‘ಗೆದ್ದವ್ರು ಬೀಗಬೇಕಿಲ್ಲ, ಸೋತವ್ರು ಧೃತಿಗೆಡಬೇಕಿಲ್ಲ!’ ಮಧ್ಯಾಹ್ನ 12 ಗಂಟೆಗೆ ಭವಿಷ್ಯ ನಿರ್ಧಾರ!

0
Spread the love

ಗುರುವಾರ ನಗರಸಭೆ ಚುನಾವಣೆಯ ಫಲಿತಾಂಶ
ಅಭ್ಯರ್ಥಿಗಳ ಎದೆಯಲಿ ಢವಢವ; ಮಧ್ಯಾಹ್ನ 12 ಗಂಟೆಗೆ ಭವಿಷ್ಯ ನಿರ್ಧಾರ!

Advertisement

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ಜನರ ಬಹು ನಿರೀಕ್ಷಿತ ನಗರಸಭೆ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಸುದೀರ್ಘ ಎಂಟು ವರ್ಷಗಳ ಬಳಿಕ ಪ್ರಜಾಪ್ರಭುತ್ವದ ಪರೀಕ್ಷೆ ಎದುರಿಸಿ ಫಲಿತಾಂಶ ಎದುರು ನೋಡುತ್ತಿರುವ ಅಭ್ಯರ್ಥಿಗಳ ಎದೆಯಲಿ ನಡುಕ ಶುರುವಾಗಿದೆ.

ಅವಳಿ ನಗರದ 35 ವಾರ್ಡ್‌ಗಳಲ್ಲಿ ಕಾಂಗ್ರೆಸ್ 35, ಬಿಜೆಪಿ 35, ಜೆಡಿಎಸ್ 12, ಪಕ್ಷೇತರ 51 ಹಾಗೂ ಇನ್ನಿತರ ಪ್ರಾದೇಶಿಕ ಪಕ್ಷಗಳ 12 ಸೇರಿ ಒಟ್ಟು 146 ಜನ ಅಭ್ಯರ್ಥಿಗಳು ಈ ಬಾರಿಯ ನಗರಸಭೆ ಚುನಾವಣೆ ಎದುರಿಸಿದ್ದು, ಮತದಾರರು ಬರೆದ ಭವಿಷ್ಯ ಗುರುವಾರ ಮಧ್ಯಾಹ್ನ 12ಗಂಟೆಗೆ ಅನಾವರಣಗೊಳ್ಳಲಿದೆ.

ಈಗಾಗಲೇ ಹಲವರು ಇಂತಹ ಪರೀಕ್ಷೆಗಳನ್ನು ಎದುರಿಸಿ ಜಯಶೀಲರಾಗಿದ್ದರೆ, ಕೆಲವರಿಗೆ ಅನುತ್ತೀರ್ಣರಾಗಿರುವ ಅನುಭವವಿದೆ. ಹೀಗಾಗಿ ಮರಳಿ ಯತ್ನಿಸು ಎಂಬಂತೆ ಈ ಬಾರಿಯ ನಗರಸಭೆ ಚುನಾವಣೆಯಲ್ಲಿ ಪುನಃ ಸ್ಪರ್ಧಿಸಿದ್ದಾರೆ.

ಬಿಜೆಪಿಯ ಅನಿತಾ ಗಡ್ಡಿ, ಉಷಾ ದಾಸರ, ಶ್ವೇತಾ ದಂಡಿನ, ಅನ್ನದಾನಿ ಮಾರನಬಸರಿ, ಚೆನ್ನಪ್ಪ ದ್ಯಾಂಪೂರ, ರೇಖಾ ಅಳವಂಡಿ, ನಿರ್ಮಲಾ ಕೊಳ್ಳಿ, ಶಿವರಾಜ್‌ಗೌಡ ಹಿರೇಮನಿ ಪಾಟೀಲ್, ವಿಜಯಲಕ್ಷ್ಮೀ ದಿಂಡೂರ, ಪ್ರಕಾಶ ಅಂಗಡಿ, ಲಕ್ಷ್ಮೀ ಶಂಕರ್ ಕಾಕಿ, ಕಾಂಗ್ರೆಸ್‌ನ ಅಶೋಕ ಮಂದಾಲಿ, ಗಣೇಶಸಿಂಗ್ ಬ್ಯಾಳಿ, ಬೋದ್ಲೆಖಾನ್ ಹಮಿದಾಬೇಗಂ, ಲಕ್ಷ್ಮವ್ವ ಭಜಂತ್ರಿ, ಪರವೀನಬಾನು ಮುಲ್ಲಾ, ಶಿವಪ್ಪ ಬಳ್ಳಾರಿ, ಸೈರಾಬಾನು ಬಳ್ಳಾರಿ, ಪಕ್ಷೇತರ ಅಭ್ಯರ್ಥಿಗಳಾದ ಹೇಮಂತ್ ಗಿಡ್ಡಹನಮಣ್ಣವರ, ಸುರೇಶ ಬೆಳದಡಿ, ಮೈಬೂಬಸಾಬ ನದಾಫ್, ಸ್ನೇಹಲತಾ ಕುರ್ತಕೋಟಿ, ಮಹೇಶ್ ರೋಖಡೆ, ಚೇತನ್ ಇರಕಲ್, ಶಿವರಾಜ್ ಕೋರಸ್, ಮೋಹನ್ ಕಟ್ಟಿಮನಿ, ಮಹಾಲಕ್ಷ್ಮೀ ಡಂಬಳ ಸೇರಿದಂತೆ ಹಲವರು ಇದೇ ಮೊದಲ ಬಾರಿಗೆ ನಗರಸಭೆ ಚುನಾವಣೆಯ ರಣರಂಗದಲ್ಲಿ ಸ್ಪರ್ಧಿಸಿದ್ದು, ಪ್ರಜೆಗಳ ಪ್ರಜಾಪ್ರಭುತ್ವ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿಶ್ವಾಸದಲ್ಲಿದ್ದಾರೆ.

