ಗದ್ದುಗೆ ಏರಲು ಅಡ್ಡದಾರಿ; ಕಾಂಗ್ರೆಸ್‌ಗೆ ಬಿಜೆಪಿ ಗುದ್ದು

0
Spread the love

  • ಅಧಿಕಾರ ಹಿಡಿಯುವುದಕ್ಕಾಗಿ ವಿಧಾನ ಪರಿಷತ್ ಸದಸ್ಯರ ಹೆಸರು ಸೇರ್ಪಡೆಗೆ ಯತ್ನ
  • ಚುನಾವಣೆ ವೇಳೆ ಎಲ್ಲಿದ್ರಿ? ಎಷ್ಟು ಅನುದಾನ ಕೊಟ್ಟಿದ್ದೀರಿ? ನಗರದಲ್ಲಿ ವೃತ್ತಗಳೆಷ್ಟಿವೆ? ಎಂಬಿತ್ಯಾದಿ ಪ್ರಶ್ನೆಗಳ ಪೋಸ್ಟರ್‌ಗಳು ವೈರಲ್

ವಿಜಯಸಾಕ್ಷಿ ಸುದ್ದಿ, ಗದಗ:

Advertisement

ಸೋಮವಾರ ನಡೆಯುವ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಗೆದ್ದು, ಗದುಗಿನ ಗದ್ದುಗೆ ಏರಲು ಸನ್ನದ್ಧಗೊಳ್ಳುತ್ತಿರುವ ಕಾಂಗ್ರೆಸ್ ವಿರುದ್ಧ ಗದಗ-ಬೆಟಗೇರಿ ಅವಳಿ ನಗರದ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹ್ಮದ್, ಮೋಹನ್‌ಕುಮಾರ ಕೊಂಡಜ್ಜಿ, ಪ್ರಕಾಶ್ ರಾಥೋಡ ಹಾಗೂ ರಾಜ್ಯಸಭಾ ಸದಸ್ಯ ಡಾ| ಎಲ್. ಹನುಮಂತಯ್ಯ ಅವರು ತಮ್ಮ ಹೆಸರನ್ನು ಗದಗ ವಿಧಾನಸಭಾ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಅರ್ಜಿ ಸಲ್ಲಿಸಿರುವುದಕ್ಕೆ ಅವಳಿ ನಗರದ ಜನತೆ ಕೈ ನಾಯಕರ ವಿರುದ್ಧ ಹರಿಹಾಯುತ್ತಿದ್ದಾರೆ.

ಅದರಲ್ಲೂ, ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆಗೊಳಿಸುವಂತೆ ಅರ್ಜಿ ಸಲ್ಲಿಸಿರುವ ಕಾಂಗ್ರೆಸ್‌ನ ಮೂವರು ಮೇಲ್ಮನೆ ಸದಸ್ಯರ ವಿರುದ್ಧ ನಗರದ ಜನರು, ಅದರಲ್ಲೂ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆಗೈದಿದ್ದಲ್ಲದೆ, ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಅವು ಹೀಗಿವೆ..

