ಗದಗ-ಬೆಟಗೇರಿ ನಗರಸಭೆ ಉಪಾಧ್ಯಕ್ಷ ಪಟ್ಟ ಯಾರಿಗೆ?; ಬಿಜೆಪಿ ಇಬ್ಬರು ಸದಸ್ಯರು ಹೈಜಾಕ್ !

0
Spread the love

*ಗದಗ-ಬೆಟಗೇರಿ ನಗರಸಭೆ ಉಪಾಧ್ಯಕ್ಷ ಪಟ್ಟಕ್ಕಾಗಿ ಶ್ವೇತಾ ದಂಡಿನ, ಸುನಂದಾ ಬಾಕಳೆ, ಶೈಲಾ ಬಾಕಳೆ ಮಧ್ಯೆ ಪೈಪೋಟಿ

Advertisement

ದುರಗಪ್ಪ ಹೊಸಮನಿ:

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಚುನಾವಣೆಯಲ್ಲಿ 14 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಭದ್ರಕೋಟೆ ಬೇಧಿಸಿರುವ ಕಮಲ ಪಡೆಯಲ್ಲೀಗ ಅಧ್ಯಕ್ಷರು ಯಾರಾಗುತ್ತಾರೆ? ಎಂಬ ಬಗ್ಗೆ ಸ್ಪಷ್ಟತೆ ಇದೆ. ಆದರೆ, ಉಪಾಧ್ಯಕ್ಷ ಕುರ್ಚಿ ಯಾರ ಪಾಲಾಗಲಿದೆ ಎಂಬ ಚರ್ಚೆ ಶುರುವಾಗಿದೆ.

ಚುನಾವಣಾ ಪೂರ್ವದಲ್ಲಿಯೇ ನಗರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿರಿಸಿದೆ. ಹೀಗಾಗಿ ಕಾಂಗ್ರೆಸ್, ಬಿಜೆಪಿಯಲ್ಲಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆದಿತ್ತು. ಸದ್ಯ 18 ಜನ ಬಿಜೆಪಿ ಸದಸ್ಯರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಉಷಾ ಮಹೇಶ ದಾಸರ ಒಬ್ಬರೇ ಇದ್ದಾರೆ. ಹೀಗಾಗಿ ಯಾರೊಬ್ಬರ ಪೈಪೋಟಿ ಇರದ ಕಾರಣ ಸುಲಭವಾಗಿ ನಗರಸಭೆ ಅಧ್ಯಕ್ಷರಾಗಲಿದ್ದಾರೆ.

ನಗರಸಭೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿದೆ. ಬಿಜೆಪಿಯಿಂದ ಆಯ್ಕೆಯಾದ ಸದಸ್ಯರಲ್ಲಿ ಕೆಲವರ ಮಧ್ಯೆ ಉಪಾಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಅದರಲ್ಲಿ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯದರ್ಶಿ ರವಿ ದಂಡಿನ ಅವರ ಪುತ್ರಿ 11ನೇ ವಾರ್ಡಿನ ಸದಸ್ಯೆ ಶ್ವೇತಾ ದಂಡಿನ ಹಾಗೂ ಹಿಂದುಳಿದ ವರ್ಗಗಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಬಾಕಳೆ ಅವರ ಪತ್ನಿ 32ನೇ ವಾರ್ಡಿನ ಸುನಂದಾ ಬಾಕಳೆ ಮುಂಚೂಣಿಯಲ್ಲಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರೊಂದಿಗೆ ವೈಯಕ್ತಿಕವಾಗಿ ಉತ್ತಮ ಬಾಂಧವ್ಯ ಹೊಂದಿರುವ ರವಿ ದಂಡಿನ ಅವರು ಮೊದಲ ಬಾರಿಗೆ ರಾಜಕೀಯ ರಂಗ ಪ್ರವೇಶಿಸಿರುವ ತಮ್ಮ ಮಗಳನ್ನು ಉಪಾಧ್ಯಕ್ಷ ಪಟ್ಟದಲ್ಲಿ ಕೂರಿಸಬೇಕೆಂದು ಪಣತೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಅದರಂತೆ, 31ನೇ ವಾರ್ಡಿನ ಶೈಲಾ ನರಸಿಂಗಸಾ ಬಾಕಳೆ ಸಹಿತ ಉಪಾಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದಾರೆ ಎನ್ನಲಾಗುತ್ತಿದ್ದು, ಕೊನೆ ಘಳಿಗೆಯಲ್ಲಿ ಯಾರಿಗೆ ಉಪಾಧ್ಯಕ್ಷ ಪಟ್ಟ ಒಲಿಯಲಿದೆ ಎಂಬುವುದನ್ನು ಕಾದು ನೋಡಬೇಕಿದೆ.

