*ನಾಲ್ವರ ವಿಳಾಸ ವರ್ಗಾವಣೆಗೆ ಅರ್ಜಿ ಸಲ್ಲಿಕೆ
ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ, ಚಿತ್ರದುರ್ಗ ಮೂಲದ ವಿಧಾನ ಪರಿಷತ್ ಸದಸ್ಯ ಮೋಹನ್ ಕುಮಾರ ಕೊಂಡಜ್ಜಿ ಅವರ ವಾಸಸ್ಥಳ ಬದಲಾವಣೆಗೆ ಕಾಂಗ್ರೆಸ್ ಮಹಾಪ್ಲ್ಯಾನ್
ದುರಗಪ್ಪ ಹೊಸಮನಿ
ವಿಜಯಸಾಕ್ಷಿ ಸುದ್ದಿ, ಗದಗ:
ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ದಿನಗಣನೆ ಶುರುವಾಗಿದೆ. ಕೇವಲ ಒಂದೇ ಒಂದು ಸದಸ್ಯ ಸ್ಥಾನದ ಅಂತರದಲ್ಲಿರುವ ಬಿಜೆಪಿ, ಕಾಂಗ್ರೆಸ್ ನಡುವಿನ ಬಿಗ್ ಫೈಟ್‌ಗೆ ಮೂರೇ ದಿನ ಬಾಕಿ ಉಳಿದಿದೆ. ಈ ಬೆನ್ನಲ್ಲೇ ನಗರಸಭೆಯ ಸಾಂಪ್ರದಾಯಿಕ ಆಡಳಿತ ಚುಕ್ಕಾಣಿ ಹಿಡಿಯುವದಕ್ಕಾಗಿ ಕಾಂಗ್ರೆಸ್ ವಾಮಮಾರ್ಗ ಹಿಡಿದಿದೆ. ಬಿಜೆಪಿಗೆ ಗದುಗಿನ ಗದ್ದುಗೆ ಬಿಟ್ಟು ಕೊಡಬಾರದೆಂಬ ಹಠ ತೊಟ್ಟಿದೆ.
ನಗರಸಭೆ 35 ಸದಸ್ಯ ಸ್ಥಾನಗಳನ್ನು ಹೊಂದಿದ್ದು, ಅಧಿಕಾರಕ್ಕೇರಲು 18 ಸಂಖ್ಯಾಬಲಬೇಕು. ಫಲಿತಾಂಶದ ದಿನವೇ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿದೆ. ಕಮಲ 18 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ 15 ಸ್ಥಾನ ಜಯಿಸಿದೆ. ಇನ್ನು ಎರಡು ಸ್ಥಾನಗಳು ಪಕ್ಷೇತರ ಪಾಲಾಗಿದ್ದು, ಗೆದ್ದ ಇಬ್ಬರೂ ಪಕ್ಷೇತರ ಸದಸ್ಯರು ಕಾಂಗ್ರೆಸ್ ಬಂಡಾಯ ಸದಸ್ಯರು ಅನ್ನೋದು ವಿಶೇಷ. ಅದರಲ್ಲಿ 17ನೇ ವಾರ್ಡಿನ ಸದಸ್ಯೆ ಆಸ್ಮಾರೇಶ್ಮಿ ಅವರು ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ. ಹೀಗೆ ಒಂದೊಂದಾಗಿ ತನ್ನ ಸಂಖ್ಯಾಬಲ ಹೆಚ್ಚಿಸಿಕೊಳ್ಳುತ್ತಿರುವ ಕಾಂಗ್ರೆಸ್ ಗದಗ ರಾಜಕೀಯ ಇತಿಹಾಸಕ್ಕೆ ಹೊಸ ಮುನ್ನುಡಿ ಬರೆಯಲು ಸಜ್ಜಾಗಿದೆ. ಸದ್ದಿಲ್ಲದೇ ಇದಕ್ಕೆ ಬೇಕಾದ ಎಲ್ಲ ರೀತಿಯ ಪೂರ್ವ ತಯಾರಿ ನಡೆಸಿದೆ.
