ಕಾಂಗ್ರೆಸ್-ಬಿಜೆಪಿ ಮಧ್ಯೆ ಬಿಗ್ ಫೈಟ್; ಸೆಡ್ಡು‌ ಹೊಡೆದ ಸ್ವತಂತ್ರರು! ಹಣ, ಹೆಂಡ ಹಂಚಿ‌ ಆಮಿಷವೊಡ್ಡಿದ ಅಭ್ಯರ್ಥಿಗಳು?

0
Spread the love

*ಶಾಂತಿಯುತ ‌ಮತದಾನಕ್ಕೆ ಜಿಲ್ಲಾಡಳಿತ ಸಿದ್ಧತೆ

Advertisement

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಅವಳಿ ನಗರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಬಿಗ್ ಫೈಟ್ ನಡೆದಿದ್ದು, ಉಭಯ ಪಕ್ಷಗಳ ನಾಯಕರು ಕೊನೆ ಘಳಿಗೆಯ ವರೆಗೂ ಮತದಾರರ ಮನವೊಲಿಸಲು ಹರಸಾಹಸ ಪಟ್ಟರು.

ಇತ್ತ ರಾಷ್ಟ್ರೀಯ ಪಕ್ಷಗಳ ಸ್ಪರ್ಧಾಳುಗಳಿಗಿಂತ ನಾವೇನೂ ಕಮ್ಮಿಯಿಲ್ಲ ಎಂಬಂತೆ ಕೆಲವು ವಾರ್ಡ್‌ಗಳಲ್ಲಿ ಬಂಡಾಯವೆದ್ದು ಸೆಡ್ಡು ಹೊಡೆದಿರುವ ಪಕ್ಷೇತರ ಅಭ್ಯರ್ಥಿಗಳು ಮತದಾನದ ಹಿಂದಿನ ದಿನವಾದ ಭಾನುವಾರ ಕೊನೆ ಹಂತದ ಕಸರತ್ತು ನಡೆಸಿದರು.

ಅದರಂತೆ, ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿಯೇ ಬೀಡು ಬಿಟ್ಟಿರುವ ಸಚಿವ ಸಿ.ಸಿ. ಪಾಟೀಲ್, ಶಾಸಕ ಕಳಕಪ್ಪ ಬಂಡಿ,ಯುವ ನಾಯಕ ಅನಿಲ ಮೆಣಸಿನಕಾಯಿ ಹಾಗೂ ಕಾಂಗ್ರೆಸ್ ಶಾಸಕ ಎಚ್.ಕೆ. ಪಾಟೀಲ್, ಮಾಜಿ ಶಾಸಕ ಡಿ.ಆರ್. ಪಾಟೀಲ್ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ಅವಳಿ ನಗರದ ಪ್ರಮುಖರ ಮನೆಗಳಿಗೆ ಭೇಟಿ ನೀಡಿ ಮತ ಯಾಚಿಸಿದರು.

ಹಣ, ಸೀರೆ, ಶರ್ಟ್ ಹಂಚಿಕೆ?:

ಬಹಿರಂಗ ಪ್ರಚಾರ ಅಂತ್ಯಗೊಂಡಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಮನೆ ಮನೆಗೆ ಭೇಟಿ ನೀಡಿ ಮತ ಕೋರಿದರು. ಮತ ಯಾಚಿಸುವ ನೆಪದಲ್ಲಿ ಕರಪತ್ರಗಳಲ್ಲಿ ಮುಚ್ಚಿ ಹಣ ಕೊಟ್ಟರೆ, ಇನ್ನು ಕೆಲವರು ಶರ್ಟ್, ಸೀರೆ ಹಂಚಿದ್ದಾರೆ ಎನ್ನಲಾಗಿದೆ. ಒಂದು ವಾರ್ಡ್‌ನಲ್ಲಿ ಅಭ್ಯರ್ಥಿಯೊಬ್ಬರು ಸೀರೆ ಹಂಚಿದರೆ, ಮತ್ತೊಂದು ವಾರ್ಡ್‌ನಲ್ಲಿ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯೇ ಮನೆ ಮನೆಗೆ ಶರ್ಟ್ ಪೀಸ್ ಹಂಚಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಇನ್ನು ಅವಳಿ ನಗರದ 35 ವಾರ್ಡ್‌ಗಳಲ್ಲೂ ಪ್ರತಿ ಮತಕ್ಕೆ ಸುಮಾರು 1,000 ರೂ. ನಿಗದಿಪಡಿಸಿದ್ದಾರೆ, ಕೆಲವೆಡೆ ಕುಟಂಬವೊಂದಕ್ಕೆ ಕನಿಷ್ಠ 5,000 ರೂ. ಹಂಚಿಕೆ ಮಾಡಿದ್ದಾರೆ ಎಂಬ ಆರೋಪಗಳು ಅವಳಿ ನಗರದಲ್ಲಿ ಸದ್ದು ಮಾಡುತ್ತಿವೆ.

