ಅಭಿವೃದ್ಧಿ ವಿಷಯದಲ್ಲಿ ಪಕ್ಷಪಾತವಿಲ್ಲ, ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ; ಸಚಿವ ಮುನೇನಕೊಪ್ಪ

0
Spread the love

ಅಣ್ಣಿಗೇರಿಗೆ ಶಾಶ್ವತ ನೀರು ಪೂರೈಕೆ ಯೋಜನೆ ಲೋಕಾರ್ಪಣೆ

Advertisement

ವಿಜಯಸಾಕ್ಷಿ ಸುದ್ದಿ, ನವಲಗುಂದ/ಅಣ್ಣಿಗೇರಿ

ಈ ನಾಡಿನ ಜನರ ಬಹುದಿನಗಳ ಕನಸಾದ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಅವಧಿಗೆ ಮುಂಚಿತವಾಗಿಯೇ ಲೋಕಾರ್ಪಣೆ ಮಾಡಲಾಗುತ್ತಿದೆ. ಕೊಟ್ಟ ಮಾತಿನಂತೆಯೇ ರೂ.54 ಕೋಟಿ ವೆಚ್ಚದ ಈ ಕಾಮಗಾರಿಯನ್ನು ಅಣ್ಣಿಗೇರಿ ಮಹಾಜನತೆಗೆ ಸಮರ್ಪಿಸುತ್ತಿದ್ದೇನೆಂದು ಕೈಮಗ್ಗ, ಜವಳಿ ಹಾಗೂ ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೃದಯಾಂತರಾಳದ ಧನ್ಯತಾಭಾವದ ಮಾತುಗಳನ್ನಾಡಿದರು.

ಶುಕ್ರವಾರ ಅಣ್ಣಿಗೇರಿ ಸಮೀಪದ ಬಸಾಪೂರ ಗ್ರಾಮದ ಬಳಿ ನಿರ್ಮಿಸಲಾಗಿರುವ 1750 ಮಿಲಿಯನ್ ಲೀಟರ್ ಸಾಮಾರ್ಥ್ಯದ  ಜಲಾಗಾರಕ್ಕೆ ಬಾಗಿನ ಅರ್ಪಣೆ ಮಾಡುವ ಮೂಲಕ  ಲೋಕಾರ್ಪಣೆ ಮಾಡಿದರು.

ಪ್ರಧಾನಿ ನರೇಂದ್ರ ಮೋದಿಯವರು ಹುಬ್ಬಳ್ಳಿಗೆ ಆಗಮಿಸಿ ಜನಮನ ಸೆಳೆದ ರಾಷ್ಟ್ರೀಯ ಯುವಜನೋತ್ಸವದಲ್ಲಿ ಪಾಲ್ಗೊಂಡ ಶುಭ ಸಂದರ್ಭದ ಸಂತೋಷದ ಸಮಯದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ಲೋಕಾರ್ಪಣೆ ಮಾಡುತ್ತಿರುವುದು ಇನ್ನಿಲ್ಲದ ಸಂತೋಷ ತಂದಿದೆ.

ಅಷ್ಟೇ ಅಲ್ಲದೇ ರೈತರ ಬಹುದಿನಗಳ ಕನಸಾಗಿದ್ದ ಕಳಸಾ ಬಂಡೂರಿ ಯೋಜನೆಗೆ ಪ್ರಧಾನ ಮಂತ್ರಿಗಳ ಒಪ್ಪಿಗೆ ಪಡೆದು ಡಿ.ಪಿ.ಆರ್ ಅನುಮತಿ ನೀಡಿರುವುದು ರೈತರಿಗೂ ಕೂಡ ನಾವು ಮಾತು ಕೊಟ್ಟಂತೆ ನಡೆದುಕೊಂಡಿದ್ದೇವೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಕೇಂದ್ರ ಸರ್ಕಾರದೊಂದಿಗೆ ನಿರಂತರವಾಗಿ ಶ್ರಮಿಸಿದ ಫಲ ಇದಾಗಿದೆ.

ಅಭಿವೃದ್ಧಿ ವಿಷಯದಲ್ಲಿ ನಾನೆಂದು ತಾರತಮ್ಯ, ಪಕ್ಷಪಾತ ಮಾಡಿಲ್ಲ. ಬಿಜೆಪಿ ಸರ್ಕಾರ ಏನು ಮಾಡಿದೆ ಎಂಬುದು ಜನರಿಗೆ ಗೊತ್ತಿದೆ. ಕೆಲವರು ಈ ಯೋಜನೆಯಲ್ಲಿ ಬಿಜೆಪಿಯ ಕೊಡುಗೆ ಏನು ಇಲ್ಲ, ಎಲ್ಲವನ್ನು ನಾವೇ ಮಾಡಿದ್ದೇವೆಂದು ಊರೂರಲ್ಲಿ ಬ್ಯಾನರ್ ಹಾಕಿಕೊಂಡು ಪುಕ್ಕಟ್ಟೆ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ  ಈ ಶುಭ ಸಂದರ್ಭದಲ್ಲಿ ಉತ್ತರಿಸದೇ ಸೂಕ್ತ ಸಮಯದಲ್ಲಿ ತಕ್ಕ ಉತ್ತರ ನೀಡುತ್ತೇನೆಂದು ಖಾರವಾಗಿಯೆ ಹೇಳಿದರು.

ಇದೇ ಸಂದರ್ಭದಲ್ಲಿ ಅಣ್ಣಿಗೇರಿ ಪಟ್ಟಣದ ವಿವಿಧ ವಾರ್ಡಗಳಿಗೆ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿಯ ಕಾಮಗಾರಿಗಳಿಗೆ ಭೂಮಿ ಪೂಜೆ, ವಾಕಿಂಕ್ ಟ್ರ್ಯಾಕ್, ಓಪನ್ ಜಿಮ್, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಂಬ್ಯುಲೆನ್ಸ ಲೋಕಾರ್ಪಣೆ ಮಾಡುವುದರ ಜೊತೆಗೆ ರೂ.5 ಕೋಟಿ ವೆಚ್ಚದ ಅಣ್ಣಿಗೇರಿ-ನವಲಗುಂದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.  ಕೆರೆಗೆ ಜಮೀನು ನೀಡಿದ ರೈತರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ, ಪ್ರದೀಪ ಶೆಟ್ಟರ್, ಅಣ್ಣಿಗೇರಿ ದಾಸೋಹ ಮಠದ ಸದ್ಗುರು ಶಿವಕುಮಾರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಎ.ಸಿ.ವಾಲಿ ಗುರುಗಳು, ಮೃತ್ಯುಂಜಯ ಮಹಾಸ್ವಾಮೀಜಿ, ಪುರಸಭೆ ಅಧ್ಯಕ್ಷೆ ಗಂಗಾ ಕರೆಟ್ಟನವರ, ಉಪಾಧ್ಯಕ್ಷೆ ಜಯಲಕ್ಷ್ಮೀ ಜಕರಡ್ಡಿ, ಪ್ರಭಾವತಿ ಶಂಕರ ಪಾಟೀಲ ಮುನೇನಕೊಪ್ಪ, ಶಾಂತಾದೇವಿ ನಿಡವಣಿ, ಷಣ್ಮುಕ ಗುರಿಕಾರ,  ಪುರಸಭೆ ಸದಸ್ಯರು, ಕಳಸಾ ಬಂಡೂರಿ ಹೋರಾಟಗಾರರು, ನವಲಗುಂದ ಹಾಗೂ ಅಣ್ಣಿಗೇರಿ ಪಟ್ಟಣದ ಗಣ್ಯರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here