ಹೌದು, ಪಕ್ಷದ ಹಲವು ವಿಧಾನ ಪರಿಷತ್, ರಾಜ್ಯಸಭಾ ಸದಸ್ಯರ ವಿಳಾಸ (ರೆಸಿಡೆನ್ಶಿಯಲ್) ಬದಲಾವಣೆಗೆ ಕೈ ಹಾಕಿದೆ. ನಗರಸಭೆಯಲ್ಲಿ ತನ್ನ ಸಂಖ್ಯೆ ಹೆಚ್ಚಿಸಿಕೊಳ್ಳುವ ಸಲುವಾಗಿ ರಾಜ್ಯದ ವಿವಿಧ ಜಿಲ್ಲೆಯ ನಾಲ್ವರು ಕಾಂಗ್ರೆಸ್ಸಿಗರನ್ನು ಗದಗಗೆ ಕರೆ ತರುತ್ತಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವತ್ತರಾಗಿರುವ ಜಿಲ್ಲಾ ಕಾಂಗ್ರೆಸ್ ನಾಯಕರು, ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ, ಚಿತ್ರದುರ್ಗ ಮೂಲದ ವಿಧಾನ ಪರಿಷತ್ ಸದಸ್ಯ ಮೋಹನ್ ಕುಮಾರ ಕೊಂಡಜ್ಜಿ ಅವರ ವಾಸಸ್ಥಳ ಬದಲಾವಣೆಗೆ ಮಹಾಪ್ಲ್ಯಾನ್ ರೂಪಿಸಿದೆ. ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿರುವ ಕಾಂಗ್ರೆಸ್ ನಾಯಕರು ಮುಗಳ್ನಗು ಬೀರುತ್ತಿದ್ದಾರೆ.
ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹ್ಮದ್ ಅವರು ಕಳಸಾಪುರ ರಸ್ತೆ, ಮೋಹನ್ ಕುಮಾರ ಕೊಂಡಜ್ಜಿ 28ನೇ ವಾರ್ಡಿನ ಪಂಚಾಕ್ಷರಿ ನಗರ, ಪ್ರಕಾಶ ರಾಥೋಡ್ ಬೆಟಗೇರಿಯ ಅನುರಾಗ ಹೆಲ್ತ್ ಕ್ಯಾಂಪ್ ಹಾಗೂ
ಡಾ.ಎಲ್.ಹನುಮಂತಯ್ಯ 27ನೇ ವಾರ್ಡಿನ ಸಂಭಾಪುರ ರಸ್ತೆಯ ನಿವಾಸಿಗಳನ್ನಾಗಿ ಈ ನಾಲ್ವರ ವಿಳಾಸವನ್ನು ವರ್ಗಾಯಿಸಿಕೊಳ್ಳಲಾಗುತ್ತಿದೆ. ಒಂದು ವೇಳೆ ಈ ನಾಲ್ವರ ವಿಳಾಸ ವರ್ಗಾಯಿಸಿಕೊಂಡಿದ್ದೆ ಆದಲ್ಲಿ, ಕಾಂಗ್ರೆಸ್ 22 ಸಂಖ್ಯಾಬಲದೊಂದಿಗೆ ನಗರಸಭೆ ಗದ್ದುಗೆ ಏರುವುದು ನಿಶ್ಚಿತ.