ಆಮಿಷವೊಡ್ಡಿ ಮತಭಿಕ್ಷೆ?

ಮತದಾನದ ಮುನ್ನಾ ದಿನ ಗ್ರಾಮೀಣ ಭಾಗಗಳಲ್ಲಿ ‘ಕತ್ತಲ ರಾತ್ರಿ’ ಅಂತಲೇ ಬಿಂಬಿಸಿಕೊಂಡಿದ್ದು, ಈ ದಿನ ಮತದಾರರಿಗೆ ಆಸೆ, ಆಮಿಷಗಳನ್ನು ಒಡ್ಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಅಲ್ಲದೆ, ಮತದಾನಕ್ಕೂ ಮುನ್ನ ಹಣ, ಹೆಂಡ ಹಂಚದಿದ್ದರೆ ಗೆಲ್ಲುವ ಮನೋಭಾವ ಅಭ್ಯರ್ಥಿಗಳಲ್ಲಿ, ಜನರಲ್ಲಿ ಬಲವಾಗಿ ಬೇರೂರಿದೆ. ಹೀಗಾಗಿ ಭಾನುವಾರ (ಡಿ. 26) ಕೆಲವು ವಾರ್ಡ್‌ಗಳಲ್ಲಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಹಾಗೂ ಪಕ್ಷೇತರ ಅಭ್ಯರ್ಥಿಗಳು ಮತದಾರರಿಗೆ ಆಮಿಷವೊಡ್ಡುವ ಮೂಲಕ ಮತ ಯಾಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಜಿಲ್ಲಾಡಳಿತ ಸಕಲ ಸಿದ್ಧತೆ

ಗದಗ-ಬೆಟಗೇರಿ ನಗರಸಭೆ ಸಾರ್ವತ್ರಿಕ ಚುನಾವಣೆಯ ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಅವಳಿ ನಗರ ವ್ಯಾಪ್ತಿಯಲ್ಲಿ 136 ಮತಗಟ್ಟೆಗಳನ್ನು ತೆರೆಯಲಾಗಿದೆ. 69,839 ಪುರುಷರು, 71,703 ಮಹಿಳೆಯರು ಸೇರಿ ಒಟ್ಟು 1,41,542 ಮತದಾರರಿದ್ದಾರೆ.

ಗದಗ-ಬೆಟಗೇರಿ ಎಲ್ಲ ಮತಗಟ್ಟೆ ಸೇರಿಸಿ 150 ಪೋಲಿಂಗ್ ಪಾರ್ಟಿಸ್ ಮಾಡಿದ್ದು, 600 ಅಧಿಕಾರಿ, ಸಿಬ್ಬಂದಿಯನ್ನು ನೇಮಿಸಲಾಗಿದೆ. 136ರಲ್ಲಿ 40 ಸೂಕ್ಷ್ಮ, 96 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. 40 ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಇನ್ನು ಮೇಲ್ವಿಚಾರಣೆಗಾಗಿ ಪ್ರತಿ 5-6 ವಾರ್ಡ್‌ಗಳಿಗೆ 6 ಸೆಕ್ಟರ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ಮಸ್ಟರಿಂಗ್ ಕೇಂದ್ರಕ್ಕೆ ಡಿಸಿ ಭೇಟಿ

ಗದಗ ಬೆಟಗೇರಿ ನಗರಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ (ಡಿ. 26)ದಂದು ನಗರದ ಗುರುಬಸವ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಸ್ಟರಿಂಗ್ ಕಾರ್ಯ ಜರುಗಿತು. ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಭೇಟಿ ನೀಡಿ ವೀಕ್ಷಿಸಿದರು. ಈ ವೇಳೆ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ತಹಸೀಲ್ದಾರ್ ಕಿಶನ್ ಕಲಾಲ್ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here