ನರಗುಂದ ಕೊಲೆ ಪ್ರಕರಣ; ನೊಂದವರಿಗೆ ಧೈರ್ಯ ತುಂಬಿದ ಎಸ್ಪಿ ಶಿವಪ್ರಕಾಶ್ ದೇವರಾಜು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ:

Advertisement

ನರಗುಂದದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅವರು, ನೊಂದವರಿಗೆ ಧೈರ್ಯ ತುಂಬಿ ಆಡಿದ ಮಾತುಗಳು ಶಾಂತಿ ಸ್ಥಾಪನೆಗೆ ಕಾರಣವಾಗುತ್ತಿವೆ.

ಸೋಮವಾರ ರಾತ್ರಿ ನಡೆದ ಘಟನೆಯಿಂದ ನರಗುಂದ ಪಟ್ಟಣದ ಮುಸ್ಲಿಂ ಸಮುದಾಯದಲ್ಲಿ ಆಕ್ರೋಶ ಮಡುಗಟ್ಟಿತ್ತು. ಪ್ರತಿಕಾರದ ಮಾತುಗಳೂ ಪ್ರತಿಧ್ವನಿಸಿದ್ದವು. ಆದರೆ ಎಸ್ಪಿ ಶಿವಪ್ರಕಾಶ್ ಅವರು, ನೊಂದವರಿಗೆ ನ್ಯಾಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ವಾಗ್ದಾನ ಮಾಡಿರುವುದರಿಂದ ಪರಿಸ್ಥಿತಿ ತಿಳಿಗೊಳ್ಳುವಂತಾಗಿದೆ. ಅಮಾಯಕ ಯುವಕನ ಕೊಲೆ ನಂತರ ಮುಸ್ಲಿಂ ಸಮುದಾಯವನ್ನು ಉದ್ದೇಶಿಸಿ ಎಸ್ಪಿ ಶಿವಪ್ರಕಾಶ್ ಅವರು ಮಾತನಾಡಿದ್ದು ಹೀಗೆ…

‘ಸೋಮವಾರ ಸಂಜೆ ಘಟನೆ ನಡೆದ ಬಳಿಕ ನನಗೆ ಫೋನ್ ಬಂತು. ಅವಾಗಿನಿಂದ ಈವರೆಗೆ ನಿದ್ದೆ ಮಾಡಿಲ್ಲ. ಕೊಲೆಯಾಗಿರುವ ಹುಡುಗನಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ. ಹೀಗಾಗಿ ಬಹಳಷ್ಟು ಬೇಜಾರಾಯ್ತು. ನೀವು ನಮ್ಮ ಮೇಲೆ ಹೀಗೆಲ್ಲಾ ಮಾಡಿದ್ದಕ್ಕೆ ತಪ್ಪೆನ್ನುವುದಿಲ್ಲ. ಏಕೆಂದರೆ ನಿಮಗೆ ನೋವಿದೆ. ಅದನ್ನು ನಾನು ಅರ್ಥ ಮಾಡಿಕೊಳ್ಳುತ್ತೇನೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಭಾವನಾತ್ಮಕವಾಗಿ ಮಾತನಾಡಿದ್ದಾರೆ.

‘ನಾನು ನಿಮಗೆ ಎರಡು ಭರವಸೆಗಳನ್ನು ಕೊಡ್ತೀನಿ. ನಿಯತ್ತಿನಿಂದ ಹೇಳ್ತೀನಿ. ಕೊಲೆ ಪ್ರಕರಣದಲ್ಲಿ ಪ್ರತ್ಯಕ್ಷ, ಪರೋಕ್ಷವಾಗಿ ಭಾಗಿಯಾಗಿರುವ ಎಲ್ಲರನ್ನೂ ಬಂಧಿಸಲಾಗುವುದು. ಘಟನೆ ನಡೆದ ದಿನ ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ ಈಗಾಗಲೇ ಕೆಲವರನ್ನು ಬಂಧಿಸಲಾಗಿದೆ. ಘಟನೆಗೆ ಪ್ರಚೋದಿಸಿದವರನ್ನು, ಕಾರಣರಾದವರನ್ನು ಬಂಧಿಸುತ್ತೇವೆ. ಒಂದು ವೇಳೆ ಆರೋಪಿಗಳನ್ನು ಬಂಧಿಸದಿದ್ದರೆ ನಾನು ನಿಮ್ಮ ಮುಂದೆ ಹೀಗೆ ಬಂದು ಮಾತನಾಡುವುದಿಲ್ಲ’ ಎಂದು ಹೇಳುವ ಮೂಲಕ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಎರಡು ಗುಂಪಗಳ ಮಧ್ಯೆ ನಡೆದ ಗಲಾಟೆಯಲ್ಲಿ ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ 19 ವರ್ಷದ ಯುವಕ ಶಮೀರ್ ಶಹಪೂರ್ ಎಂಬಾತನಿಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡುತ್ತಿರುವ ದೃಶ್ಯಗಳು ಸಿ.ಸಿ. ಟಿವಿಯಲ್ಲಿ ಸೆರೆಯಾಗಿವೆ.

ಸೋಮವಾರ ನರಗುಂದ ಪುರಸಭೆಯ ಬಳಿ ಇಬ್ಬರು ಯುವಕರು ಸೇರಿ ಶಮೀರ್ ಹಾಗೂ ಅವನ ಸ್ನೇಹಿತನಿಗೆ ಅಟ್ಟಾಡಿಸಿಕೊಂಡು ಹೊಡೆದು ಚಾಕು ಇರಿದಿದ್ದರು. ಇದರ ಪರಿಣಾಮ ಗಂಭೀರ ಗಾಯಗೊಂಡಿದ್ದ ಶಮೀರ್ ಎಂಬ ಯುವಕ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ.


Spread the love

LEAVE A REPLY

Please enter your comment!
Please enter your name here