ವಿಜಯಸಾಕ್ಷಿ ಸುದ್ದಿ, ನರಗುಂದ
ತಾಲೂಕಿನ ಗುಡ್ಡದ ಹಿರೇಮಠದ ಬಳಿಯಿರುವ ಗೋಶಾಲೆಯಲ್ಲಿ ಕಾಣಿಸಿಕೊಂಡ ಬೃಹತ್ ಗಾತ್ರದ ನಾಗರ ಹಾವೊಂದನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟುಬರಲಾಗಿದೆ.
ಗೋಶಾಲೆಯಲ್ಲಿರುವ ಸಿಬ್ಬಂದಿ ಹಸುಗಳಿಗೆ ಮೇವು ಹಾಕಲೆಂದು ಕಟ್ಟಡದೊಳಗೆ ತೆರಳಿ ಮೇವಿಗೆ ಕೈಯಿಡುತ್ತಿದ್ದಂತೆಯೇ ಈಳಗಿಯ ಬಳಿಯಲ್ಲೇ ಕುಳಿತಿದ್ದ ನಾಗರಹಾವನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.
ಅಲ್ಲೆಲ್ಲ ಹರಡಿಕೊಂಡಿದ್ದ ಸಿಮೆಂಟ್ ಚೀಲ ಇತ್ಯಾದಿ ಸಾಮಗ್ರಿಗಳ ಸಂದಿಗೊಂದಿಗಳಲ್ಲಿ ಸೇರಿಕೊಂಡು ಕಣ್ತಪ್ಪಿಸಿಕೊಳ್ಳುತ್ತಿದ್ದಾಗ ಕೆಲಸಗಾರರು ಏನು ಮಾಡಬೇಕೆಂದು ದಿಕ್ಕು ತೋಚದೇ ಪ್ರವಾಸದಲ್ಲಿದ್ದ ಗುಡ್ಡದ ಹಿರೇಮಠದ ಅಜ್ಜಯ್ಯನವರಿಗೆ ವಿಷಯ ತಿಳಿಸಿದ್ದರು. ತಕ್ಷಣ ಉರಗ ತಜ್ಞ ಸ್ನೇಕ್ ಬುಡ್ಡಾರನ್ನು ಫೋನಿನ ಮೂಲಕ ಸಂಪರ್ಕಿಸಿದ ಅಜ್ಜಯ್ಯನವರು ಹಾವಿಗೆ ಅಪಾಯವಾಗದಂತೆ ಹಿಡಿದು ಸುರಕ್ಷಿತ ಜಾಗಕ್ಕೆ ಬಿಟ್ಟು ಬರುವಂತೆ ಸೂಚಿಸಿದ್ದರು.
ಸ್ಥಳಕ್ಕಾಗಮಿಸಿದ ಸ್ನೇಕ್ ಬುಡ್ಡಾ, ಅವಿತು ಕುಳಿತಿದ್ದ ನಾಗರಹಾವನ್ನು ಹುಡುಕಿ ಹಿಡಿದು, ಸುರಕ್ಷಿತ ಸ್ಥಳಕ್ಕೆ ಬಿಟ್ಟುಬಂದಿದ್ದಾರೆ.