ಗದಗ-ಬೆಟಗೇರಿ ನಗರಸಭೆಗೆ ನೂತನ ಪೌರಾಯುಕ್ತರಾಗಿ ರಮೇಶ್ ನೇಮಕ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ:

Advertisement

ತಾಯಿ ಇಲ್ಲದ ತಬ್ಬಿಲಿಯಂತಾಗಿದ್ದ ಗದಗ-ಬೆಟಗೇರಿ ನಗರಸಭೆಗೆ ನಗರಾಭಿವೃದ್ಧಿ ಇಲಾಖೆ ಖಾಯಂ ಪೌರಾಯುಕ್ತರನ್ನು ನೇಮಕಗೊಳಿಸಿ ಬುಧವಾರ ಆದೇಶಿಸಿದ್ದು, ಕಾಟಚಾರಕ್ಕೆ ವಹಿಸಿಕೊಳ್ಳುತ್ತಿದ್ದ ಪ್ರಭಾರ ಪೌರಾಯುಕ್ತರಿಗೆ ಸರ್ಕಾರ ಕೊನೆ ಹಾಡಿದೆ. ಇದರಿಂದ ಅವಳಿ ನಗರದ ಜನರಲ್ಲಿ ಮಂದಹಾಸ ಮೂಡಿದೆ.

ಸ್ಥಳ‌ ನಿರೀಕ್ಷೆಯಲ್ಲಿದ್ದ ಪೌರಸೇವ ವೃಂದದ ರಮೇಶ್ ಎಸ್.ಸುಣಗಾರ ಅವರನ್ನು ಸರ್ಕಾರ ಗದಗ-ಬೆಟಗೇರಿ ನಗರಸಭೆಯಲ್ಲಿ ಖಾಲಿ ಇರುವ ಪೌರಾಯುಕ್ತರ ಹುದ್ದೆಗೆ ನೇಮಕಗೊಳಿಸಿ ಆದೇಶಿಸಿದೆ.

ಫೆ.೧೮ರಂದು ವಿಜಯಸಾಕ್ಷಿ ಪತ್ರಿಕೆಯು ‘ನಗರಸಭೆಗಿಲ್ಲ ಖಾಯಂ ಪೌರಾಯುಕ್ತರು! ಎಂಬ ಶೀರ್ಷಿಕೆಯಡಿ ಪೂರ್ಣ ಪ್ರಮಾಣದ ಪೌರಾಯುಕ್ತರಿಲ್ಲದೇ ಅವಳಿ ನಗರದಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ವಿಸ್ತ್ರತ ವರದಿ ಪ್ರಕಟಿಸಿತ್ತು. ಅಲ್ಲದೆ, ಖಾಯಂ ಪೌರಾಯುಕ್ತರನ್ನು ನಿಯೋಜಿಸುವಂತೆ ಗದಗ-ಬೆಟಗೇರಿ ಜನರ ಬೇಡಿಕೆಯೂ ಹೆಚ್ಚಾಗಿತ್ತು. ಈ ಬೆನ್ನಲ್ಲೇ ಸರ್ಕಾರ ಜನರ ಈ ಸಮಸ್ಯೆ ನಿವಾರಿಸಲು ಪೂರ್ಣ ಪ್ರಮಾಣದ ಪೌರಾಯುಕ್ತರನ್ನು ನಿಯೋಜಿಸಿದೆ.

ಕಳೆದ ಹಲವು ತಿಂಗಳಿಂದ ಪೂರ್ಣ ಪ್ರಮಾಣದ ಪೌರಾಯುಕ್ತರಿಲ್ಲದೆ, ನಗರದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದವು. ಪ್ರಭಾರಿ ಪೌರಾಯುಕ್ತರಿದ್ದರೂ ಸಾರ್ವಜನಿಕರ ಕಡತಗಳು ಸಕಾಲಕ್ಕೆ ವಿಲೇವಾರಿಯಾಗದೇ ಬಾಕಿ ಉಳಿಯುತ್ತಿದ್ದವು. ಇದರಿಂದಾಗಿ ಅವಳಿ ನಗರದ ಜನರು ಪರಿತಪಿಸುವಂತಾಗಿತ್ತು. ಇದೀಗ ಈ ಎಲ್ಲ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಸರ್ಕಾರ ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಪೌರಾಯುಕ್ತರನ್ನು ನೇಮಕಗೊಳಿಸಿದೆ.

