
ಜ. 24ರಂದು ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ
ವಿಜಯಸಾಕ್ಷಿ ಸುದ್ದಿ, ಗದಗ:
ಗದಗ-ಬೆಟಗೇರಿ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಜ. 24ರಂದು ಮೂಹೂರ್ತ ನಿಗದಿಯಾಗಿದ್ದು, ಚುನಾವಣೆಗೆ ಇನ್ನೂ 9 ದಿನಗಳು ಬಾಕಿ ಇರುವಾಗಲೇ ಕಾಂಗ್ರೆಸ್ ಚದುರಂಗದಾಟ ಪ್ರಾರಂಭಿಸಿದೆ. ಆಪರೇಷನ್ ಹಸ್ತದ ಮೂಲಕ ಬಿಜೆಪಿಯ ಕೆಲ ಸದಸ್ಯರನ್ನು ತನ್ನತ್ತ ಸೆಳೆದುಕೊಳ್ಳಲು ಎಲ್ಲ ರೀತಿಯ ತಯಾರಿ ನಡೆಸುತ್ತಿದೆ ಎನ್ನಲಾಗುತ್ತಿದೆ.
ನಗರಸಭೆ ಫಲಿತಾಂಶ ಪ್ರಕಟವಾದ ದಿನ (ಡಿ. 30) ‘ಮತ್ತೆ ಅಧಿಕಾರ ಹಿಡಿಯುವುದಕ್ಕಾಗಿ ಆಪರೇಷನ್‌ಗೆ ಮುಂದಾಗುತ್ತಾ ಕಾಂಗ್ರೆಸ್? ಎಂಬ ಬಗ್ಗೆ ‘ವಿಜಯಸಾಕ್ಷಿ ಸವಿಸ್ತಾರವಾದ ಸುದ್ದಿ ಪ್ರಕಟಿಸಿತ್ತು. ಅಲ್ಲದೆ, ಹಲವು ಬಾರಿ ಆಪರೇಷನ್ ಹಸ್ತದ ಬಗ್ಗೆ ವರದಿ ಮಾಡುತ್ತಲೇ ಬಂದಿತ್ತು. ಇದೀಗ ಕಾಂಗ್ರೆಸ್ ನಾಯಕರು ನಗರಸಭೆಯಲ್ಲಿ ತಮ್ಮ ಸಂಖ್ಯಾಬಲವನ್ನು ಏರಿಸಿಕೊಳ್ಳಲು ಆಪರೇಷನ್ ಕಾಂಗ್ರೆಸ್‌ನ ಹಾದಿ ಹಿಡಿದಿದ್ದಾರೆ. ಪುನಃ ನಗರಸಭೆ ಅಧಿಕಾರದ ಗದ್ದುಗೆ ಏರಲು ಎಲ್ಲ ರೀತಿಯ ಕಸರತ್ತು ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಗದಗ-ಬೆಟಗೇರಿ ನಗರಸಭೆಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿರಿಸಿದೆ. ಸ್ವಪಕ್ಷದಲ್ಲಿ ಯಾರ ಪೈಪೋಟಿ ಇಲ್ಲದೆ ಮೊದಲ ಅವಧಿಯಲ್ಲಿಯೇ, ರಾಜಕೀಯ ರಂಗ ಪ್ರವೇಶಿಸಿದ ಪ್ರಥಮ ಹಂತದಲ್ಲಿಯೇ ಸುಲಭವಾಗಿ ಅಧ್ಯಕ್ಷರಾಗಬೇಕೆಂಬ ಕನಸು ಕಾಣುತ್ತಿರುವ 35ನೇ ವಾರ್ಡ್‌ನ ಸದಸ್ಯೆ ಉಷಾ ದಾಸರ ಅವರ ಕನಸಿಗೆ ಕಾಂಗ್ರೆಸ್ ತಣ್ಣೀರೆರಚಲು ರಣತಂತ್ರ ರೂಪಿಸುತ್ತಿದೆ. ಇನ್ನು ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಬಿಜೆಪಿಯ ಆಕಾಂಕ್ಷಿಗಳ ಕನಸು ಕಮರುವ ಸಾಧ್ಯತೆಗಳು ದಟ್ಟವಾಗಿ ಗೋಚರಿಸುತ್ತಿವೆ ಎಂದು ಹೇಳಲಾಗುತ್ತಿದೆ.
ಪಕ್ಷೇತರರು ‘ಕೈ ವಶ?
