ಎಐಸಿಸಿ ಕಾರ್ಯದರ್ಶಿ ವಿಷ್ಣುನಾದ ಏಜೆಂಟರಿಗೆ ಕರೆ ನೀಡಿದರು….
ವಿಜಯಸಾಕ್ಷಿ ಸುದ್ದಿ, ನವಲಗುಂದ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೂತ್ ಮಟ್ಟದ ಏಜೆಂಟರು ಯಾವ ರೀತಿ ಕಾರ್ಯನಿರ್ವಹಿಸಬೇಕು, ಪ್ರತಿ ಮತಗಟ್ಟೆಯನ್ನು ಹೇಗೆ ಜಯಿಸಬೇಕು, ಕಾಂಗ್ರೆಸ್ ಪಕ್ಷದ ಇತಿಹಾಸ, ತ್ಯಾಗ ಹಾಗೂ ಅಧಿಕಾರದಲ್ಲಿದ್ದಾಗ ಕೊಟ್ಟಿರುವ ಜನಪರ ಯೋಜನೆಗಳನ್ನು ಮನೆ ಮನೆಗೆ ತಲುಪಿಸಿ ವಿಶ್ವಾಸ ಗಳಿಸಿಕೊಳ್ಳಬೇಕೆಂದು ಎಐಸಿಸಿ ಕಾರ್ಯದರ್ಶಿ ವಿಷ್ಣುನಾದ ಏಜೆಂಟರಿಗೆ ಕರೆ ನೀಡಿದರು.
ಮಂಗಳವಾರ ಇಲ್ಲಿಯ ಕೃಷ್ಣ ಕಲ್ಯಾಣ ಕೇಂದ್ರದಲ್ಲಿ ನವಲಗುಂದ ಬ್ಲಾಕ್ ಮಟ್ಟದ ಬೂತ್ ಏಜೆಂಟರಿಗೆ ಏರ್ಪಡಿಸಿದ ಬೂತ್ ಜಯಭೇರಿ ಅಭಿಯಾನದ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡ ಅವರು ನಂತರ ಲೋಕೊಪಯೋಗಿ ಇಲಾಖೆಯ ನಿರೀಕ್ಷಣಾಲಾಯದಲ್ಲಿ ಏರ್ಪಡಿಸಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಎಲ್ಲ ಟಿಕೆಟ್ ಆಕಾಂಕ್ಷಿಗಳು, ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಈ ಭಾರಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲೇಬೇಕೆಂದು ಪಣ ತೊಟ್ಟಿದ್ದಾರೆ. ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಮಾಡಿರುವ ಭ್ರಷ್ಟಾಚಾರ, ಬೆಲೆ ಏರಿಕೆ, 40% ಕಮೀಷನ್‍ನಿಂದಾಗಿ ಜನರು ಬೇಸತ್ತು ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಪ್ರಣಾಣಿಕೆಯಲ್ಲಿ ಪ್ರಕಟವಾಗುವ ಅಂಶಗಳನ್ನು ಹಂತ ಹಂತವಾಗಿಯೇ ನಾವು ಮತದಾರರಿಗೆ ಭರವಸೆ ನೀಡುತ್ತಿದ್ದೇವೆ.
ಈಗಾಗಲೇ 200 ಯುನಿಟ್ ವಿದ್ಯುತ್ ಉಚಿತದ ಗೃಹ ಜ್ಯೋತಿ ಯೋಜನೆ ಮತ್ತು ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಮಹಿಳೆಯರ ನೆರವಿನ ಹಸ್ತವಾಗಿ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ರೂ.2000 ಕೊಡುವುದಾಗಿ ಘೋಷಣೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಮುಂಬರುವ ದಿನದಲ್ಲಿ 3ನೇ ಗ್ಯಾರಂಟಿಯನ್ನು ಸಹ ರಾಜ್ಯಾಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ ಹಾಗೂ ವಿರೋಧ ಪಕ್ಷದ ನಾಯಕರಾಗಿರುವ ಸಿದ್ರಾಮಯ್ಯನವರು ಸದ್ಯದಲ್ಲಿಯೇ ಪ್ರಕಟಿಸಲಿದ್ದಾರೆಂದು ಮುನ್ಸೂಚನೆ ನೀಡಿದರು.
