ನಗರಸಭೆಗೆ ದಿಢೀರ್ ಡಿಸಿ ಭೇಟಿ; ಅಧಿಕಾರಿಗಳ ಬೆವರಿಳಿಸಿ, ಶಾಕ್ ನೀಡಿದ ಜಿಲ್ಲಾಧಿಕಾರಿ

0
Spread the love

  • ಹಾಜರಾತಿ ಪುಸ್ತಕದಲ್ಲಿ ಮುಂದಿನ ದಿನಗಳದ್ದು ಸಹಿ ಹಾಕಿದ್ದ ಸಿಬ್ಬಂದಿ
  • ಲಾಸ್ಟ್ ವಾರ್ನಿಂಗ್‌ಗೆ ಬೆಚ್ಚಿ ಬಿದ್ದಿರುವ ನೌಕರರು

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಗದಗ-ಬೆಟಗೇರಿ‌ ನಗರಸಭೆ ಅವ್ಯವಸ್ಥೆ ಹೇಳತೀರದ್ದಾಗಿದ್ದು, ಯಾರೂ ಪ್ರಾಮಾಣಿಕವಾಗಿ ಸರಿಪಡಿಸುವ ಕೆಲಸಕ್ಕೆ ಕೈ ಹಾಕಿರಲಿಲ್ಲ. ಆದರೆ ಈಗ ಡಿಸಿ ಮೆಡಮ್ ನಗರಸಭೆ ಆಡಳಿತವನ್ನು ಸರಿದಾರಿಗೆ ತರಲು ಮುಂದಾಗಿದ್ದಾರೆ.

ಬುಧವಾರ ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ದಿಢೀರನೇ ನಗರಸಭೆಗೆ ಭೇಟಿ ನೀಡಿ ಅಧಿಕಾರಿಗಳಿಗೆ, ಅಲ್ಲಿನ ಸಿಬ್ಬಂದಿಗಳಿಗೆ ಶಾಕ್ ನೀಡಿದರು.

ನಗರಸಭೆ ವ್ಯಾಪ್ತಿಯ ಯಾವುದೇ‌ ಕಡತಗಳಿದ್ದರೂ ಅವುಗಳಿಗೆ ಚಲನೆಯೇ ಇರುತ್ತಿದ್ದಿಲ್ಲ. ಕಾಂಚಾಣದ ಸದ್ದು ಕೇಳುತ್ತಿದ್ದಂತೆಯೇ ಧೂಳು ಮೆತ್ತಿ ಜಡಗೊಂಡಿದ್ದ ಕಡತಗಳಿಗೂ ಚಲನಾಶಕ್ತಿ ಬರುವುದು ಇಲ್ಲಿ ಸಹಜ, ಸಾಮಾನ್ಯ.

ಇಂಥ ಸಾಮಾನ್ಯ ಸಂಗತಿಗಳ ಬಗ್ಗೆ ಮಾಹಿತಿ ಪಡೆದಿದ್ದ ಜಿಲ್ಲಾಧಿಕಾರಿಗಳು, ತಮ್ಮ ಕರ್ತವ್ಯದಲ್ಲಿ ಬಿಡುವಿದ್ದ ಅರ್ಧ ಗಂಟೆ ಅವಧಿಯನ್ನು ನಗರಸಭೆಗೆ ಭೇಟಿ, ಅಧಿಕಾರಿಗಳ ಕಾರ್ಯವೈಖರಿ ಗಮನಿಸಲು ಮೀಸಲಿಟ್ಟರು.

ಜಿಲ್ಲಾಧಿಕಾರಿಗಳು ನಗರಸಭೆಗೆ ಕಾಲಿಡುತ್ತಿದ್ದಂತೆ ಹಾಜರಿದ್ದ ಅಧಿಕಾರಿಗಳು, ಸಿಬ್ಬಂದಿಗಳಿಗೆ ಶಾಕ್. ಡಿಸಿಯವರು ನಗರಸಭೆ ಪ್ರವೇಶಿಸಿದ ತಕ್ಷಣ ಅಧ್ಯಕ್ಷರ ಕೊಠಡಿಗೊ, ಪೌರಾಯುಕ್ತರ ಕೊಠಡಿಗೊ ತೆರಳಿ ಎಸಿ ಕೆಳಗೆ ಕೂತು ಕಡತ ಪರಿಶೀಲನೆ ಮಾಡಬಹುದು ಎಂದು ಅಧಿಕಾರಿಗಳು ಲೆಕ್ಕ ಹಾಕಿದ್ದರು.

ಆದರೆ ಡಿಸಿಯವರು ನಗರಸಭೆಯ ಬಹುತೇಕ ವಿಭಾಗಗಳಿಗೆ ತೆರಳಿ ಸಿಬ್ಬಂದಿ ಜೊತೆ ಮಾತನಾಡುತ್ತಾ ಕಾರ್ಯವೈಖರಿ ಕುರಿತು ಪರಿಶೀಲಿಸುವ ಮೂಲಕ ಅಧಿಕಾರಿಗಳ ಲೆಕ್ಕಾಚಾರ ತಲೆ ಕೆಳಗಾಗುವಂತೆ ಮಾಡಿದರು.

