ವಿಜಯಸಾಕ್ಷಿ ಸುದ್ದಿ, ಗದಗ:
ಕಳೆದ ಹಲವು ದಿನಗಳಿಂದ ಗದಗ-ಬೆಟಗೇರಿ ಅವಳಿ ನಗರದಲ್ಲಿ ರಾಜಕೀಯ ಮೇಲಾಟಗಳು ನಡೆಯುತ್ತಲಿವೆ. ಆಡಳಿತ ಚುಕ್ಕಾಣಿ ಹಿಡಿಯಲು ಎರಡೂ ಪಕ್ಷಗಳು ಈಗಿರುವ ಸದಸ್ಯರ ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಡೇ ಒನ್ ನಿಂದ ಪ್ರಯತ್ನಿಸುತ್ತಿವೆ.
ಈ ಮಧ್ಯೆ 15 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದ ಕಾಂಗ್ರೆಸ್ ಆಪರೇಷನ್ ಹಸ್ತಕ್ಕೂ ಮುಂದಾಗಿತ್ತು ಎಂಬ ಮಾತುಗಳು ಕೇಳಿ ಬಂದಿತ್ತು. ಅದರ ಭಾಗವಾಗಿ ಕಾಂಗ್ರೆಸ್ ನಾಯಕರು ಮೂವರು ಬಿಜೆಪಿ ಸದಸ್ಯರ ಮನವೊಲಿಸಲು ಶತಪ್ರಯತ್ನಪಟ್ಟಿದ್ದರು. ಆದರೆ, ಅದು ಫಲದಾಯಕವಾಗಿಲ್ಲ ಎನ್ನಲಾಗುತ್ತಿದೆ.
ಅದರಂತೆ, ಇದೀಗ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ಬಿಜೆಪಿ ಸ್ಪಷ್ಟ ಬಹುಮತ ಹೊಂದಿದ್ದರೂ ಸೇಫರ್ ಸೈಡ್ ಆಗಿ ಕಾಂಗ್ರೆಸ್ ನ ಇಬ್ಬರು ಸದಸ್ಯರಿಗೆ ಗಾಳ ಹಾಕಿದೆ. ಕಾಂಗ್ರೆಸ್ನ ಓರ್ವ ಹೊಸ ಸದಸ್ಯ ಹಾಗೂ ಇತ್ತೀಚೆಗಷ್ಟೆ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡ ಓರ್ವ ಪಕ್ಷೇತರ ಸದಸ್ಯರ ಜೊತೆ ಬಿಜೆಪಿಯ ಕೆಲ ನಾಯಕರು ನಿಕಟ ಸಂಪರ್ಕ ಹೊಂದಿದ್ದಾರೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ಸದಸ್ಯರ ಮನವೊಲಿಸಲು ಬಿಜೆಪಿಯ ನಾಯಕರು ಆಡಿಯೋ, ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿ ಮನವೊಲಿಸಲು ಯತ್ನಿಸಿದ್ದು, ನಗರಸಭೆ ಗದ್ದುಗೆ ಹಿಡಿಯಲು ಬಿಜೆಪಿ ಕಾಂಗ್ರೆಸ್ ನಡುವೆ ಒಂದೇ ಒಂದು ಸಂಖ್ಯೆಯ ಕೊರತೆ ಇರುವುದರಿಂದ ನಾಳೆ ನಡೆಯುವ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಏನಾಗುತ್ತದೆಯೋ ಎಂಬ ಕುತೂಹಲ ಹೆಚ್ಚಿಸಿದೆ.