ಜವಳಗಲ್ಲಿ ಜಗಳದಲ್ಲಿ ಏಕಾಂಗಿಯಾದರೇ ಅನಿಲ್ ಮೆಣಸಿನಕಾಯಿ!; ಗಪ್‌ಚುಪ್ ಆದ ಬಿಜೆಪಿ ಸದಸ್ಯರು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ:

Advertisement

ಗದಗ-ಬೆಟಗೇರಿ ಅವಳಿ ನಗರದ ಜವಳಗಲ್ಲಿ ಜಗಳದಲ್ಲಿ ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಏಕಾಂಗಿಯಾಗಿದ್ದಾರೆ. ಜವಳಗಲ್ಲಿಯ ರಾಜಕಾಲುವೆ ಮೇಲೆ ಅನಧಿಕೃತವಾಗಿ ಚಿಕನ್, ಮಟನ್, ಮೀನು ಸೇರಿದಂತೆ ಮಾಂಸದ ಅಂಗಡಿಗಳನ್ನು ತೆರವುಗೊಳಿಸಬೇಕೆಂಬ ಅನಿಲ್ ಮೆಣಸಿನಕಾಯಿ ಹೇಳಿಕೆ ಬೆನ್ನಲ್ಲೆ, ಕೆಲ ಮುಖಂಡರು, ನಗರಸಭೆಯ ಕಾಂಗ್ರೆಸ್ ಸದಸ್ಯರು ಮುಗಿಬಿದ್ದಿದ್ದು, ಯಾವೊಬ್ಬ ಬಿಜೆಪಿ ನಾಯಕರು ಅನಿಲ್ ನೆರವಿಗೆ ಬಾರದಿರುವುದು ಚರ್ಚೆಗೆ ಕಾರಣವಾಗಿದೆ.

ಏ.೨ರಂದು ಸುದ್ದಿಗೋಷ್ಠಿ ನಡೆಸಿ ಜವಳಗಲ್ಲಿ ತೆರವುಗೊಳಿಸುವಂತೆ ಹೇಳಿಕೆ ನೀಡಿದ ಬೆನ್ನಲ್ಲೇ, ವಾಲ್ಮೀಕಿ ಸಮಾಜದ ಮುಖಂಡ ಬಸವರಾಜ್ ಬೆಳದಡಿ, ನಗರಸಭೆಯ ಕಾಂಗ್ರೆಸ್ ಪಕ್ಷದ ಸದಸ್ಯರು ಅನಿಲ್ ಮೆಣಸಿಕಾಯಿ ವಿರುದ್ಧ ಸರಣಿಯಾಗಿ ಪ್ರತಿಭಟನೆ, ಪತ್ರಿಕಾಗೋಷ್ಟಿ ನಡೆಸಿ ಏಕವಚನದಲ್ಲಿ ಪದಪ್ರಯೋಗ ಮಾಡಿದರೂ ನಗರಸಭೆ ಬಿಜೆಪಿ ಅಧ್ಯಕ್ಷರು, ಸದಸ್ಯರು, ಪಕ್ಷದ ಮುಖಂಡರು ತುಟಿ ಬಿಚ್ಚಿ ಮಾತನಾಡುತ್ತಿಲ್ಲ. ಅಲ್ಲದೆ, ನೆರವಿಗೆ ಬರುತ್ತಿಲ್ಲ, ಅನಿಲ್ ಮೆಣಸಿನಕಾಯಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳದಿರುವುದು ಬಿಜೆಪಿ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ.

ಸುಮಾರು ಮೂರು ವರ್ಷಗಳ ಬಳಿಕ ಕಳೆದ ಡಿಸೆಂಬರ್‌ನಲ್ಲಿ ನಡೆದ ಗದಗ-ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕೆಂದು ಟೊಂಕಕಟ್ಟಿ ನಿಂತಿದ್ದ ಅನಿಲ್ ಮೆಣಸಿನಕಾಯಿ, ಹದಿನಾಲ್ಕು ವರ್ಷಗಳ ಬಳಿಕ ಕಾಂಗ್ರೆಸ್ ಭದ್ರಕೋಟೆಯನ್ನು ಬೇಧಿಸಿ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಸದ್ಯ ಅನಿಲ್ ಮೆಣಸಿನಕಾಯಿ ಅವರ ಹೇಳಿಕೆಯನ್ನು ಕಮಲ ಪಾಳಯದಲ್ಲಿ ಸಮರ್ಥಿಸಿಕೊಳ್ಳದೆ ಸುಮ್ಮನಿರುವುದು ವಿರೋಧ ಪಕ್ಷಕ್ಕೆ ವರವಾಗಿ ಪರಿಣಮಿಸಿದೆ.

