ವಿಜಯಸಾಕ್ಷಿ ಸುದ್ದಿ, ಗದಗ/ನರಗುಂದ
ಹಾವು-ಮುಂಗುಸಿಯಾಟ ನೋಡಿರುತ್ತೀರಿ. ಇಲಿ-ಬೆಕ್ಕುಗಳಾಟವನ್ನೂ ಸಾಕಷ್ಟು ಕಂಡಿರುತ್ತೀರಿ. ಆದರೆ, ಹಾವು-ಬೆಕ್ಕಿನಾಟ ತುಸು ಅಪರೂಪವೇ. ಅಂಥದೊಂದು ದೃಶ್ಯ ಇತ್ತೀಚೆಗೆ ಗದಗ ಜಿಲ್ಲೆಯ ನರಗುಂದ ಪಟ್ಟಣದಿಂದ ಎರಡು ಕಿ.ಮೀ ಅಂತರದಲ್ಲಿರುವ ಅಜ್ಜು ಪಾಟೀಲ ಎಂಬುವವರ ತೋಟದ ಮನೆಯಲ್ಲಿ ಕಂಡುಬಂತು.
ತೋಟದ ನಡುವೆಯಿರುವ ಮನೆಯಾಗಿದ್ದರಿಂದ ಹುಳ-ಹುಪ್ಪಟೆಗಳು, ಹೆಸರೂ ಕೇಳಿರದ ಕೀಟಗಳು, ಹಾವುಗಳ ಸಂಚಾರ ಸಾಮಾನ್ಯವೇ. ಮನೆಯಲ್ಲಿ ಸಾಕಷ್ಟು ಬೆಕ್ಕುಗಳು, ಪುಟ್ಟ ಪುಟ್ಟ ಬೆಕ್ಕಿನ ಮರಿಗಳೂ ಇದ್ದವು. ಅದು ಹೇಗೋ ನಾಗರಹಾವೊಂದು ತೋಟದ ಮನೆಯೊಳಗೆ ಸೇರಿಕೊಂಡಿತ್ತು. ನಾಗರ ಹಾವನ್ನು ಕಂಡ ಬೆಕ್ಕುಗಳು ಚೀರತೊಡಗಿದ್ದವು. ಮನೆಯವರು ಗಲಾಟೆ ಕೇಳಿ ಮನೆಯೆಲ್ಲ ತಡಕಾಡಿದಾಗ ಭಾರೀ ಗಾತ್ರದ ನಾಗರಹಾವು ಕಣ್ಣಿಗೆ ಬಿದ್ದಿತ್ತು.
ಗಾಬರಿಗೊಂಡ ಬೆಕ್ಕು ಹಾಗೂ ಬೆಕ್ಕಿನ ಮರಿಗಳ ಗಲಾಟೆಯೂ ಜೋರಾಗಿತ್ತು. ಹಾವು ಅಲ್ಲಿ ಇಲ್ಲಿ ಸುತ್ತಾಡಿ, ಅಡುಗೆ ಮನೆಯನ್ನು ಸೇರಿಕೊಂಡಿತ್ತು. ದಿಕ್ಕು ತೋಚದ ಮನೆಯವರು ಹಾವು ಹಿಡಿಯುವ ಸ್ನೇಕ್ ಬುಡ್ಡಾರಿಗೆ ಫೋನಾಯಿಸಿ ಕರೆಸಿದರು. ಸ್ಥಳಕ್ಕಾಗಮಿಸಿದ ಸ್ನೇಕ್ ಬುಡ್ಡಾ ನಾಗರ ಹಾವನ್ನು ಹುಡುಕಿ, ಸುರಕ್ಷಿತವಾಗಿ ಹಿಡಿದು, ಕಾಡಿನ ಪ್ರದೇಶದಲ್ಲಿ ಬಿಟ್ಟುಬಂದಿದ್ದಾರೆ.
ಬೆಕ್ಕಿನ ಮರಿಗಳ ಆಸೆಯಿಂದ ಹಾವು ಮನೆಯೊಳಗೆ ಸೇರಿಕೊಂಡಿರಬಹುದು ಎಂದು ಸ್ನೇಕ್ ಬುಡ್ಡಾ ಅಭಿಪ್ರಾಯಪಟ್ಟಿದ್ದಾರೆ.



