ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಮಾದ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದ ಕಾಂಗ್ರೆಸ್ಸಿಗರು
ವಿಜಯಸಾಕ್ಷಿ ಸುದ್ದಿ, ಧಾರವಾಡ/ಗದಗ:
ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಯ ಗೆಜೆಟ್ ನೋಟಿಫಿಕೇಶನ್ ಹೊರಡಿಸದಂತೆ ಮಂಗಳವಾರ ಧಾರವಾಡ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿತ್ತು. ಈ ಕುರಿತ ಆದೇಶದ ಪ್ರತಿ ಇಂದು ವಿಜಯಸಾಕ್ಷಿಗೆ ಲಭ್ಯವಾಗಿದೆ.

ಜ.24ರಂದು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ವೇಳೆ ನಡೆದ ಪ್ರಮಾದಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ನ ಸದಸ್ಯರಾದ ಲಕ್ಷ್ಮಣ ಚಂದಾವರಿ, ಶಕುಂತಲಾ ಅಕ್ಕಿ, ಕೃಷ್ಣಾ ಪರಾಪೂರ, ಬರಕತ್ ಅಲಿ ಮುಲ್ಲಾ, ರವಿಕುಮಾರ್ ಕಮತರ, ಜೈನುಲಾಬ್ದಿನ್ ನಮಾಜಿ, ಚಂದ್ರಶೇಖರಗೌಡ ಕರಿಸೋಮನಗೌಡರ ಎಂಬವವರು ಹೈಕೋರ್ಟ್ ಮೊರೆ ಹೋಗಿದ್ದರು. ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಯನ್ನು ಅಧಿಕಾರಿಗಳು ಪಾರದರ್ಶಕವಾಗಿ ನಡೆಸಿಲ್ಲ. ಹೀಗಾಗಿ ಮರು ಆಯ್ಕೆ ನಡೆಸುವಂತೆ ಕೋರಲಾಗಿತ್ತು.

ಮಂಗಳವಾರ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ಯಾಮಪ್ರಸಾದ್ ಅವರಿದ್ದ ಪೀಠ ತಡೆಯಾಜ್ಞೆ ನೀಡಿ, ಫೆ.21ಕ್ಕೆ ವಿಚಾರಣೆ ಮುಂದೂಡಿದೆ. ಮುಂದಿನ ವಿಚಾರಣೆವರೆಗೆ ಗೆಜೆಟ್ ನೋಟಿಫಿಕೇಶನ್ ಹೊರಡಿಸದಂತೆ ಆದೇಶಿಸಿದೆ. ಅಲ್ಲದೇ, ಚುನಾವಣೆ ಪ್ರಕ್ರಿಯೆ ನಮೂದಿಸಿದ ಠರಾವು ಪುಸ್ತಕ ಹಾಜರುಪಡಿಸುವಂತೆ ಕೋರ್ಟ್ ಆದೇಶಿಸಿದೆ. ಕಾಂಗ್ರೆಸ್ ಪರವಾಗಿ ಹಿರಿಯ ನ್ಯಾಯವಾದಿ ಉದಯ ಹೊಳ್ಳ ಅವರು ವಾದ ಮಂಡಿಸಿದ್ದರು.



ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಎಚ್.ಕೆ.ಪಾಟೀಲ್ ಅವರು, ‘ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆಯ ಗೆಜೆಟ್ ನೋಟಿಫಿಕೇಶನ್ ಹೊರಡಿಸಬಾರದು ಎಂದು ಧಾರವಾಡ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿರುವುದು ನ್ಯಾಯ ಸಿಗುವ ಭರವಸೆ ಮೂಡಿಸಿದೆ. ಆಯ್ಕೆ ವೇಳೆ ನಡೆದ ಪ್ರಮಾದಗಳನ್ನು ಹೈಕೋರ್ಟ್ ಪರಿಗಣಿಸಿ, ಆಯ್ಕೆಯ ಗೆಜೆಟ್ ನೋಟಿಫಿಕೇಶನ್ ಮಾಡಬಾರದು ಎಂದು ತಡಯಾಜ್ಞೆ ನೀಡಿದೆ. ಅಲ್ಲದೇ ಆಯ್ಕೆ ಪ್ರಕ್ರಿಯೆ ವೇಳೆ ನಡೆದ ಪ್ರಮಾದಗಳಾಗಿರುವ ಕಾಗದ ಪತ್ರಗಳನ್ನು ಸಲ್ಲಿಕೆ ಮಾಡುವಂತೆ ಕೋರ್ಟ್ ಆದೇಶ ನೀಡಿರುವುದು ಸ್ವಾಗತಾರ್ಹವಾಗಿದೆ ಎಂದು ಹೇಳಿದರು.