ಕಾವೆಂಶ್ರೀ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ನಗರದ ಸಾಂಸ್ಕೃತಿಕ ಸಂಘಟಕ ಕಾವೆಂಶ್ರೀ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗದಗನಲ್ಲಿ ಕಳೆದ 25ವರ್ಷಗಳಿಂದ ಕಲಾಚೇತನ ಅಕಾಡೆಮಿ ಮೂಲಕ ಸಾಂಸ್ಕೃತಿಕ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವ ಕಾವೆಂಶ್ರೀ (ಕಾಳಮಂಜಿ ವೆಂಕಟಗಿರಿಯಪ್ಪ ಶ್ರೀನಿವಾಸ) ಅವರ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್ ನಲ್ಲಿ ಮುಕ್ತಕಂಠದಿಂದ ಹೊಗಳಿದ್ದಾರೆ.

ಗದಗನ ಹೋಟೆಲ್‌ವೊಂದರಲ್ಲಿ ಕೆಲಸಕ್ಕೆ ಸೇರಿ, ಸತತ ಪರಿಶ್ರಮದಿಂದ ಸ್ವಂತ ಹೋಟೆಲ್ ಆರಂಭಿಸಿ, ಇವತ್ತು ಯಶಸ್ವಿ ಉದ್ಯಮಿಯಾಗಿದ್ದಾರೆ. ತಮ್ಮ ಪೂರ್ಣ ಹೆಸರನ್ನೆ ಕಾವ್ಯನಾಮ ಮಾಡಿಕೊಂಡು ಕಲೆ- ಸಾಹಿತ್ಯ- ಸಂಸ್ಕೃತಿಯ ಕುರಿತು ಕಾವೆಂಶ್ರೀ ಹಲವಾರು ಲೇಖನಗಳನ್ನು ಬರೆದಿದ್ದಾರೆ.

ಕಲಾಚೇತನ ಅಕಾಡೆಮಿ ಮೂಲಕ ೨೫ ವರ್ಷಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಂಘಟಿಸಿ ಕಲಾಸೇವೆ ಮಾಡುತ್ತಿದ್ದಾರೆ.

ಕಳೆದ ನವೆಂಬರ್ ನಲ್ಲಿ ಕಲಾಚೇತನ ಅಕಾಡೆಮಿಯ ಬೆಳ್ಳಿಮಹೋತ್ಸವ ಕಾರ್ಯಕ್ರಮವನ್ನು ಕಾವೆಂಶ್ರೀ ಅರ್ಥಪೂರ್ಣವಾಗಿ ಸಂಘಟಿಸಿದ್ದರು. ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಅವರ ಉಪನ್ಯಾಸ, ಖ್ಯಾತ ಕೊಳಲುವಾದಕ ಪ್ರವೀಣ ಗೋಡಖಿಂಡಿ, ಷಡ್ಜ ಗೋಡಖಿಂಡಿ ಹಾಗೂ ತಬಲಾ ವಾದಕ ಕಿರಣ ಗೋಡಖಿಂಡಿ ಅವರ ಜುಗಲ್‌ಬಂದಿ ಕಲಾಸಕ್ತರನ್ನು ಮಂತ್ರಮುಗ್ಧಗೊಳಿಸಿತ್ತು. ಬೆಳ್ಳಿ ಮಹೋತ್ಸವ ಸಂಭ್ರಮ ಕಳೆಯುವ ಮುನ್ನವೇ ಕಾವೆಂಶ್ರೀ ಅವರ ಸಾಧನೆಯನ್ನು ಪ್ರಧಾನಿ ಕೊಂಡಾಡಿರುವುದು ಜಿಲ್ಲೆಯ ಸಾಹಿತಿಗಳ, ಕಲಾವಿದರ ಸಂಭ್ರಮಕ್ಕೆ ಕಾರಣವಾಗಿದೆ.

1996 ಏಪ್ರಿಲ್ 6ರಂದು ಕಲಾಚೇತನ ಸಾಂಸ್ಕೃತಿಕ ಸಂಘಟನೆ ಆರಂಭಿಸಿರುವ ಕಾವೆಂಶ್ರೀ, ಮುಂದೆ ಕಲಾಚೇತನ ಸಾಂಸ್ಕೃತಿಕ ಅಕಾಡೆಮಿ ಮೂಲಕ ಸಾಂಸ್ಕೃತಿಕ ಪ್ರಜ್ಞೆಯನ್ನು ಹೆಚ್ಚಿಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರು, 72ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಶಾಂತರಸರು ಕಲಾಚೇತನ ಅಕಾಡೆಮಿಯನ್ನು ಉದ್ಘಾಟಿಸಿದ್ದರು. ಅದೇ ದಿನ ಪಂಪ ಪ್ರಶಸ್ತಿ ವಿಜೇತ ಚನ್ನವೀರ ಕಣವಿ ಅವರಿಗೆ ಸಾಹಿತ್ಯಶ್ರೀ ಪ್ರಶಸ್ತಿ ನೀಡಲಾಯಿತು.

ಅಂದಿನಿಂದ ಇಂದಿನವರೆಗೂ ಯುವ ಕಲಾವಿದರನ್ನು, ಹಿರಿಯ ಸಾಹಿತಿಗಳನ್ನು, ಜಾನಪದ ಕಲಾವಿದರನ್ನು ನಾಡಿಗೆ ಪರಿಚಯಿಸುವ ಕಾರ್ಯವನ್ನು ಕಾವೆಂಶ್ರೀ ಕಲಾಚೇತನ ಅಕಾಡೆಮಿ ಮೂಲಕ ಮಾಡುತ್ತಿದ್ದಾರೆ. ಈವರೆಗೂ 100ಕ್ಕೂ ಹೆಚ್ಚು ಖ್ಯಾತನಾಮರು ಉಪನ್ಯಾಸ ನೀಡಿದ್ದಾರೆ. ಅಕಾಡೆಮಿಯ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಷಡ್ಜ ಗೋಡಖಿಂಡಿ ಸಹಿತ ಈವರೆಗೆ 65ಕ್ಕೂ ಹೆಚ್ಚು ಸಾಧಕರಿಗೆ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಖ್ಯಾತಿಯ ರಂಗಭೂಮಿ ಕಲಾವಿದರು, ಚಲನಚಿತ್ರ, ಯಕ್ಷಗಾನ, ಜಾನಪದ, ಸಂಗೀತ ವಾದ್ಯಕರು ನೀಡಿದ ಕಾರ್ಯಕ್ರಮಗಳು ಸ್ಮರಣೀಯವಾಗಿದೆ.


Spread the love

LEAVE A REPLY

Please enter your comment!
Please enter your name here