ಕೊನೆಗೂ ರಾಜೀನಾಮೆ ಸಲ್ಲಿಸಿದ ಪುರಸಭೆ ಅಧ್ಯಕ್ಷ ಮಂಜು ಜಾಧವ
ವಿಜಯಸಾಕ್ಷಿ ಸುದ್ದಿ, ನವಲಗುಂದ:
ತೀವ್ರ ಕುತೂಹಲ ಮೂಡಿಸಿದ್ದ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುವ ವಿಷಯದಲ್ಲಿ ಕೊನೆಗೂ ಅಧ್ಯಕ್ಷ ಮಂಜು ಜಾಧವ್ ಧಾರವಾಡ ಜಿಲ್ಲಾ ಉಪವಿಭಾಗಾಧಿಕಾರಿ ಅಶೋಕ ತೇಲಿ ಅವರಿಗೆ ಸೋಮವಾರ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು ಪ್ರಕರಣ ಸುಖಾಂತ್ಯ ಕಂಡಂತಾಗಿದೆ.
ಈ ಹಿಂದೆ ಯಾರಿಗೂ ಬಹುಮತ ಇಲ್ಲದ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಒಳ ಒಪ್ಪಂದ ಮಾಡಿಕೊಂಡು 30 ತಿಂಗಳ ಅಧಿಕಾರವಧಿಯಲ್ಲಿ ಮೊದಲು 15 ತಿಂಗಳು ಕಾಂಗ್ರೆಸ್ ಹಾಗೂ ಉಳಿದ 15 ತಿಂಗಳು ಬಿಜೆಪಿಯವರು ಆಡಳಿತ ಮಾಡುವುದಾಗಿ ಹಿರಿಯರ ಸಮ್ಮುಖದಲ್ಲಿ ರಾಜೀ ಸಂಧಾನ ಮಾಡಿಕೊಂಡಿದ್ದರು.
ಆ ಒಪ್ಪಂದದಂತೆ ಈಗ ಅಧ್ಯಕ್ಷ ಮಂಜು ಜಾಧವ್ ಅವರ ಅಧಿಕಾರದ ಅವಧಿ ಮುಗಿದಿದ್ದು ರಾಜೀನಾಮೆ ಕೊಡುವಂತೆ ಬಿಜೆಪಿ ಸದಸ್ಯರು ಒತ್ತಾಯಿಸಿದ್ದರು.
ಆದರೆ ಇದಕ್ಕೆ ಒಪ್ಪದ ಮಂಜು ಜಾಧವ್ ಪಕ್ಷದ ಹಿರಿಯರು ಒಳ ಒಪ್ಪಂದ ಏನು ಮಾಡಿಕೊಂಡಿದ್ದಾರೆಂಬುದು ನನಗೆ ಗೊತ್ತಿಲ್ಲ, ಈಗ ನಮ್ಮ ಪಕ್ಷಕ್ಕೆ 17 ಸದಸ್ಯರ ಬೆಂಬಲವಿದ್ದು ಸಂಪೂರ್ಣ ಬಹುಮತ ಹೊಂದಿರುವ ಕಾರಣ ರಾಜೀನಾಮೆ ಕೊಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಪಕ್ಷದ ಹಿರಿಯರು ರಾಜೀನಾಮೆ ಕೊಡುವಂತೆ ಸೂಚನೆ ನೀಡಿದರೆ ಮಾತ್ರ ಕೊಡುವುದಾಗಿ ಹೇಳಿದ್ದರು.
ಕಾಂಗ್ರೆಸ್ ಪಕ್ಷದವರು ಸಮಯ ಕಳೆಯುತ್ತಿದ್ದಾರೆ ಹೊರತು ರಾಜೀನಾಮೆ ಕೊಡುತ್ತಿಲ್ಲವಾದ ಕಾರಣ ಬಿಜೆಪಿ ಸದಸ್ಯರು ಹಾಗೂ ಪಕ್ಷದ ಮುಖಂಡರು ಪುರಸಭೆ ಎದುರು ನಿರಂತರ ಧರಣಿ ಸತ್ಯಾಗ್ರಹ ಪ್ರಾರಂಭಿಸಿದ್ದರು. ಅಷ್ಟೇ ಅಲ್ಲದೇ ರಾಜೀ ಸಂಧಾನದ ಸಂದರ್ಭದಲ್ಲಿ ಮುತುವರ್ಜಿ ವಹಿಸಿದ್ದ ಮಾಜಿ ಸಚಿವ ಕೆ.ಎನ್.ಗಡ್ಡಿ ಅವರನ್ನು ಒತ್ತಾಯಿಸಿದ್ದರು.
ಹೊಸದಾದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ಬಂದಿರಬಹುದು. ಆದರೆ ವಚನಭ್ರಷ್ಟರು ಎನಿಸಿಕೊಳ್ಳುವುದಕ್ಕಿಂತ ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಒಳಿತು ಎಂದು ಸಲಹೆ ನೀಡಿದ್ದರಿಂದ ಮಂಜು ಜಾಧವ್ ಅನಿವಾರ್ಯವಾಗಿ ರಾಜೀನಾಮೆ ಸಲ್ಲಿಸಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.
ಈ ಮೊದಲು ಜೆ.ಡಿ.ಎಸ್ 9, ಕಾಂಗ್ರೆಸ್ 7, ಬಿಜೆಪಿ 6 ಹಾಗೂ ಒಬ್ಬರು ಪಕ್ಷೇತರ ಸದಸ್ಯರಿದ್ದರು. ಬದಲಾದ ರಾಜಕೀಯದಲ್ಲಿ ಜೆಡಿಎಸ್ ಮುಖಂಡ ಎನ್.ಎಚ್.ಕೋನರಡ್ಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ಕಾರಣ ಅವರ ಜೊತೆಗಿದ್ದ ಪುರಸಭೆ ಸದಸ್ಯರು ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದು ಈಗ ಕಾಂಗ್ರೆಸ್ ಬಲ 17 ಕ್ಕೆ ಏರಿಕೆಯಾಗಿದೆ. ಬಿಜೆಪಿ ಬಳಿ ಕೇವಲ 6 ಸದಸ್ಯರಿದ್ದು ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.