ಅನಿಲ್ ಮೆಣಸಿನಕಾಯಿ ಮತ್ತು ನಗರಸಭೆ ಕಾಂಗ್ರೆಸ್ ಸದಸ್ಯರ ವಿರುದ್ಧ ವಾಗ್ಯುದ್ಧ ಶುರುವಾಗಿದೆ. ಇಷ್ಟೆಲ್ಲಾ ಕಣ್ಮುಂದೆಯೇ ನಡೆಯುತ್ತಿದ್ದರೂ ಶುಕ್ರವಾರ ನಗರಸಭೆ ಅಧ್ಯಕ್ಷರ ಪತಿ ಮಹೇಶ್ ದಾಸರ ದೇವರ ಹೆಸರಿನಲ್ಲಿ ಕೊಟ್ಟ ಪಾರ್ಟಿಯಲ್ಲಿ ಬಂದಿದ್ದ ಕೆಲ ಕಾಂಗ್ರೆಸ್‌ನ ಸದಸ್ಯರ ಜೊತೆಗೆ ಬಿಜೆಪಿಯ ಬಹುತೇಕ ಸದಸ್ಯರು ಇದ್ದದ್ದು ಅವಳಿ ನಗರದ ಜನರ ಹುಬ್ಬೇರುವಂತೆ ಮಾಡಿದೆ.

ನಗರಸಭೆ ಚುನಾವಣೆ ಸಂದರ್ಭದಲ್ಲಿ ಕಾಲಿಗೆ ಚಕ್ರಕಟ್ಟಿಕೊಂಡು ಅವಳಿ ನಗರದ ೩೫ ವಾರ್ಡ್‌ಗಳಲ್ಲೂ ಅನಿಲ್ ಮೆಣಸಿನಕಾಯಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕೈಗೊಂಡಿದ್ದರು. ಅಲ್ಲದೆ, ಪ್ರಚಾರದ ವೇಳೆ ಗೆದ್ದೇ ಗೆಲ್ಲುತ್ತೇವೆಂಬ ವಿಶ್ವಾಸ ವ್ಯಕ್ತಪಡಿಸಿದ್ದರು. ಅದರಂತೆ, ೧೪ ವರ್ಷಗಳ ಬಳಿಕ ನಗರಸಭೆ ಗದ್ದುಗೆ ಹಿಡಿದು ಕಾಂಗ್ರೆಸ್‌ನ ಭದ್ರಕೋಟೆಯಲ್ಲಿಯೇ ಕಾಂಗ್ರೆಸ್‌ಗೆ ಮಣ್ಣು ಮುಕ್ಕಿಸಿದ್ದು, ಈಗ ಸ್ವಪಕ್ಷದ ಸದಸ್ಯರೇ ಅನಿಲ್ ಬೆನ್ನಿಗೆ ನಿಲ್ಲದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.

ನಗರಸಭೆ ಚುನಾವಣೆ ಸಂದರ್ಭದಲ್ಲಿ ಮೊದಲು ಟಿಕೆಟ್‌ಗಾಗಿ, ನಂತರ ಗೆಲುವಿಗಾಗಿ ದುಂಬಾಲು ಬಿದ್ದಿದ್ದ ಕೆಲ ನಗರಸಭೆ ಸದಸ್ಯರೇ ಇದೀಗ ಅನಿಲ್ ಮೆಣಸಿನಕಾಯಿ ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸುತ್ತಿಲ್ಲ. ಕಾರ್ಯವಾಸಿ ಕತ್ತೆ ಕಾಲು ಹಿಡಿಯಬೇಕೆಂಬ ಗಾದೆ ಮಾತಿನಂತೆ ಬಿಜೆಪಿಯ ಸದಸ್ಯರು ಚುನಾವಣೆಯಲ್ಲಿ ಗೆಲ್ಲುವವರೆಗೆ ಅನಿಲ್ ದುಂಬಾಲು ಬಿದ್ದು, ಇದೀಗ ಕಡೆಗಣಿಸುತ್ತಿದ್ದಾರೆ ಎಂಬ ಮಾತಿದೆ. ಹೀಗಾಗಿ ಚುನಾವಣೆಯಲ್ಲಿ ಅತ್ಯವಶ್ಯಕವಾಗಿ ಬೇಕಿರುವ ಅನಿಲ್ ಮೆಣಸಿಕಾಯಿ ಇನ್ನುಳಿದ ಸಮಯದಲ್ಲಿ ಬೇಡವೆಂಬ ಮನಸ್ಥಿತಿ ಬಿಜೆಪಿ ನಾಯಕರದ್ದೇ ಎಂಬ ಮಾತುಗಳು ಅವಳಿ ನಗರದಲ್ಲಿ ಕೇಳಿ ಬರುತ್ತಿವೆ.


Spread the love

LEAVE A REPLY

Please enter your comment!
Please enter your name here