ಗದಗ-ಬೆಟಗೇರಿ ನಗರಸಭೆಯ 35 ವಾರ್ಡ್‌ಗಳಲ್ಲಿ ಬಿಜೆಪಿ 18, ಕಾಂಗ್ರೆಸ್ 15 ಹಾಗೂ ಇಬ್ಬರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ಅಧಿಕಾರಕ್ಕಾಗಿ ಹಪಾಹಪಿಸುತ್ತಿರುವ ಕಾಂಗ್ರೆಸ್ ನಿರೀಕ್ಷೆಯಂತೆ 17ನೇ ವಾರ್ಡಿನ ಪಕ್ಷೇತರ ಸದಸ್ಯೆ ಆಸ್ಮಾ ಮುನ್ನಾ ರೇಶ್ಮಿ ಅವರನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗುವ ಮೂಲಕ ತನ್ನ ಸದಸ್ಯರ ಸಂಖ್ಯಾಬಲವನ್ನು 16ಕ್ಕೆ ಏರಿಕೆ ಮಾಡಿಕೊಂಡಿದೆ. ಅದರಂತೆ, 21ನೇ ವಾರ್ಡಿನ ಇನ್ನೋರ್ವ ಪಕ್ಷೇತರ ಸದಸ್ಯ ಚುಮ್ಮಿ ನದಾಫ್ ಅವರನ್ನು ಖೆಡ್ಡಾಗೆ ಕೆಡವಲು ಅಸ್ತ್ರ ಪ್ರಯೋಗಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಇನ್ನು ಬಿಜೆಪಿಯ ನಾಲ್ವರು ಸದಸ್ಯರ ಜೊತೆ ನಿರಂತರ ಸಂಪರ್ಕದಲ್ಲಿರುವ ಕಾಂಗ್ರೆಸ್ ನಾಯಕರು ಅವರ ಮನವೊಲಿಸುವಲ್ಲಿ ಯಶಸ್ಸು ಕಂಡಿದ್ದು, ನಾಲ್ವರಲ್ಲಿ ಇಬ್ಬರಾದರೂ ಕೈ ವಶವಾಗೋದು ಖಚಿತ ಎಂದು ಮೂಲಗಳು ತಿಳಿಸಿವೆ. ಆದರೆ, ಇವೆಲ್ಲವಕ್ಕೂ ಜ. 24ರಂದು ಉತ್ತರ ಸಿಗಲಿದೆ.
ವರ್ಕೌಟ್ ಆಗಲಿಲ್ಲ ಅಸ್ಸಾಂ ಪ್ರವಾಸ?

ಆಪರೇಷನ್ ಭೀತಿ ಹಿನ್ನೆಲೆಯಲ್ಲಿ ನಗರಸಭೆ ಚುನಾವಣೆಯಲ್ಲಿ 18 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ತನ್ನ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಶತಪ್ರಯತ್ನ ನಡೆಸುತ್ತಿದೆ. ಇದಕ್ಕಾಗಿ ತನ್ನ ಹಲವು ಸದಸ್ಯರು ಸೇರಿ ಕೆಲ ಬಿಜೆಪಿ ಮುಖಂಡರನ್ನು ಅಸ್ಸಾಂ ಪ್ರವಾಸಕ್ಕೆ ಕರೆದೋಯ್ದಿತ್ತು. ದುರಂತವೆಂದರೆ, ಅಸ್ಸಾಂಗೆ ಹೋಗಿ ಮಜಾ ಮಾಡಿ ಬಂದಿರುವ ಕೆಲ ಸದಸ್ಯರೇ ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ, ಬಿಜೆಪಿಗೆ ಗುಡ್ ಬೈ ಹೇಳುತ್ತಾರೆ ಎಂದು ಹೇಳಲಾಗುತ್ತಿದೆ. ಇದು ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇದರಿಂದಾಗಿ 14 ವರ್ಷಗಳ ಬಳಿಕ ಸಿಕ್ಕ ಸುವರ್ಣಾವಕಾಶಗಳು ಬಹುತೇಕ ಕಮಲದ ‘ಕೈ ತಪ್ಪಲಿದೆ ಎಂಬ ಮಾತುಗಳು ಗದಗ-ಬೆಟಗೇರಿ ಅವಳಿ ನಗರದಲ್ಲಿ ಕೇಳಿ ಬರುತ್ತಿವೆ.