ಸುರಕ್ಷಿತವಾಗಿ ರಕ್ಷಣೆ ಮಾಡಿದ ಅಧಿಕಾರಿಗಳು, ಗ್ರಾಮಸ್ಥರು
ವಿಜಯಸಾಕ್ಷಿ ಸುದ್ದಿ, ನವಲಗುಂದ:
ತಾಲ್ಲೂಕಿನ ಅಮರಗೋಳ ವ್ಯಾಪ್ತಿಯಲ್ಲಿ ಧಾರಕಾರವಾಗಿ ಮಳೆ ಸುರಿದ ಪರಿಣಾಮ ಹಳ್ಳ ಉಕ್ಕಿ ಹರಿದಿದ್ದು ಗ್ರಾಮದಲ್ಲಿರುವ ಸರ್ಕಾರಿ ಶಾಲೆ ಈಗ ನಡುಗಡ್ಡೆಯಂತಾಗಿರುವುದರಿಂದ ಸುಮಾರು 150 ವಿದ್ಯಾರ್ಥಿಗಳು ಸಿಲುಕಿ ಹಾಕಿಕೊಂಡಿರುವ ಘಟನೆ ಗುರುವಾರ ಸಂಜೆ ಸಂಭವಿಸಿದೆ.
ಜವಳಿ ಮತ್ತು ಸಕ್ಕರೆ ಖಾತೆ ಸಚಿವರಾಗಿರುವ ಶಂಕರ ಪಾಟೀಲ ಮುನೇನಕೊಪ್ಪ ಅವರ ಸ್ವಗ್ರಾಮದಲ್ಲಿಯೇ ಈ ಘಟನೆ ನಡೆದಿದೆ. ಇದರಿಂದಾಗಿ ಗಾಭರಿಗೊಂಡ ಗ್ರಾಮಸ್ಥರು ಹಾಗೂ ಬೆಳವಟಗಿ ಗ್ರಾಮ ಪಂಚಾಯತಿ ಅಧಿಕಾರಿಗಳು ಮಕ್ಕಳ ರಕ್ಷಣೆಗೆ ಮುಂದಾಗಿದ್ದರು.
ಪ್ರೌಢಶಾಲೆಯ ಸುತ್ತಲು ನೀರು ಆವರಿಸಿರುವುದರಿಂದ ವಿದ್ಯಾರ್ಥಿಗಳು ಹೊರ ಬರದಂತೆ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದು ನೀರಿನ ಹರಿವು ಕಡಿಮೆಯಾದ ನಂತರ ಮನೆಗಳಿಗೆ ಕಳುಹಿಸಲಾಗುವುದು. ಅಲ್ಲಿಯವರೆಗೆ ವಿದ್ಯಾರ್ಥಿಗಳನ್ನು ಶಾಲೆಯಲ್ಲಿಯೇ ಕೂಡಿಸಿ ಉಟೋಪಚಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.

ನಂತರ ಗ್ರಾಮಸ್ಥರು ಹಾಗೂ ಅಧಿಕಾರಿಗಳು ಹರಸಾಹಸ ಪಟ್ಟು ಟ್ರ್ಯಾಕ್ಟರ್ ಮೂಲಕ ವಿದ್ಯಾರ್ಥಿಗಳನ್ನು ಸುರಕ್ಷೀತವಾಗಿ ರಕ್ಷಣೆ ಮಾಡಿ ಕರೆತಂದು ಮನೆಗೆ ಕಳುಹಿಸಲಾಯಿತು ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವಾನಂದ ಹಂಪಿಹೋಳಿ ತಿಳಿಸಿದ್ದಾರೆ.