ಬಿಜೆಪಿ ವನವಾಸ ಅಂತ್ಯ? ಮಿಷನ್ -30 ಹೆಸರಿನಲ್ಲಿ ಸಂಘಟಿತ ಪ್ರಚಾರದಿಂದ ಗೆದ್ದ ಕೇಸರಿ ಪಡೆ, ಕೈ ಕೊಟ್ಟ ಮುಖಂಡರು

0
Spread the love

ದುರಗಪ್ಪ ಹೊಸಮನಿ:

Advertisement

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ- ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಅವಳಿ ನಗರದ 35 ವಾರ್ಡ್‌ಗಳ ಪೈಕಿ 18 ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ 14 ವರ್ಷಗಳ ವನವಾಸದಿಂದ ಬಿಜೆಪಿ ಮುಕ್ತಿ ಹೊಂದಿದಂತಾಗಿದ್ದು, ಕೇವಲ 15 ವಾರ್ಡ್‌ಗಳಲ್ಲಿ ಜಯಿಸಿರುವ ಕಾಂಗ್ರೆಸ್‌ಗೆ ಭಾರೀ ಮುಖಭಂಗವಾಗಿದೆ.

ಕಳೆದ ನಗರಸಭೆ ಚುನಾವಣೆಯಲ್ಲಿ ಹೀನಾಯ ಸೋಲುಂಡಿದ್ದ ಬಿಜೆಪಿ ಈ ಬಾರಿ 18 ಸ್ಥಾನ ಗೆದ್ದು ಬೀಗುತ್ತಿದ್ದರೆ, ಈ ಹಿಂದೆ 23 ಸ್ಥಾನಗಳೊಂದಿಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಕೇವಲ 15 ಸ್ಥಾನಗಳನ್ನಷ್ಟೇ ಪಡೆಯಲು ಶಕ್ತವಾಗಿದೆ. ಅದರಂತೆ, ಈ ಸಲ ಇಬ್ಬರು ಪಕ್ಷೇತರ ಅಭ್ಯರ್ಥಿಗಳಿಗೆ ಜಾಕ್‌ಪಾಟ್ ಹೊಡೆದಿದೆ.

ಕಾಂಗ್ರೆಸ್ ಸೋಲಿಗೆ ಕಾರಣವೇನು?

ಜಿಲ್ಲೆಯ ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಹಿಡಿತ ಸಾಧಿಸಿರುವ ಕಾಂಗ್ರೆಸ್ ಪಕ್ಷ, ಈ ಬಾರಿ ನಗರಸಭೆ ಅಧಿಕಾರದ ಚುಕ್ಕಾಣೆ ಹಿಡಿಯುವಲ್ಲಿ ವಿಫಲವಾಗಿದೆ. ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ನಗರಸಭೆಯಲ್ಲಿ ಹಿಡಿತ ಸಾಧಿಸಿತ್ತು. ಯಾವ ಪಕ್ಷಕ್ಕೂ ಅಧಿಕಾರ ಬಿಟ್ಟಕೊಡದೇ ನಿರಂತರವಾಗಿ ಆಡಳಿತ ನಡೆಸಿತ್ತು. ಆದರೆ, ಇಷ್ಟು ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್‌ನಿಂದ ಅವಳಿ ನಗರದ ಜನ ನಿರೀಕ್ಷಿಸದಷ್ಟು ಅಭಿವೃದ್ಧಿ ಕೆಲಸಗಳಾಗಿಲ್ಲ. ಅಲ್ಲದೇ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳ ಸ್ಪರ್ಧೆ, ಪಕ್ಷದಲ್ಲಿನ ಒಳಜಗಳ, ಪಕ್ಷದಲ್ಲಿದ್ದುಕೊಂಡೆ ಬೇರೆ ಪಕ್ಷ, ಪಕ್ಷೇತರ ಅಭ್ಯರ್ಥಿಗಳಿಗೆ ಬಾಹ್ಯ ಬೆಂಬಲ, ಗೌಡರ ಕುಟುಂಬದ ಕುಡಿಯೊಂದು ಪಕ್ಷೇತರ ಅಭ್ಯರ್ಥಿಗಳ ಪರ ಪ್ರಚಾರ ಮಾಡಿರುವುದು, ಗೆದ್ದೇ ಗೆಲ್ಲಿಸುತ್ತಾರೆ ಎಂಬ ಅಹಂಭಾವ, ಪಕ್ಷದ ಕಾರ್ಯಕರ್ತರು ಹಾಗೂ ಅವಳಿ ನಗರದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದೇ ಕಾಂಗ್ರೆಸ್ ಸೋಲಿಗೆ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ.

