೀಡಾಡಿ ಜಾನುವಾರುಗಳ ಮೂಲಕ ಮಾಲೀಕರು ಅವುಗಳನ್ನು ತಮ್ಮ ಸುಪರ್ದಿಯಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದಲ್ಲಿ ನಗರಸಭೆಯಿಂದ ಬೀಡಾಡಿ ದನಗಳನ್ನು ಹಿಡಿದು ಗೋಶಾಲೆಗೆ ಸ್ಥಳಾಂತರಿಸಲಾಗುವುದು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಪಶುಸಂಗೋಪನಾ ಇಲಾಖೆಯಿಂದ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಶು ಸಂಗೋಪನಾ ಇಲಾಖೆ ಹಾಗೂ ನಗರಸಭೆಯಿಂದ ಬೀಡಾಡಿ ದನಗಳ ನಿಯಂತ್ರಣಕ್ಕಾಗಿ ಸದ್ಯದಲ್ಲಿಯೇ ಜಾನುವಾರುಗಳನ್ನು ಹಿಡಿದು ಗೋಶಾಲೆಗೆ ಸ್ಥಳಾಂತರಿಸಲು ಸೂಚಿಸಿದ ಅವರು ಮೂಲ ಮಾಲೀಕರು ಜಾನುವಾರುಗಳನ್ನು ತಮ್ಮ ಸುಪರ್ದಿಯಲ್ಲಿಟ್ಟುಕೊಳ್ಳಬೇಕು. ನಂತರ ಜಾನುವಾರುಗಳು ತಮ್ಮದು ಎಂದು ಬಂದಲ್ಲಿ ದಂಡಸಹಿತ ಹಾಗೂ ಜಾನುವಾರು ನಿರ್ವಹಣಾ ವೆಚ್ಚವನ್ನು ಭರಿಸಬೇಕಾಗುತ್ತದೆ. ಪದೇ ಪದೇ ಬೀದಿಗಳಲ್ಲಿ ಮಾಲೀಕರು ಜಾನುವಾರುಗಳನ್ನು ಬಿಟ್ಟಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಚರ್ಮಗಂಟು ಕಾಯಿಲೆ ಕುರಿತಂತೆ ಜಾನುವಾರುಗಳ ಮಾಲೀಕರು ತಪ್ಪದೇ ಲಸಿಕೆ ಕೊಡಬೇಕು. ಲಸಿಕೆ ವಿಳಂಬವಾದಲ್ಲಿ ಜಾನುವಾರುಗಳ ಜೀವ ಹಾನಿ ಸಂಭವಿಸಬಹುದಾಗಿದ್ದು ರೈತ ಬಾಂಧವರು ಲಸಿಕೆ ಕೊಡಿಸುವಲ್ಲಿ ವಿಳಂಬ ಮಾಡಬಾರದು. ಹಾಗೂ ಲಸಿಕೆ ನೀಡಿಕೆ ಪ್ರಕ್ರಿಯೆಯನ್ನು ಇಲಾಖಾಧಿಕಾರಿಗಳು ತೀವ್ರಗೊಳಿಸುವ ಮೂಲಕ ಎಲ್ಲ ಜಾನುವಾರುಗಳಿಗೆ ಚರ್ಮಗಂಟು ಕಾಯಿಲೆ ವಿರುದ್ಧ ಲಸಿಕೆ ನೀಡಿಕೆ ಪೂರ್ಣಗೊಳಿಸಲು ಸೂಚಿಸಿದರು.
ಪಶುಪಾಲನಾ ಇಲಾಖೆಯ ಪಾಲಿಕ್ಲಿನಿಕ್‌ನ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಪ್ರಕಾಶ ಎಸ್ ಜೆಟ್ಟಣ್ಣವರ ಅವರು ಮಾತನಾಡಿ, ರಸ್ತೆಯಲ್ಲಿ ಸಂಚರಿಸುತ್ತಿರುವ ಬೀಡಾಡಿ ದನಗಳನ್ನು ಗುರುತಿಸಿ ಗೋಶಾಲೆಗಳಿಗೆ ವರ್ಗಾಯಿಸಲಾಗಿದೆ. ಜಾನುವಾರುಗಳ ಮಾಲೀಕರುಗಳಿಗೆ ತಮ್ಮ ಜಾನುವಾರುಗಳನ್ನು ತಮ್ಮ ಸುಪರ್ದಿಯಲ್ಲಿ ತೆಗೆದುಕೊಳ್ಳಲು ಎಚ್ಚರಿಕೆ ನೀಡಲಾಗಿದೆ.