ಬಿಜೆಪಿಯ ಇಬ್ಬರು ಸದಸ್ಯರು ಹೈಜಾಕ್?

ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನಗಳಲ್ಲಿ ಗೆಲುವು ಸಾಧಿಸಿ, ಅಧಿಕಾರ ಹಿಡಿಯುವಲ್ಲಿ ಸೋತು ಹತಾಶೆಗೊಂಡಿದೆ. ಹೀಗಾಗಿ ಶತಾಯಗತಾಯ ನಗರಸಭೆ ಆಡಳಿತ ಚುಕ್ಕಾಣಿ ಹಿಡಿಯಲೇಬೇಕೆಂದು ರಣತಂತ್ರ ರೂಪಿಸುತ್ತಿದೆ. ಇತ್ತ ಮ್ಯಾಜಿಕ್ ಸಂಖ್ಯೆ 18 ಸ್ಥಾನಗಳಲ್ಲಿ ಜಯಿಸಿರುವ ಬಿಜೆಪಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಭರ್ಜರಿ ಸಿದ್ಧತೆ ನಡೆಸಿದೆ. ಈ ಬೆನ್ನಲ್ಲೇ ಆಪರೇಷನ್ ಹಸ್ತ ಮೂಲಕ ಬಿಜೆಪಿಯ ಇಬ್ಬರು ಸದಸ್ಯರನ್ನು ಹೇಗಾದರೂ ಮಾಡಿ ತನ್ನತ್ತ ಸೆಳೆಯಲು ಕಾರ್ಯತಂತ್ರ ರೂಪಿಸುತ್ತಿದೆ ಎಂಬ ಮಾತುಗಳು ಅವಳಿ ನಗರದಲ್ಲಿ ಕೇಳಿ ಬರುತ್ತಿದ್ದು, ಇದು ಅವಳಿ ನಗರದ ಜನರಲ್ಲಿ ಹಾಗೂ ನಗರಸಭೆ ಸದಸ್ಯರಲ್ಲಿ ಗೊಂದಲ ಮೂಡಿಸುವ ಸಲುವಾಗಿ ಹಬ್ಬಿರುವ ರೂಮರ್ ಎಂದೂ ಹೇಳಲಾಗುತ್ತಿದೆ.

ಸದ್ಯಕ್ಕೆ ತಟಸ್ಥರಿದ್ದೇವೆ. ನಮ್ಮ ಗೆಲುವಿಗಾಗಿ ತನು ಮನ ಧನದಿಂದ ಶ್ರಮಿಸಿದ ವಾರ್ಡಿನ ಮತದಾರರ, ವಿವಿಧ ಸಮಾಜದ ಮುಖಂಡರ, ಗೆಳೆಯರ, ಬೆಂಬಲಿಗರಮ ಅಭಿಮಾನಿಗಳ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು.

ಮೆಹಬೂಬ(ಚುಮ್ಮಿ) ನದಾಫ್ ಹಾಗೂ ಆಸ್ಮಾ ಮುನ್ನಾ ರೇಶ್ಮಿ, ವಿಜೇತ ಪಕ್ಷೇತರರು

ಇಲ್ಲಿಯವರೆಗೂ ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಪಕ್ಷದವರು ಒಳ್ಳೆಯ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅದಕ್ಕೆ ನಮ್ಮ ಸಹಮತವಿರುತ್ತದೆ. ಉಪಾಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ನಡೆಸಿಲ್ಲ. ಪಕ್ಷದ ಹಿರಿಯರು, ಮುಖಂಡರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವು ಬದ್ಧವಾಗಿದ್ದೇವೆ.

ರವಿ ದಂಡಿನ, ಬಿಜೆಪಿ ಹಿಂದುಳಿದ ಮೋರ್ಚಾ ರಾಜ್ಯ ಕಾರ್ಯದರ್ಶಿ

Spread the love

LEAVE A REPLY

Please enter your comment!
Please enter your name here