ರಾಜ್ಯ ಕೆ.ಪಿ.ಸಿ.ಸಿ ಉಪಾಧ್ಯಕ್ಷರಾಗಿರುವ ಪಿ.ವಿ.ಮೋಹನ ಮಾತನಾಡಿ ಕಾಂಗ್ರೆಸ್ ಪಕ್ಷದ ಯೋಜನೆಗಳನ್ನು ಮತದಾರರಿಗೆ ಹೇಗೆ ಮನಮುಟ್ಟುವಂತೆ ತಿಳಿಸಬೇಕು, ಮತಗಟ್ಟೆÉಯನ್ನು ಹೇಗೆ ಜಯಿಸಬೇಕೆಂಬುದರ ಬಗ್ಗೆ ನಾವೆಲ್ಲರೂ ಪಾಠ ಮಾಡಿದ್ದೇವೆ. ಎಲ್ಲ ಕಾರ್ಯಕರ್ತರು ಹುಮ್ಮಸ್ಸಿನಿಂದ ಗೆಲುವನ್ನೇ ಮಾನದಂಡವಾಗಿಟ್ಟುಕೊಂಡು ಈ ಭಾರಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ತುದಿಗಾಲ ಮೇಲೆ ನಿಂತಿದ್ದಾರೆ.
ಪಕ್ಷದ ಎಲ್ಲ ಮುಖಂಡರು ಒಗ್ಗಟ್ಟಾಗಿ ಕಾರ್ಯ ನಿರ್ವಹಿಸುತ್ತಿರುವುದು ಖುಷಿಯ ವಿಚಾರವಾಗಿದೆ. ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದರೇ ಗೆಲುವು ಶತಸಿದ್ಧ ಎಂಬುದನ್ನು ಎಲ್ಲರೂ ಮನವರಿಕೆ ಮಾಡಿಕೊಂಡಿದ್ದಾರೆಂದು ಪಿ.ವಿ.ಮೋಹನ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಪಿ.ಸಿ.ಸಿ ಕಾರ್ಯದರ್ಶಿ ಆನಂದ ಗಡ್ಡದೇವರಮಠ, ಟಿಕೆಟ್ ಆಕಾಂಕ್ಷಿಗಳಾದ ಮಾಜಿ ಸಚಿವ ಕೆ.ಎನ್.ಗಡ್ಡಿ, ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ, ವಿನೋದ ಅಸೂಟಿ, ಶಿವಾನಂದ ಕರಿಗಾರ, ರಾಜಶೇಖರ ಮೆಣಸಿನಕಾಯಿ, ಚಂಬಣ್ಣ ಹಾಳದೋಟರ, ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ಉಪಾಧ್ಯಕ್ಷ ವಿಜಯಗೌಡ ಪಾಟೀಲ, ಉಸ್ತುವಾರಿ ಸುಜಾತಾ ದೊಡ್ಡಮನಿ, ಪ್ರಕಾಶಗೌಡ ಪಾಟೀಲ, ನವಲಗುಂದ ಬ್ಲಾಕ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡರ, ಅಣ್ಣಿಗೇರಿ ಬ್ಲಾಕ್ ಅಧ್ಯಕ್ಷ ಮಂಜು ಮಾಯಣ್ಣವರ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡ ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ, ಎ.ಐ.ಸಿ.ಸಿ ಕಾರ್ಯದರ್ಶಿ ವಿಷ್ಣುನಾದ, ಕೆಪಿಸಿಸಿ ಉಪಾಧ್ಯಕ್ಷ ಪಿ.ವಿ.ಮೋಹನ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.