ವಿಜಯಸಾಕ್ಷಿ ಸುದ್ದಿ, ಮುಂಡರಗಿ
ರಾಜಕೀಯದಾಟವೆಂದರೇ ಹಾಗೇನೋ! ಎಲ್ಲಿ, ಯಾವ ಪಕ್ಷದಲ್ಲಿ ಸೂಕ್ತ ಪುರಸ್ಕಾರ ಸಿಗುತ್ತದೆಯೋ ಆ ಪಕ್ಷಕ್ಕೆ ನೆಗೆಯುವುದು, ಒಳ ಒಪ್ಪಂದಗಳನ್ನು ಮಾಡಿಕೊಂಡು ಒಬ್ಬರಿಗೊಬ್ಬರು ಕೆಸರೆರಚಿಕೊಳ್ಳುವುದು, ಹಿಂದಿನಿಂದ ಮಸಲತ್ತು ನಡೆಸಿ ಮಕಾಡೆ ಮಲಗಿಸುವುದು ಇವೆಲ್ಲವೂ ಸರ್ವೇಸಾಮಾನ್ಯ. ಅದನ್ನೇ ಅಲ್ಲವೇ, ರಾಜಕೀಯವೆನ್ನುವುದು?!
ಮುಂಡರಗಿಯಲ್ಲಿ ನಡೆದಿದ್ದೂ ಇಂಥದೇ ಒಂದು ಹೈಡ್ರಾಮಾ. ಇಲ್ಲಿನ ಪುರಸಭೆ ಅಧ್ಯಕ್ಷೆಯ ವಿರುದ್ಧ ಮೊದಲಿನಿಂದಲೂ ಹತ್ತಾರು ಆರೋಪಗಳು ಕೇಳಿಬರುತ್ತಿದ್ದವು. ಹೀಗಾಗಿ ಅವರನ್ನು ಅಧ್ಯಕ್ಷ ಪಟ್ಟದಿಂದ ಕೆಳಗಿಳಿಸಬೇಕೆಂದು ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಯೋಜನೆ ರೂಪಿಸಿದ್ದರು.
ಎಲ್ಲರೂ ಸೇರಿ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿದರು. ಮುಂದೇನಾಗುವುದೋ ಎಂಬ ಕುತೂಹಲ ಎಲ್ಲರಲ್ಲಿಯೂ ಮನೆಮಾಡಿತ್ತು. ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಅವಿಶ್ವಾಸ ಸಭೆಯೂ ನಡೆಯಿತು. ಆದರೆ, ಕೊನೆಯ ಕ್ಷಣದಲ್ಲಿ ಇಬ್ಬರು ಸದಸ್ಯರು ಕುರುಡು ಕಾಂಚಾಣಕ್ಕೆ ಮಾರಲ್ಪಟ್ಟು ಮೋಸವೆಸಗಿದರು ಎಂಬ ಆರೋಪಗಳು ಕೇಳಿಬಂದವು. ಅವಿಶ್ವಾಸಕ್ಕೆ ಸೋಲಾಗಿದ್ದು, ಹಣಕ್ಕಾಗಿ ಮಾರಾಟವಾದ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಸದಸ್ಯೆ ಕಣ್ಣೀರು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ತಲಾ ಐದು ಲಕ್ಷ ರೂ.ಗಳಿಗೆ ಇಬ್ಬರು ಸದಸ್ಯರು ಮಾರಾಟವಾಗಿರುವ ಆರೋಪಗಳು ಕೇಳಿಬಂದಿದ್ದು, ಮುಂಡರಗಿ ಪುರಸಭೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರದ ಹಣದಲ್ಲಿಯೇ ಸದಸ್ಯರ ಖರೀದಿಸಿರುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ತನ್ಮೂಲಕ ಸ್ವಪಕ್ಷದ ಆಡಳಿತದ ವಿರುದ್ಧ ಸಿಡಿದೆದ್ದೆ ಬಿಜೆಪಿ ಸದಸ್ಯರಿಗೆ ಮತ್ತೆ ಸೋಲಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಒಂದಾಗಿ ಬಿಜೆಪಿ ಪಕ್ಷದ ಪುರಸಭೆ ಅಧ್ಯಕ್ಷೆ ವಿರುದ್ಧವೇ ಸಮರ ಸಾರಿದ್ದರು.
