ಶಿಕ್ಷಕಿ ಗೀತಾ ಮತ್ತೊಬ್ಬ ಶಿಕ್ಷಕ ಸಂಗನಗೌಡನ ಜೊತೆಗೆ ಸಲುಗೆಯಿಂದ ಇದ್ದದ್ದೆ ಕೃತ್ಯಕ್ಕೆ ಕಾರಣ ಎಂದ ಆರೋಪಿ!
ವಿಜಯಸಾಕ್ಷಿ ಸುದ್ದಿ, ಗದಗ/ ನರಗುಂದ
ನಾಲ್ಕನೇ ತರಗತಿ ವಿದ್ಯಾರ್ಥಿ ಭರತ ಬಾರಕೇರ ಕೊಲೆ, ಹಾಗೂ ಶಿಕ್ಷಕಿ ಗೀತಾ ಬಾರಕೇರ, ಬಿಡಿಸಲು ಬಂದ ಮತ್ತೊಬ್ಬ ಶಿಕ್ಷಕನ ಮೇಲೆ ಹಲ್ಲೆ ಮಾಡಿದ ಆರೋಪಿ ಅತಿಥಿ ಶಿಕ್ಷಕನನ್ಮು ನರಗುಂದ ಪೊಲೀಸರು ಬಂಧಿಸಿದ್ದಾರೆ.

ಅತಿಥಿ ಶಿಕ್ಷಕ ಮುತ್ತಪ್ಪ ಯಲ್ಲಪ್ಪ ಹಡಗಲಿ ಎಂಬಾತನನ್ನು ಮಂಗಳವಾರ ಮಧ್ಯಾಹ್ನ ಬಂಧಿಸಲಾಗಿದೆ ಎಂದು ಎಸ್ಪಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದ್ದಾರೆ.
ಈ ಕುರಿತು ತಮ್ಮ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಅವರು, ಘಟನೆಗೆ ಅತಿಥಿ ಶಿಕ್ಷಕಿ ಗೀತಾ ಬಾರಕೇರ ಅವರ ಮೇಲೆ ಇರುವ ಅಸೂಯೆ ಕಾರಣವಾಗಿದ್ದು, ಈ ಮೊದಲು ಮುತ್ತಪ್ಪ ಹಾಗೂ ಗೀತಾ ನಡುವೆ ಸಂಬಂಧ ಇತ್ತು. ಆದರೆ ಇತ್ತೀಚೆಗೆ ಶಾಲಾ ಪ್ರವಾಸಕ್ಕೆ ತೆರಳಿದ್ದಾಗ ಇನ್ನೊಬ್ಬ ಶಿಕ್ಷಕ ಸಂಗನಗೌಡನ ಜೊತೆಗೆ ಅತಿ ಸಲುಗೆಯಿಂದ ಗೀತಾ ನಡೆದುಕೊಂಡಿದ್ದಳಂತೆ. ಆ ಕಾರಣಕ್ಕಾಗಿ ಗೀತಾಳ ಮೇಲೆ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸೆಗಿದ್ದಾಗಿ ಆರೋಪಿ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ ಎಂದು ಎಸ್ಪಿ ಹೇಳಿದರು.
ಇದನ್ನೂ ಓದಿ ಶಿಕ್ಷಕನ ಅಟ್ಟಹಾಸಕ್ಕೆ ನಲುಗಿದ್ದ ಶಿಕ್ಷಕಿ ಗೀತಾ ಆಸ್ಪತ್ರೆಯಲ್ಲಿ ಸಾವು
ಗೀತಾ ಹಾಗೂ ಆರೋಪಿ ಮುತ್ತಪ್ಪನ ನಡುವೆ ಕಳೆದ ಹಲವು ತಿಂಗಳಿಂದ ನಡೆದಿರುವ ಫೋನ್ ಕಾಲ್, ಮೆಸೇಜ್ ಹಾಗೂ ವಾಟ್ಸಪ್ ಚಾಟ್ ಪರಿಶೀಲನೆ ಮಾಡಿದಾಗ ವಿಷಯ ಬೆಳಕಿಗೆ ಬಂದಿದೆ.
ಆರೋಪಿ ಮುತ್ತಪ್ಪ ಹೇಳಿಕೆ ಇನ್ನೂ ಪರಿಶೀಲನೆ ನಡೆಸಬೇಕು. ಹಲ್ಲೆಗೊಳಗಾದ ಶಿಕ್ಷಕಿ ಗೀತಾ ಹಾಗೂ ಗ್ರಾಮಸ್ಥರಿಂದ ಮಾಹಿತಿ ಕಲೆ ಹಾಕಬೇಕಾಗಿದೆ ಎಂದರು.
ಗಾಯಾಳು ಶಿಕ್ಷಕಿಯ ಆರೋಗ್ಯ ವಿಚಾರಿಸಿದ ಶಿಕ್ಷಣ ಸಚಿವ ನಾಗೇಶ್
ಹುಬ್ಬಳ್ಳಿ ವರದಿ
ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕ ನಡೆಸಿದ ಅಮಾನವೀಯ ದಾಳಿಯಿಂದ ಗಂಭೀರವಾಗಿ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅತಿಥಿ ಶಿಕ್ಷಕಿ ಗೀತಾ ಯಲ್ಲಪ್ಪ ಬಾರಕೇರ ಅವರ ಆರೋಗ್ಯವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವರಾದ ಬಿ.ಸಿ. ನಾಗೇಶ್ ಅವರು ವಿಚಾರಿಸಿದರು.
ಮಂಗಳವಾರ ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು, ಗಾಯಾಳು ಶಿಕ್ಷಕಿಯ ಕುಟುಂಬದವರೊಂದಿಗೆ ಮಾತನಾಡಿ ಧೈರ್ಯ ತುಂಬಿದರು.

ಶಿಕ್ಷಕಿಯ ಆರೋಗ್ಯ ಸ್ಥಿತಿ ಮತ್ತು ಚಿಕಿತ್ಸೆಯ ಕುರಿತು ವೈದ್ಯರಿಂದ ಮಾಹಿತಿ ಪಡೆದರು.
‘ಶಾಲೆಯಲ್ಲಿ ನಡೆದಿರುವ ಈ ಘಟನೆ ಅತ್ಯಂತ ದುರಾದೃಷ್ಟಕರ. ಶಾಲೆಯ ಆವರಣದಲ್ಲಿ ಇಂತಹ ಘಟನೆಗಳನ್ನು ಊಹಿಸಲು ಅಸಾಧ್ಯ. ಘಟನೆಯಿಂದ ಆತಂಕಗೊಂಡಿರುವ ಶಾಲೆಯ ಮಕ್ಕಳು ಮತ್ತು ಶಿಕ್ಷಕರಿಗೆ ಕೌನ್ಸಿಲಿಂಗ್ ಮಾಡಿ ಧೈರ್ಯ ತುಂಬಲಾಗುತ್ತದೆ. ಘಟನೆಗೆ ಕಾರಣ ಏನು ಎಂಬುದು ಆರೋಪಿಯ ಬಂಧನದ ಬಳಿಕ ತಿಳಿದು ಬರಲಿದೆ. ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಸಚಿವ ಬಿ.ಸಿ. ನಾಗೇಶ್ ಅವರು ಮಾಹಿತಿ ನೀಡಿದ್ದಾರೆ.