ನಗರಸಭೆ ಪೌರಾಯುಕ್ತ ರಮೇಶ್ ಜಾಧವ್, ಎಇಇ ವರ್ಧಮಾನ್ ಹುದ್ದಾರ ಹಾಗೂ ನಗರಾಭಿವೃದ್ಧಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಅನಿಲಕುಮಾರ್ ಮುದ್ದಾ ಘನತ್ಯಾಜ್ಯ ವಿಲೇವಾರಿ ಘಟಕದ ಮಣ್ಣು ಸಾಗಾಟದ ಹಣ ಬಿಡುಗಡೆಗೆ ಲಂಚ ಕೇಳಿದ್ದ ಆರೋಪದ ಹಿನ್ನೆಲೆಯಲ್ಲಿ ಎಸಿಬಿ ದಾಳಿ ನಡೆಸಿತ್ತು. ಇದು ನಗರಸಭೆಯ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಗದಗ-ಬೆಟಗೇರಿ ನಗರಸಭೆ ಆಡಳಿತಕ್ಕೆ ಕಪ್ಪುಚುಕ್ಕೆ ಅಂಟಿದ್ದು, ಇದನ್ನೆಲ್ಲಾ ಶಮನಗೊಳಿಸಲು ಭ್ರಷ್ಟಾಚಾರ ರಹಿತ ಆಡಳಿತ ನಡೆಸಬೇಕಿದೆ. ಈ ನಿಟ್ಟಿನಲ್ಲಿ ನೂತನ ಪೌರಾಯುಕ್ತರು ಕಾರ್ಯೋನ್ಮುಖರಾಗಬೇಕು ಎಂಬುವುದು ಅವಳಿ ನಗರದ ಜನರ ನಿರೀಕ್ಷೆಯಾಗಿದೆ.


10 ತಿಂಗಳಲ್ಲಿ ಮೂವರು ಪೌರಾಯುಕ್ತರು

ಎಸಿಬಿ ದಾಳಿ ಬಳಿಕ ಅನಧಿಕೃತ ರಜೆ ಪಡೆದಿದ್ದ ರಮೇಶ್ ಜಾಧವ್‌ಗೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಕಡ್ಡಾಯ ರಜೆ ನೀಡಿ ಅಂದಿನ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಮೇಶ್ ವಟಗಲ್‌ಗೆ ಜುಲೈ 20ರಂದು ಪೌರಾಯುಕ್ತರ ಪ್ರಭಾರ ವಹಿಸಿದ್ದರು. ರಮೇಶ್ ವಟಗಲ್ ಬಳಿಕ ಗುರುಪ್ರಸಾದ್‌ಗೆ ಪೌರಾಯುಕ್ತರ ಪ್ರಭಾರ ವಹಿಸಲಾಗಿತ್ತು. ಅವರು ಅನಾರೋಗ್ಯ ನಿಮಿತ್ತ ರಜೆ ಹೋದ ಹಿನ್ನೆಲೆಯಲ್ಲಿ ನಗರಸಭೆಯ ಬಂಡಿ ಸಾಗಿಸಲು ಎಸ್.ಬಿ.ಮರಿಗೌಡ ಎಂಬುವವರಿಗೆ ಪ್ರಭಾರ ವಹಿಸಲಾಗಿತ್ತು. ಜುಲೈನಿಂದ ಇಲ್ಲಿಯವರೆಗೆ ಮೂವರು ಪೌರಾಯುಕ್ತರಾಗಿ ನೇಮಕಗೊಂಡರೂ ಸಾರ್ವಜನಿಕರ ಗೋಳು ತಪ್ಪಿರಲಿಲ್ಲ.


Spread the love

LEAVE A REPLY

Please enter your comment!
Please enter your name here