ಕಳೆದ ಮೂರು ವರ್ಷಗಳಿಂದ ಜನಪ್ರತಿನಿಧಿಗಳಿಲ್ಲದೆ ನಗರಸಭೆ ಕಚೇರಿ ಬಣಗುಡುತ್ತಿತ್ತು. ಇದರಿಂದ ಸಾಮಾನ್ಯ ಜನರ ಕೆಲಸಗಳು ಸರಿಯಾದ ಸಮಯಕ್ಕೆ ಆಗದೆ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೇ, ವಾರ್ಡ್‌ಗಳಲ್ಲಿನ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿರಲಿಲ್ಲ.

ಅಧಿಕಾರಿಗಳ ಇಂತಹ ಬೇಜವಾಬ್ದಾರಿತನಕ್ಕೆ ಅವಳಿ ನಗರದ ಜನ ರೋಸಿ ಹೋಗಿದ್ದು, ಸದ್ಯ ಜನಪ್ರತಿನಿಧಿಗಳು ಬರುತ್ತಿದ್ದಾರೆಂದು ನಿಟ್ಟುಸಿರು ಬಿಟ್ಟಿದ್ದಾರೆ. ಅದರಂತೆ, ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅವಳಿ ನಗರದ ಜನರನ್ನು ಬೆನ್ನು ಬಿಡದ ಬೇತಾಳನಂತೆ ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆ ಶೀಘ್ರವೇ ಬಗೆಹರಿಸಬೇಕಿದೆ. ನಗರಸಭೆ ವ್ಯಾಪ್ತಿಯ ರಸ್ತೆಗಳ ಸುಧಾರಣೆಯಾಗಬೇಕಿವೆ. ಆಮೆಗತಿಯಲ್ಲಿ ಸಾಗುತ್ತಿರುವ ಒಳಚರಂಡಿ(ಯುಜಿಡಿ) ಕಾಮಗಾರಿಗೆ ವೇಗ ನೀಡಬೇಕಿದೆ. ವಿದ್ಯುತ್ ದೀಪಗಳ ಅಳವಡಿಕೆ ಹಾಗೂ ಮುಳ್ಳಿನ ಗಿಡಗಂಟಿಗಳು ಬೆಳೆದು ಪಾಳು ಬಿದ್ದಿರುವ ಉದ್ಯಾನವನಗಳ ಪುನರ್ ಅಭಿವೃದ್ಧಿಗೊಳಿಸಬೇಕಿದೆ.

‘ಸೋಲೇ ಗೆಲುವಿನ ಸೋಪಾನ ಎಂಬ ನಾಣ್ಣುಡಿಯಂತೆ ನಗರಸಭೆ ಚುನಾವಣೆಯ ಫಲಿತಾಂಶ ಪರ ಅಥವಾ ವ್ಯತಿರಿಕ್ತವಾಗಿ ಬಂದರೂ ಪರಾಜಿತಗೊಂಡ ಅಭ್ಯರ್ಥಿಗಳು ಧೃತಿಗೆಡಬಾರದು. ಅದರಂತೆ, ಗೆದ್ದ ಅಭ್ಯರ್ಥಿಗಳು ಹೆಚ್ಚು ಬೀಗದೆ ಪ್ರಚಾರ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವತ್ತ ಕಾರ್ಯ ಪ್ರವೃತ್ತರಾಗಬೇಕು ಎಂಬುವುದು ಅವಳಿ ನಗರದ ಪ್ರಜ್ಞಾವಂತರ ಆಶಯವಾಗಿದೆ.

12 ಟೇಬಲ್‌ಗಳ ವ್ಯವಸ್ಥೆ

‘ಗದಗ-ಬೆಟಗೇರಿ ನಗರಸಭೆ ಚುನಾವಣೆಯ ಮತ ಎಣಿಕೆ ಕಾರ್ಯಕ್ಕಾಗಿ ಎರಡು ಎಣಿಕೆ ಕೊಠಡಿಗಳನ್ನು ಗುರುತಿಸಲಾಗಿದ್ದು, ಒಂದು ಕೊಠಡಿಯಲ್ಲಿ 6 ಟೇಬಲ್ ಇರಿಸಲಾಗಿದೆ. ಪ್ರತಿ ಚುನಾವಣಾಧಿಕಾರಿಗಳಿಗೆ ಎರಡರಂತೆ ಒಟ್ಟು 12 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಸದರಿ ಟೇಬಲ್‌ಗಳಿಗೆ ಒಬ್ಬ ಮೇಲ್ವಿಚಾರಕರು ಹಾಗೂ ಒಬ್ಬ ಎಣಿಕೆ ಸಹಾಯಕರು ಹೀಗೆ ಒಟ್ಟು 12 ಎಣಿಕೆ ಮೇಲ್ವಿಚಾರಕರು, 13 ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್‌ಬಾಬು ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here