ಸಂಕನೂರ ಹಾದಿ ಹಿಡಿದ ಕಾಂಗ್ರೆಸ್
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗದ ಕಾರಣ ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ.ಸಂಕನೂರ ಅವರು ಇತ್ತೀಚೆಗಷ್ಟೇ ಗದಗದಿಂದ ಧಾರವಾಡಕ್ಕೆ ವಿಳಾಸ ವರ್ಗಾಯಿಸಿಕೊಂಡಿದ್ದರು. ಇದೀಗ ಗದಗ ಬಿಜೆಪಿಗೆ ನಗರಸಭೆಯಲ್ಲಿ ತುಸು ಹಿನ್ನಡೆಯಾಗುತ್ತದೆ ಎಂಬ ಕಾರಣಕ್ಕೆ ಪುನಃ ವಿಳಾಸ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದಾರೆ. ಇದರಿಂದ ಸಂಸದ, ವಿಧಾನ ಪರಿಷತ್ ಸದಸ್ಯರನ್ನೊಳಗೊಂಡತೆ ಬಿಜೆಪಿ 20 ಸಂಖ್ಯಾಬಲ ಹೊಂದುವ ಸಾಧ್ಯತೆ ಇದೆ.
ಆದರೆ, ಎಸ್.ವ್ಹಿ.ಸಂಕನೂರ ಅವರು ವಿಳಾಸ ವರ್ಗಾಯಿಸಿಕೊಂಡಿರುವುದರಿಂದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಕಳೆದುಕೊಂಡಿದ್ದರು. ಇದೀಗ ಪುನಃ ಪಡೆದುಕೊಳ್ಳಲು ಹಾತೊರೆಯುತ್ತಿದ್ದಾರೆ. ಇದರಿಂದಾಗಿ ಬಿಜೆಪಿ ಸದ್ಯ 19 ಸಂಖ್ಯಾಬಲಕ್ಕೆ ಸಂತೃಪ್ತಿ ಪಟ್ಟಿದೆ. ಆದರೆ, ಸೋಲುಂಡಿರುವ ಕಾಂಗ್ರೆಸ್ ತನ್ನ ಸಂಖ್ಯೆ ಹೆಚ್ಚಿಸುತ್ತಿದೆ.
ಬಿಜೆಪಿಗಿಲ್ಲ ಅಧಿಕಾರದ ಆಸಕ್ತಿ?
ಕಾಂಗ್ರೆಸ್ ಕಳೆದ ಹಲವು ದಿನಗಳಿಂದ ನಗರಸಭೆ ಆಡಳಿತದ ಚುಕ್ಕಾಣಿ ಹಿಡಿಯಬೇಕೆಂಬ ಕಾರಣಕ್ಕೆ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ತನ್ನವರಲ್ಲದ ಸದಸ್ಯರ ಮನವೊಲಿಸಲು ಪ್ರಯತ್ನಿಸುತ್ತಿದೆ. ಇದಿಷ್ಟು ಸಾಲದು ಅಂತಾ ರಾಜ್ಯ ನಾಯಕರ ವಿಳಾಸವನ್ನೇ ವರ್ಗಾಯಿಸಿಕೊಳ್ಳಲು ಹೊರಟಿದೆ. ಇಷ್ಟೆಲ್ಲಾ ತನ್ನ ಕಣ್ಮುಂದೆ ನಡೆಯುತ್ತಿದ್ದರೂ ಬಿಜೆಪಿ ನಾಯಕರು ಮಾತ್ರ ಮೂಕ ಪ್ರೇಕ್ಷಕರಂತೆ ಕಾಂಗ್ರೆಸ್ ನ ರಾಜಕೀಯ ನಾಟಕ ವೀಕ್ಷಿಸುತ್ತಿದ್ದಾರೆ. ಚುನಾವಣೆಗೂ ಮುನ್ನ ಬಿಜೆಪಿ ನಾಯಕರಿಗಿದ್ದ ನಗರಸಭೆ ಅಧಿಕಾರಕ್ಕೇರುವ ಉತ್ಸಾಹ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಅಷ್ಟೇನೂ ಕಾಣಿಸುತ್ತಿಲ್ಲ. ಇದಕ್ಕೆ ಕಾರಣವೂ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸದ್ಯ 30 