ಪಶುಪಾಲನಾ ಕಾಲೇಜಿನ ವಿದ್ಯಾರ್ಥಿಗಳನ್ನು ಬಳಸಿಕೊಂಡು ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ ನೀಡಲಾಗುತ್ತಿದೆ. ಅಪಘಾತಕ್ಕೊಳ್ಳಗಾಗಿರುವ ಹಾಗೂ ಗಾಯಗೊಂಡಿರುವ ಜಾನುವಾರುಗಳಿಗೆ ಪ್ರಥಮ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ನೀಡಿ ಗುಣಮುಖಗೊಳಿಸಿ ಗೋಶಾಲೆಗಳಿಗೆ ಹಾಗೂ ಪ್ರಾಣಿ ಸಂಗ್ರಹಾಲಯಗಳಿಗೆ ಬಿಡಲಾಗಿದೆ ಎಂದು ತಿಳಿಸಿದರು.
ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಎಚ್.ಬಿ. ಹುಲಗಣ್ಣವರ ಅವರು ಮಾತನಾಡಿ, ಜಿಲ್ಲೆಯಲ್ಲಿ 136311 ದನ, 55798 ಎಮ್ಮೆ, 14552 ಹಂದಿ ಸೇರಿದಂತೆ ಒಟ್ಟಾರೆ 2,06,661 ಜಾನುವಾರುಗಳಿಗೆ ೩ನೇ ಸುತ್ತಿನ ಕಾಲುಬಾಯಿ ರೋಗ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.
ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿ ಧಾರವಾಡ ಇವರಿಂದ ಲಸಿಕೆಯನ್ನು ಸರಬರಾಜು ಮಾಡಲು ಶೀತಲೀಕರಣ ವಾಹನದ ಸೌಲಭ್ಯವನ್ನು ಪಡೆಯಲಾಗುವುದು ಎಂದು ಸಭೆಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಕೈಪಿಡಿ ಹಾಗೂ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಪಶು ಪಾಲನಾ ಇಲಾಖೆಯ ಉಪನಿರ್ದೇಶಕರಾದ ಡಾ. ಎಸ್.ಎಸ್.ಪಾಟೀಲ, ತಾಲೂಕಾ ಸಹಾಯಕ ನಿರ್ದೇಶಕರುಗಳಾದ ಡಿ.ಬಿ. ಹಕ್ಕಾಪಕ್ಕಿ, ಎನ್.ಎ. ಹವಳದ, ಬಾಬಾಜಾನ್ ಕುರಹಟ್ಟಿ, ವೆಂಕಟೇಶ, ಬಿ.ಎಸ್. ಅಂಗಡಿ ಪಶುಪಾಲನಾ ಮುಖ್ಯ ವೈದ್ಯಾಧಿಕಾರಿ ಡಾ. ತಿಪ್ಪಣ್ಣ ತಳಕಲ್ ಹಾಜರಿದ್ದರು.
ಜಾನುವಾರುಗಳಿಗೆ ೩ನೇ ಸುತ್ತಿನ ಕಾಲುಬಾಯಿ ರೋಗ ಲಸಿಕೆ ಕುರಿತು ವಲಯವಾರು ಜಾನುವಾರುಗಳ ಆಯ್ಕೆ ಮಾಡಿ ಲಸಿಕೆ ಕೊಡಬೇಕು. ಜಾನುವಾರುಗಳಿಗೆ ಲಸಿಕೆ ಹಾಕುವ ಕುರಿತು ರೈತರಲ್ಲಿ ಹಾಗೂ ಜಾನುವಾರುಗಳ ಮಾಲೀಕರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು.
-ವೈಶಾಲಿ ಎಂ.ಎಲ್., ಜಿಲ್ಲಾಧಿಕಾರಿ