ಬಿಜೆಪಿ ಗೆಲ್ಲಿಸಿದ ಅಂಶಗಳು

ಹಲವು ವರ್ಷಗಳಿಂದ ನಗರಸಭೆ ಅಧಿಕಾರಕ್ಕಾಗಿ ಕನವರಿಸುತ್ತಿದ್ದ ಬಿಜೆಪಿಯ ಕನಸು ಕಡೆಗೂ ಈಡೇರಿದೆ. ಅನೇಕ ವರ್ಷಗಳಿಂದ ಒಂದೇ ಪಕ್ಷ ಅಧಿಕಾರದಲ್ಲಿದ್ದರಿಂದ ಅಭಿವೃದ್ಧಿ ನಿರೀಕ್ಷಿಸುವುದು ಜನರಿಗೆ ಕಷ್ಟವಾಗಿತ್ತು. ಕಾಂಗ್ರೆಸ್ ಅಷ್ಟು ವರ್ಷ ಆಡಳಿತದಲ್ಲಿದ್ದರೂ ಅವಳಿ ನಗರದ ಜನರಿಗೆ ಕುಡಿಯುವ ನೀರು ಸಮರ್ಪಕವಾಗಿ ಪೂರೈಸಲಿಲ್ಲ. ನಗರಸಭೆ ವ್ಯಾಪ್ತಿಯ ರಸ್ತೆಗಳು ನಿರೀಕ್ಷಿಸಿದಷ್ಟು ಸುಧಾರಣೆ ಕಾಣಲಿಲ್ಲ. ಉದ್ಯಾನವನಗಳ ಪುನರುತ್ಥಾನವಾಗಲಿಲ್ಲ. ನಗರದ ಸೌಂದರ್ಯಕರಣಕ್ಕೆ ಆದ್ಯತೆ ನೀಡಲಿಲ್ಲ. ನಗರದ ನೈರ್ಮಲ್ಯ ಕಾಪಾಡಲಿಲ್ಲ. ಹೀಗಾಗಿ ಹೊಸ ಪಕ್ಷಕ್ಕೆ ಅಧಿಕಾರ ನೀಡಿದರೆ ಅಭಿವೃದ್ಧಿ ನೀರೀಕ್ಷಿಸಬಹುದು ಎಂಬ ಭಾವನೆಯಿಂದಾಗಿ ಜಿಡ್ಡು ಹಿಡಿದ ಕಾಂಗ್ರೆಸ್ ಆಡಳಿತದಿಂದ ಬೇಸತ್ತಿದ್ದ ಜನರು ಈ ಬಾರಿ ಬದಲಾವಣೆ ಬಯಿಸಿ ಬಿಜೆಪಿಯತ್ತ ಹೆಚ್ಚು ಒಲವು ತೋರಿದ್ದಾರೆ. ಇನ್ನು ಕಮಲ ಪಾಳೆಯದಲ್ಲಿ ಮೂಲ ಹಾಗೂ ವಲಸಿಗರು ಎಂಬ ಎರಡು ಬಣಗಳಿದ್ದು, ಚುನಾವಣಾ ಪೂರ್ವದಲ್ಲಿ ವೈಷಮ್ಯ, ವೈಮನಸ್ಸು ಮರೆತು ಜನರ ಭಾವನೆಗಳಿಗೆ ಪೂರಕವಾಗಿ ಸಂಘಟನಾತ್ಮಕವಾಗಿ ಚುನಾವಣೆ ಎದುರಿಸಿದ್ದೇ ಬಿಜೆಪಿ ಗೆಲುವಿಗೆ ಕಾರಣ ಎಂದು ಬಣ್ಣಿಸಲಾಗುತ್ತಿದೆ.

ಶ್ರೀರಾಮುಲು, ಅನಿಲ್ ಕ್ಯಾಂಪೇನ್ ಫಲಶೃತಿ!?

ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಹಾಗೂ ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಅವಳಿ ನಗರದಲ್ಲಿ ಭರ್ಜರಿ ಪ್ರಚಾರ ನಡೆಸುವ ಮೂಲಕ ಸ್ಟಾರ್ ಪ್ರಚಾರಕರಾಗಿ ಗುರುತಿಸಿಕೊಂಡಿದ್ದರು. ಶ್ರೀರಾಮುಲು ಬಹಿರಂಗ ಪ್ರಚಾರ ನಡೆಸಿದರೆ, ಅನಿಲ್ ಮೆಣಸಿನಕಾಯಿ ಮನೆ ಮನೆಗಳಿಗೆ ಭೇಟಿ ನೀಡಿ ಮತಭಿಕ್ಷೆ ನಡೆಸಿದ್ದರು. ಈ ವೇಳೆ ಜನರಿಂದ ಅಲ್ಲಿನ ಸ್ಥಳೀಯ ಸಮಸ್ಯೆಗಳ ಬಗ್ಗೆ ಸ್ಥಳೀಯರಿಂದಲೇ ಅರಿತುಕೊಳ್ಳುವ ಮೂಲಕ ಜನರ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರಿದರು. ಈ ಇಬ್ಬರೂ ನಾಯಕರ ಪ್ರಚಾರದಿಂದಾಗಿ ಬಿಜೆಪಿಯ ಅಭ್ಯರ್ಥಿಗಳಲ್ಲಿ ಹೆಚ್ಚು ಉತ್ಸಾಹ ನೀಡಿತ್ತು. ಗೆಲ್ಲುವ ನಿರೀಕ್ಷೆಗಳನ್ನು ಹೆಚ್ಚಿಸಿತ್ತು. ಹೀಗಾಗಿ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಬಂದಿದೆ ಎನ್ನುತ್ತವೆ ಬಿಜೆಪಿ ಮೂಲಗಳು.

ಸುಳಿಯಲಿಲ್ಲ ಕಾಂಗ್ರೆಸ್ ಮುಖಂಡರು

ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿದ್ದರೂ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ್, ಶಾಸಕ ಕಳಕಪ್ಪ ಬಂಡಿ, ಎಸ್.ವಿ. ಸಂಕನೂರ ಅವರು ಬಿಡುವು ಮಾಡಿಕೊಂಡು ಬಂದು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡುವ ಮೂಲಕ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವ ಕುರಿತು ಜನರಲ್ಲಿ ಭರವಸೆ ಮೂಡಿಸಿ ಯಶಸ್ವಿಯಾದರು. ಆದರೆ, ಕಾಂಗ್ರೆಸ್‌ನಲ್ಲಿ ಶಾಸಕ ಎಚ್.ಕೆ. ಪಾಟೀಲ್ ಹಾಗೂ ಮಾಜಿ ಶಾಸಕ ಡಿ.ಆರ್. ಪಾಟೀಲ್ ಅವರನ್ನು ಹೊರತುಪಡಿಸಿದರೆ ರಾಜ್ಯದ ಯಾವೊಬ್ಬ ನಾಯಕರೂ ಇತ್ತ ಸುಳಿಯಲಿಲ್ಲ. ಇಲ್ಲೇ ನೂರಾರು ಕಿ.ಮೀ. ದೂರದ ಬೆಳಗಾವಿಯಲ್ಲಿದ್ದರೂ ಯಾರೊಬ್ಬರೂ ಅವಳಿ ನಗರಕ್ಕೆ ಬಂದು ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿಲ್ಲ. ಅಲ್ಲದೇ, ದೊಡ್ಡಮಟ್ಟದ ಈ ಇಬ್ಬರು ನಾಯಕರನ್ನು ಬಿಟ್ಟರೆ, ಸ್ಥಳೀಯ ನಾಯಕರ‍್ಯಾರು ಮತದಾರರ ಮೇಲೆ ಪ್ರಭಾವ ಬೀರಲಿಲ್ಲ. ಪಕ್ಷದ ಪ್ರಣಾಳಿಕೆ ಜನರ ಮನವನ್ನು ಅಷ್ಟಾಗಿ ತಲುಪದಿರುವುದೇ ಕಾಂಗ್ರೆಸ್ ಸೋಲಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.


Spread the love

LEAVE A REPLY

Please enter your comment!
Please enter your name here