ತಿಂಗಳವರೆಗೆ ನಗರಸಭೆ ಅಧ್ಯಕ್ಷ ಪರಿಶಿಷ್ಟ ಜಾತಿಗೆ ಮೀಸಲಿದೆ. ಎರಡೂವರೆ ವರ್ಷದ ಬಳಿಕ ಮೀಸಲಾತಿ ಬದಲಾಗಲಿದೆ. ಹೀಗಾಗಿ ಆಯ್ಕೆಗೊಂಡಿರುವ ಕೆಲ ಬಿಜೆಪಿ ಸದಸ್ಯರು ಹಾಗೂ ಮುಖಂಡರಿಗೆ ಎಸ್ಸಿ ಸಮುದಾಯದವರನ್ನು ಅಧ್ಯಕ್ಷ ಪಟ್ಟದಲ್ಲಿ ಕೂರಿಸಲು ಎಳ್ಳಷ್ಟು ಇಷ್ಟವಿಲ್ಲ. ಅದಕ್ಕಾಗಿಯೇ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಕೆಲ ಬಿಜೆಪಿ ನಾಯಕರು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕಿರುವ ಮೀಸಲಾತಿ ಬದಲಾಯಿಸುವಂತೆ ಪಕ್ಷದ ಹಲವು ನಾಯಕರಿಗೆ ಮನವಿ ಮಾಡಿಕೊಂಡಿದ್ದರು.
ಅಲ್ಲದೇ ಅನಿಲ್ ಮೆಣಸಿನಕಾಯಿ ಬೆಂಬಲಿಗ ಮಹೇಶ್ ದಾಸರ ಅವರ ಪತ್ನಿ ಉಷಾ ದಾಸರ ಅಧ್ಯಕ್ಷರಾಗುವುದನ್ನು ಕೈತಪಿಸುವ ಸಲುವಾಗಿಯೇ ಕೆಲ ಬಿಜೆಪಿ ನಾಯಕರು ಕಾಂಗ್ರೆಸ್ ಗೆ ಬೆಂಬಲ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ.
ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಐವರು ಜ.14ರಂದು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಇನ್ನು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸುವಂತೆ ಯಾರು, ಯಾವಾಗ ಬೇಕಾದರೂ ಅರ್ಜಿ ಸಲ್ಲಿಸಬಹುದು. ಆದರೆ, ಸಂಬಂಧಿಸಿದ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಬೇಕೆಂದರೆ ಕನಿಷ್ಠ 6 ತಿಂಗಳಾದರೂ ವಾಸವಾಗಿರಬೇಕು.
ಕಿಶನ್ ಕಲಾಲ್, ತಹಸೀಲ್ದಾರ್. ಗದಗ
ಅರ್ಜಿ ನಮೂನೆಗಳು ಇನ್ನೂ ವಿಲೇವಾರಿ ಆಗಿಲ್ಲ. ಚುನಾವಣಾ ಆಯೋಗದ ನಿಯಮದ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಅರ್ಜಿಗಳನ್ನು ಪರಿಶೀಲಿಸಿದ ಬಳಿಕ ಅರ್ಹವಾಗುತ್ತದೆಯೋ? ಅನರ್ಹಗೊಳ್ಳುತ್ತದೆಯೋ ಎಂಬ ಬಗ್ಗೆ ಮಾಹಿತಿ ನೀಡಲಾಗುವುದು. ಇಲ್ಲಿಯವರೆಗೂ ನಮ್ಮ ಕಚೇರಿಗೆ ಯಾವುದೇ ಆಕ್ಷೇಪಣಾ ಅರ್ಜಿಗಳು ಸಲ್ಲಿಕೆಯಾಗಿಲ್ಲ. ಒಂದು ವೇಳೆ ಟಪಾಲಿನಲ್ಲಿ ಕೊಟ್ಟಿದ್ದಾರೋ ಎಂಬ ಬಗ್ಗೆ ನೋಡುತ್ತೇನೆ.
ರಾಯಪ್ಪ ಹುಣಸಗಿ, ಉಪವಿಭಾಗಾಧಿಕಾರಿ