ವಿಜಯಸಾಕ್ಷಿ ಸುದ್ದಿ, ಗದಗ:
‘ಕೇಸ್ ತಗೊಳ್ಬೇಕು ಸಿಪಿಐ.. ನೆನಪಿಟ್ಕೊಳ್ಳಿ ಎಲ್ಲರ ಮೇಲೂ ಕೇಸ್ ತಗೊಳ್ಬೇಕು. ಆಗುವುದಿಲ್ಲ ಅಂತಾ ಹೇಳುವ ಹಾಗಿಲ್ಲ’ ಅಂತಾ ಭಜರಂಗದಳ ಮುಖಂಡನೊಬ್ಬ ನರಗುಂದ ಪೊಲೀಸ್ ಠಾಣೆಯಲ್ಲೇ ದ್ವೇಷದ ಭಾಷಣ ಮಾಡಿದ್ದು, ಇಡೀ ಪೊಲೀಸ್ ಇಲಾಖೆ ತಲೆತಗ್ಗಿಸುವಂತಾಗಿದೆ.
ಭಜರಂಗದಳದ ಮುಖಂಡನ್ನೊಬ್ಬ ದ್ವೇಷದ ಭಾಷಣ ಮಾಡುತ್ತಿರುವಾಗಲೇ ಅಲ್ಲೇ ನೆರೆದಿದ್ದ ಇನ್ನೊಬ್ಬ ಭಜರಂಗದಳ ಕಾರ್ಯಕರ್ತ ‘ಏ ಹೊರಗೆ ಬಾ.. ಹೊರಗೆ’ ಎಂದು ಪೊಲೀಸರಿಗೆ ಅವಾಜ್ ಹಾಕುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.
‘ಕೇಸ್ ಕೊಟ್ಬಿಡು ಅಂದ್ರೆ ಕೇಸ್ ಕೊಡ್ತೀವಿ. ಕೇಸ್ ಕೊಡ್ಬೇಡ ಅಂದ್ರು ಕೇಸ್ ಮಾಡ್ತೀರಿ. ಕೋವಿಡ್ ಕೇಸ್ ಮಾಡ್ತೀರಾ ಮಾಡಿ. ಕೌಂಟರ್ ಕೇಸ್ ಮಾಡ್ತೀರಾ ಮಾಡಿ. ಇವತ್ತೊಂದು ಕೇಸ್ ಹಾಕ್ತೀರಾ ಹಾಕಿ. ನಾವೂ ಕೇಸ್ ಕೊಡೋಕೆ ತಯಾರಾಗಿಯೇ ಬಂದಿದ್ದೇವೆ. ಎಷ್ಟು ಕೇಸ್ ದಾಖಲೆ ಮಾಡ್ತಿರೋ ಮಾಡಲೇಬೇಕು ಇವತ್ತು. ಎಲ್ಲ ಕೇಸ್ ದಾಖಲೆ ಮಾಡಲಿಕ್ಕೆ ಬಂದಿದ್ದೇವೆ’ ಎಂದಿದ್ದಾನೆ.
ಇನ್ನು, ಭಜರಂಗದಳದ ಮುಖಂಡ ಸಂಜು ನಲವಡಿ, ಕಾರ್ಯಕರ್ತರು ಬಹಿರಂಗವಾಗಿ ಇಷ್ಟೆಲ್ಲಾ ಮಾತನಾಡುತ್ತಿದ್ದರೂ, ಪೊಲೀಸರು ಬಾಯ್ ಮುಚ್ಚಿಕೊಂಡು ಸುಮ್ಮನೆ ಕೂತಿದ್ರಾ ಎಂಬ ಅನುಮಾನ ಜನರಲ್ಲಿ ಕಾಡುತ್ತಿದೆ. ಪೊಲೀಸರ ನಿಷ್ಕಾಳಜಿ ಹಾಗೂ ಇಂತಹ ದ್ವೇಷದ ಭಾಷಣದಿಂದ ಉದ್ರಿಕ್ತರಾದ ಯುವಕರ ಗುಂಪೊಂದು ಸೋಮವಾರ (ಜ.17)ದಂದು ರಾತ್ರಿ ಚೂರಿ ಇರಿಯುವಂತಾಗಿದ್ದು, ಯುವಕನೋರ್ವನ ಕೊಲೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಘಟನೆಯ ವಿವರ:
ಜ.14ರಂದು ಎರಡು ಕೋಮಿನ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಹಿಂದೂ ದೇವರಿಗೆ ಅವಹೇಳನ ಮಾಡಿದ್ದಾರೆ. ರಾಮ, ಕೃಷ್ಣ, ಆಂಜನೇಯನಿಗೆ ಅವಾಚ್ಯವಾಗಿ ನಿಂದಿಸಿದ್ದಲ್ಲದೇ, ಹಲ್ಲೆ ನಡೆಸಿದ್ದಾರೆ ಎಂದು ಅನ್ಯ ಕೋಮಿನ 10 ಜನ ಸೇರಿದಂತೆ ಇನ್ನೂ 10-15 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಆದರೆ, ಆರೋಪಿಗಳು ಕೌಂಟರ್ ಆಗಿ ಪ್ರಕರಣ ನೀಡಿದ ದೂರುದಾರರು ಸೇರಿ 65 ಜನರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಎಫ್‌ಐಆರ್ ದಾಖಲಿಸಿದ್ದರು.
ಇದರಿಂದಾಗಿ ಪಟ್ಟಣದಲ್ಲಿ ಕಳೆದ ಮೂರು ದಿನಗಳಿಂದ ಬೂದಿ ಮುಚ್ಚಿದ ಕೆಂಡದ ವಾತಾವರಣ ನಿರ್ಮಾಣವಾಗಿತ್ತು. ಅಲ್ಲದೇ, ಈವೆರಡೂ ಪ್ರಕರಣ ದಾಖಲಾದ ಬಳಿಕ ಸರ್ಕಾರ ಜಾರಿಗೊಳಿಸಿರುವ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಲೋದಿಗಲ್ಲಿ ವೃತ್ತದಿಂದ ಪೊಲೀಸ್ ಠಾಣೆವರೆಗೆ ಪ್ರತಿಭಟನಾ ರ‍್ಯಾಲಿ ಮಾಡಿದ್ದಾರೆ ಅಂತಾ ಸುಮಾರು 60ಕ್ಕೂ ಅಧಿಕ ಜನರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.