ವಿಜಯಸಾಕ್ಷಿ ಸುದ್ದಿ, ಗದಗ
ಮಂಗಳವಾರ ಬೆಳ್ಳಂಬೆಳಗ್ಗೆ ನಗರದ ಗ್ರೇನ್ ಮಾರುಕಟ್ಟೆ, ಹಾತಲಗೇರಿ ನಾಕಾ, ಬೆಟಗೇರಿ ಭಾಗವೂ ಸೇರಿದಂತೆ ವಿವಿಧ ಪ್ರದೇಶಗಳಿಗೆ ಗದಗ-ಬೆಟಗೇರಿ ನಗರಸಭಾಧ್ಯಕ್ಷೆ ಉಷಾ ಮಹೇಶ ದಾಸರ ದಿಢೀರ್ ಭೇಟಿ ನೀಡಿ, ಸ್ವಚ್ಛತಾ ಕಾರ್ಯ ಪರಿಶೀಲಿಸಿದರು.
ಈ ವೇಳೆ ಅವಳಿ ನಗರದ ಸ್ವಚ್ಛತೆಯ ಕುರಿತು ಅಸಡ್ಡೆ ತೋರಿದ ದಫೇದಾರ್ ಹಾಗೂ ಪೌರ ಕಾರ್ಮಿಕರನ್ನು ತರಾಟೆಗೆ ತೆಗೆದುಕೊಂಡರು. ಸ್ವಚ್ಛತೆಯ ವಿಷಯದಲ್ಲಿ ಉದಾಸೀನತೆ ತೋರಿದರೆ ಮುಲಾಜಿಲ್ಲದೇ ಶಿಸ್ತಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಇನ್ನೆರಡು ದಿನಗಳಲ್ಲಿ ಗ್ರೇನ್ ಮಾರುಕಟ್ಟೆಯನ್ನು ಸಂಪೂರ್ಣ ಸ್ವಚ್ಛಗೊಳಿಸಬೇಕು ಎಂದು ಸೂಚಿಸಿದರು. ಸುರಕ್ಷತಾ ಪರಿಕರಗಳನ್ನು ಧರಿಸದೇ ಕಾರ್ಯನಿರತರಾಗಿದ್ದ ಪೌರ ಕಾರ್ಮಿಕರನ್ನು ತರಾಟೆಗೆ ತೆಗೆದುಕೊಂಡರು. ಪೌರ ಕಾರ್ಮಿಕರಿಗೆ ದಿನನಿತ್ಯ ಪೂರೈಸಲಾಗುವ ಉಪಹಾರದ ಗುಣಮಟ್ಟದ ಕುರಿತು ಪೌರ ಕಾರ್ಮಿಕರಿಂದ ಮಾಹಿತಿ ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ಬೆಟಗೇರಿಯ ತರಕಾರಿ ಮಾರುಕಟ್ಟೆ ಬಳಿಯಿರುವ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿದ ಉಷಾ ದಾಸರ, ಅಲ್ಲಿಯೇ ಬೆಳಗಿನ ಉಪಹಾರ ಸೇವಿಸಿದರು. ಇಂದಿರಾ ಕ್ಯಾಂಟೀನಿನಲ್ಲಿ ಪ್ರತಿನಿತ್ಯ ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ನೀಡಲಾಗುತ್ತಿರುವ ಆಹಾರವನ್ನು ಸೇವಿಸಿ ಅದರ ಗುಣಮಟ್ಟವನ್ನು ಪರೀಕ್ಷಿಸಿದರು.
ಪೌರಕಾರ್ಮಿಕರಿಗೆ ಗುಣಮಟ್ಟದ ಆಹಾರವನ್ನು ನೀಡುವಂತೆ ಕಟ್ಟುನಿಟ್ಟಾಗಿ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಅನಿಲ್ ಅಬ್ಬಿಗೇರಿ, ಬಿಜೆಪಿ ಮುಖಂಡ ಭೀಮಸಿಂಗ್ ರಾಥೋಡ ಇದ್ದರು.