ವಿಜಯಸಾಕ್ಷಿ ಸುದ್ದಿ, ಗದಗ:
ಗದಗ-ಬೆಟಗೇರಿ ಅವಳಿ ನಗರದಲ್ಲಿ ಮೀಟರ್ ಬಡ್ಡಿ ದಂಧೆಕೋರರ ಹಾವಳಿ ಹೆಚ್ಚಾಗಿದ್ದು, ಬಡ್ಡಿ ವ್ಯವಹಾರಸ್ಥರ ಅಟ್ಟಹಾಸಕ್ಕೆ ಯುವಕನೋರ್ವ ಬಲಿಯಾಗಿದ್ದಾನೆ.
ಹೌದು, ಬಡ್ಡಿ ದಂಧೆಕೋರರರಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಮೃತ್ಯುಂಜಯ ಭರಮಗೌಡರ್ (26) ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಜಿಮ್ಸ್ ನಲ್ಲಿ ಸಾವನ್ನಪ್ಪಿದ್ದಾನೆ.

ಕಳೆದ ಮಾರ್ಚ್ 23ರಂದು ಬಡ್ಡಿ ಹಣಕ್ಕಾಗಿ ಯುವಕನನ್ನು ರೌಡಿಶೀಟರ್ ಉಮೇಶ್ ಸುಂಕದ ಹಾಗೂ ಉದಯ ಸುಂಕದ ಮತ್ತು ಅವರ ಗ್ಯಾಂಗ್ ಮೃತ್ಯುಂಜಯ ಭರಮಗೌಡರ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು.
ಮೂರು ದಿನ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದರು.
ಮೃತ್ಯುಂಜಯ ಭರಮಗೌಡರ್ ಮಾಡಿದ್ದ 2 ಲಕ್ಷ ರೂ. ಸಾಲಕ್ಕೆ ಒಂದು ಲಕ್ಷ ರೂ. ಬಡ್ಡಿ ಹಣ ಕೊಡುವಂತೆ ದಂಧೆಕೋರರು ಒತ್ತಾಯಿಸಿದ್ದರು.
ಹಣ ವಸೂಲಿ ಮಾಡುವ ಸಲುವಾಗಿ ಬಡ್ಡಿ ಜಮೀನಿಗೆ ಕರೆದ್ಯೊಯ್ದು ಹಿಗ್ಗಾಮುಗ್ಗಾ ಥಳಿಸಿದ್ದರು. ಮಾಧ್ಯಮದಲ್ಲಿ ಸುದ್ದಿ ಪ್ರಸಾರದ ಬಳಿಕ ಪೊಲೀಸರು ಉಮೇಶ್ ಸುಂಕದ ಸೇರಿದಂತೆ ಮೂವರನ್ನು ಬಂಧಿಸಿದ್ದರು.
ಬಡ್ಡಿ ದಂಧೆಕೋರರಿಂದ ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಮೃತ್ಯುಂಜಯ ಭರಮಗೌಡರ್ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ 29 ದಿನಗಳ ಬಳಿಕ ಕೊನೆಯುಸಿರೆಳೆದಿದ್ದಾನೆ.

ಗದಗನ ಬೆಟಗೇರಿ ಭಾಗದಲ್ಲಿ ವ್ಯಾಪಕ ಬಡ್ಡಿ ವ್ಯವಹಾರದ ಆರೋಪ ಕೇಳಿ ಬರುತ್ತಿದ್ದು, ಬಡ್ಡಿ ದಂಧೆಕೋರರಿಗೆ ಪೊಲೀಸರು ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಇನ್ನಷ್ಟು ಜೀವ ಬಲಿಯಾಗುವುದರಲ್ಲಿ ಅನುಮಾನವಿಲ್ಲ ಎಂದು ಅವಳಿ ನಗರದ ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.