ಎಲ್ಲಿದ್ರಿ? ಎಷ್ಟು ಅನುದಾನ ಕೊಟ್ಟಿದ್ದೀರಿ?:
‘ಮಾನ್ಯ ಮೋಹನ್‌ಕುಮಾರ ಕೊಂಡಜ್ಜಿಯವರೇ, ನಗರಸಭೆಯ ಚುನಾವಣೆಯ ಸಂದರ್ಭದಲ್ಲಿ ಎಲ್ಲಿದ್ರಿ? ತಾವು ತಮ್ಮ ಅಭ್ಯರ್ಥಿಗಳ ಪರ ಪ್ರಚಾರವನ್ನೇ ಮಾಡಲಿಲ್ಲ. ಈಗ ತಾವು 6 ತಿಂಗಳಿಂದ ಗದಗ ನಗರದಲ್ಲಿ ವಾಸವಿದ್ದ ದಾಖಲೆಯನ್ನು ನೀಡುತ್ತೀರಾ? ಅಷ್ಟಕ್ಕೂ ನಗರದ ಅಭಿವೃದ್ಧಿಗೆ ತಾವು ಎಷ್ಟು ಅನುದಾನ ನೀಡಿದ್ದೀರಾ..? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಎಷ್ಟು ಸರ್ಕಲ್ ಇವೆ?:
‘ಮಾನ್ಯ ಹನುಮಂತಯ್ಯನವರೇ ತಾವು ಗದಗ ನಗರದಲ್ಲಿ ವಾಸವಿದ್ದು 6 ತಿಂಗಳಾಗಿದೆ ಅಂತ ದಾಖಲೆ ನೀಡಿದ್ದೀರಿ? ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದು, ಆ ಕ್ಷೇತ್ರದಿಂದ ಆಯ್ಕೆಯಾಗಿ ಬುದ್ಧಿಜೀವಿ ಎಂದು ಬಿರುದು ಪಡೆದ ತಾವು ಈ ಹನುಮಂತನಿಗೆ (ಶಾಸಕ ಎಚ್.ಕೆ. ಪಾಟೀಲ್) ಬಾಗಿದ್ದು ಸರಿಯೇ..? ಜೊತೆಗೆ ಗದಗ-ಬೆಟಗೇರಿ ಅವಳಿ ನಗರದಲ್ಲಿ ಎಷ್ಟು ಸರ್ಕಲ್‌ಗಳಿವೆ ಅಂತ ತಮಗೆ ಗೊತ್ತೆ? ಹಾಗೆ ತಮ್ಮ ಅನುದಾನವನ್ನು ಎಷ್ಟು ನೀಡಿದ್ದೀರಾ?’ ಎಂದು ಪ್ರಶ್ನಿಸಿದ್ದಾರೆ.

ಪೋಸ್ಟರ್‌ಗಳು ವೈರಲ್:
ಅದರಂತೆ, ಪ್ರಕಾಶ್ ರಾಥೋಡಅವರನ್ನೂ ಜನತೆ ಪ್ರಶ್ನಿಸುತ್ತಿದ್ದಾರೆ, ‘ನೀವು ಗದಗನಲ್ಲಿ ಮತ್ತೊಂದು ಮನೆ ಮಾಡಿದ್ದೀರಾ? ಅವಳಿ ನಗರದ ಅಭಿವೃದ್ಧಿಗೆ ತಮ್ಮ ಕೊಡುಗೆ ಏನು? ಎಂದು ಪ್ರಶ್ನಿಸಿರುವ ಪೋಸ್ಟರ್‌ಗಳು ವಾಟ್ಸಾಪ್, ಫೇಸ್‌ಬುಕ್, ಇತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕೈ ನಾಯಕರಿಗೆ ಮುಜುಗರವನ್ನುಂಟು ಮಾಡಿವೆ.

ಇನ್ನು ಗದಗ-ಬೆಟಗೇರಿ ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿಯಲು ಕೈ ನಾಯಕರು ಇಷ್ಟೆಲ್ಲ ಕಸರತ್ತು ನಡೆಸುತ್ತಿದ್ದು, ಭಾರೀ ಕುತೂಹಲ ಕೆರಳಿಸಿದೆ. ಸಂಖ್ಯಾಬಲದಲ್ಲಿ ಸ್ವಲ್ಪವಷ್ಟೇ ಅಂತರವಿರುವ ಕಾರಣ, ಸೋಮವಾರದ ಚುನಾವಣೆಯಲ್ಲಿ ಯಾವ ತಂತ್ರದ ಮೂಲಕ ಯಾರು ಅಧಿಕಾರ ಹಿಡಿಯುತ್ತಾರೆ ಎನ್ನುವುದು ಕಷ್ಟ. ಕಾಂಗ್ರೆಸ್, ಬಿಜೆಪಿ ಮಧ್ಯೆ ಅಧಿಕಾರಕ್ಕಾಗಿ ತೀವ್ರ ಹಣಾಹಣಿ ಏರ್ಪಟ್ಟಿದೆ. ಅದೃಷ್ಟ ಯಾರಿಗೆ ಒಲಿಯುತ್ತದೆ ಎಂಬುದು ಸೋಮವಾರ ಮಧ್ಯಾಹ್ನದ ವೇಳೆಗೆ ಗೊತ್ತಾಗುವುದು.


Spread the love

LEAVE A REPLY

Please enter your comment!
Please enter your name here