ಜಿಲ್ಲಾಧಿಕಾರಿಗಳು ಪ್ರತಿ ವಿಭಾಗಕ್ಕೂ ಭೇಟಿ ನೀಡಲಾರಂಭಿಸಿದಾಗ ನೌಕರರಿಗೆ ನಡುಕ ಶುರುವಾಯ್ತು. ಯಾಕೆಂದರೆ ಕೆಲವರು ಬೆಳಗ್ಗೆ ಬಂದು ನಾಳೆಯ ಹಾಜರಿಯನ್ನೂ ಹಾಕಿ ನಾಪತ್ತೆಯಾಗಿದ್ದರು. ಆಕಸ್ಮಿಕವಾಗಿ ಡಿಸಿಯವರು ಹಾಜರಾತಿ ಪುಸ್ತಕ ಪರಿಶೀಲಿಸಿದಾಗ ನೌಕರರ ದಿನವಹಿ ಸಹಿಯ ಅಸಲಿಯತ್ತು ಹೊರಬಿತ್ತು.

ಈ ಬಗ್ಗೆ ಪ್ರಶ್ನಿಸಿದಾಗ ನಗರಸಭೆ ಸಿಬ್ಬಂದಿ ಬಳಿ ಉತ್ತರವೇ ಇರಲಿಲ್ಲ. ಇದರಿಂದ ಕೆಂಡಾಮಂಡಲರಾದ ಜಿಲ್ಲಾಧಿಕಾರಿಗಳು, ಇದು ಲಾಸ್ಟ್ ವಾರ್ನಿಂಗ್. ಇನ್ನು ಮುಂದೆ ಹೀಗಾಗಕೂಡದು. ಒಂದೊಮ್ಮೆ ಇದು ಹೀಗೆ ಮುಂದುವರಿದರೆ ಸಂಬಂಧಿಸಿದ ಮೇಲ್ವಿಚಾರಕರನ್ನು ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಹಾಜರಾತಿ ಪುಸ್ತಕದಲ್ಲಿ ನೂರಕ್ಕೆ ನೂರು ಹಾಜರಾತಿ ಇದೆ. ಕಚೇರಿಯಲ್ಲಿ ಮಾತ್ರ ಶೇಕಡಾ 50ರಷ್ಟು ಸಿಬ್ಬಂದಿ ಇರಲಿಲ್ಲ. ಇದು ಡಿಸಿಯವರ ಕೆಂಗಣ್ಣಿಗೆ ಗುರಿಯಾಯಿತು. ನಗರಸಭೆಯ ಅಂದಂದಿನ ಕಡತಗಳು ಆಯಾ ದಿನವೇ ವಿಲೇವಾರಿಯಾಗುವಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದರೆ ನಿರ್ದಾಕ್ಷಿಣ್ಯ ಕ್ರಮ ಕಟ್ಟಿಟ್ಟ ಬುತ್ತಿ ಎಂದು ಅಧಿಕಾರಿಗಳ ಬೆವರಿಳಿಸಿ, ಶಾಕ್ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಉಷಾ ದಾಸರ ಇದ್ದರು.

“ಇವತ್ತು ಅರ್ಧ ಗಂಟೆ ಸಮಯ ಇತ್ತು. ಆ ಸಮಯವನ್ನು ನಗರಸಭೆಯ ಭೇಟಿಗೆ ಬಳಸಿಕೊಂಡೆ. ಮೇಲ್ನೋಟಕ್ಕೆ ಅವ್ಯವಸ್ಥೆ ಕಂಡು ಬಂದಿದೆ. ಕಡತಗಳ ವಿಲೇವಾರಿ ವಿಷಯದಲ್ಲಿ ನಿರ್ಲಕ್ಷ್ಯ ವಹಿಸದಂತೆ ಸೂಚನೆ ನೀಡಿದ್ದೇನೆ. ನಗರಸಭೆಯೊಂದನ್ನೇ ಟಾರ್ಗೆಟ್ ಮಾಡಿ ಭೇಟಿ ನೀಡಿಲ್ಲ. ಸಮಯ ಸಿಕ್ಕಾಗ ಯಾವುದೇ‌ ಇಲಾಖೆ, ಕಚೇರಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಅಧಿಕಾರಿಗಳು ಮೈ ಮರೆತು ಕೆಲಸ ಮಾಡುವ ಬದಲು ಮೈಯೆಲ್ಲಾ ಕಣ್ಣಾಗಿ ಕೆಲಸ ಮಾಡಿದರೆ ಸಾರ್ವಜನಿಕರಿಗೆ ಒಳಿತಾಗುತ್ತದೆ‌.”

ವೈಶಾಲಿ. ಎಂ. ಎಲ್, ಜಿಲ್ಲಾಧಿಕಾರಿಗಳು

Spread the love

LEAVE A REPLY

Please enter your comment!
Please enter your name here