ಸ್ವಪಕ್ಷದ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ವಿರುದ್ದವೇ ಬಿಜೆಪಿಯವರು ತೊಡೆತಟ್ಟಿ ನಿಂತು, ಅವಿಶ್ವಾಸ ಮಂಡನೆಗೆ ನಿರ್ಧರಿಸಿದ್ದರು. ಬಿಜೆಪಿಯ ೧೦ ಸದಸ್ಯರು, ಕಾಂಗ್ರೆಸ್‌ನ ೬ ಸದಸ್ಯರು ಅವಿಶ್ವಾಸ ಪತ್ರಕ್ಕೆ ಸಹಿ ಮಾಡಿ ಜಿಲ್ಲಾಧಿಕಾರಿಗಳಿಗೆ ನೀಡಿದ್ದರು. ಆದರೆ, ಸೋಮವಾರ ಪುರಸಭೆಯಲ್ಲಿ ಅವಿಶ್ವಾಸ ಮಂಡನೆ ಮಾಡುವಾಗ ದೊಡ್ಡ ನಾಟಕವೇ ನಡೆಯಿತು.
ಕಾಂಗ್ರೆಸ್‌ನ ಇಬ್ಬರು ಸದಸ್ಯರು ರಾತ್ರೋರಾತ್ರಿ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ಪರವಾಗಿ ನಿಂತುಬಿಟ್ಟರು. ಸಭೆಯಲ್ಲಿ ಬಿಜೆಪಿ ಪರವಾದ ಅಭ್ಯರ್ಥಿ ಹಾಗೂ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ಪರವಾಗಿ ಬ್ಯಾಟ್ ಮಾಡಿದ್ರು. ತನ್ಮೂಲಕ ಅವಿಶ್ವಾಸ ಮಂಡನೆ ಮಾಡಿದ್ದ ಸದಸ್ಯರು ತೀವ್ರ ಮುಖಭಂಗ ಅನುಭವಿಸುವಂತಾಯಿತು.
ಕಾಂಗ್ರೆಸ್‌ನ ಇಬ್ಬರು ಸದಸ್ಯರು ತಲಾ ಐದು ಲಕ್ಷ ರೂ. ಹಣ ಪಡೆದು, ನಮಗೆ ಮೋಸ ಮಾಡಿದ್ದಾರೆ. ಮೊನ್ನೆಯಷ್ಟೇ ನಮ್ಮ ಮನೆಗೆ ಬಂದು, ಕೈ-ಕಾಲು ಮುಗಿದು, ಅವಿಶ್ವಾಸ ಮಂಡನೆ ಮಾಡೋಣ ಅಂದವರು ಇಂದು ಅಧ್ಯಕ್ಷರ ಪರವಾಗಿಯೇ ನಿಂತು ನಮಗೆ ದೊಡ್ಡ ಮೋಸ ಮಾಡಿದ್ದಾರೆ.
-ಜ್ಯೋತಿ ಹಾನಗಲ್, ಬಿಜೆಪಿ ಸದಸ್ಯೆ
ಮುಂಡರಗಿ ಪರಸಭೆ ೨೩ ಸದಸ್ಯರನ್ನು ಹೊಂದಿದ್ದು, ೧೭ ಬಿಜೆಪಿ ಸದಸ್ಯರು, ೬ ಕಾಂಗ್ರೆಸ್ ಸದಸ್ಯರನ್ನು ಹೊಂದಿದೆ. ಬಿಜೆಪಿ ಸದಸ್ಯೆ ಕವಿತಾ ಉಳ್ಳಾಗಡ್ಡಿ ಅಧ್ಯಕ್ಷೆಯಾಗಿದ್ದರು. ಇತ್ತೀಚಿನ ದಿನಗಳಲ್ಲಿ ಕವಿತಾ ಅವರ ಪತಿಯ ಹಸ್ತಕ್ಷೇಪ ಹೆಚ್ಚಾಗಿದೆ ಎಂದು ಬಿಜೆಪಿ ಸದಸ್ಯರು ಆರೋಪಿಸಿದ್ದರು. ಹೀಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಸೇರಿಕೊಂಡು ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ವಿರುದ್ಧ ಅವಿಶ್ವಾಸ ಮಂಡನೆಗೆ ನಿರ್ಧರಿಸಿದ್ದರು. ಆದರೆ, ಸಭೆಯ ಸಂದರ್ಭದಲ್ಲಿ ಲೆಕ್ಕಾಚಾರಗಳು ಬುಡಮೇಲಾಗಿ, ಸಾಮಾನ್ಯ ಸಭೆಯಲ್ಲಿ ಕೈ ಎತ್ತುವ ಮೂಲಕ ಅಧ್ಯಕ್ಷೆ ಪರವಾಗಿಯೇ ವಿಶ್ವಾಸ ಮಂಡನೆಯಾಯಿತು. ಮತ್ತೊಮ್ಮೆ ಕವಿತಾ ಉಳ್ಳಾಗಡ್ಡಿ ಅಧ್ಯಕ್ಷೆಯಾಗಿ ಮುಂದುವರೆದರು.