ಬಿಜೆಪಿ ಜೊತೆ ಹೊಂದಾಣಿಕೆಯೇ ಮಾಡಿಕೊಂಡಿಲ್ಲ ಎಂಬ ಕಾಂಗ್ರೆಸ್ ಸ್ಪಷ್ಟನೆಗೆ ಬಿಜೆಪಿ ಆಕ್ರೋಶ
ವಿಜಯಸಾಕ್ಷಿ ಸುದ್ದಿ, ನವಲಗುಂದ:
ಸ್ಥಳೀಯ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ನಾವು ಕೊಮುವಾದಿ ಬಿಜೆಪಿ ಜೊತೆ ಹೊಂದಾಣಿಕೆಯೇ ಮಾಡಿಕೊಂಡಿಲ್ಲ, ಜೆಡಿಎಸ್ ಪಕ್ಷವನ್ನು ಅಧಿಕಾರದಿಂದ ಹೊರಗಿಡಬೇಕೆಂದು ಏಕೈಕ ಉದ್ದೇಶದಿಂದ ಬಿಜೆಪಿ ಸದಸ್ಯರು ನಮ್ಮ ಅಭ್ಯರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದರು ಎಂದು ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅನೀಲಕುಮಾರ ಪಾಟೀಲ ಸ್ಪಷ್ಟನೆ ನೀಡಿದ್ದಾರೆ.

ಅಳ್ನಾವರದ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ ಸದಸ್ಯರು ಕೋಮುವಾದಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರು. ಇದೇ ಕಾರಣದಿಂದ ನವಲಗುಂದ ಪುರಸಭೆಯಲ್ಲಿ ನಾವು ಜೆಡಿಎಸ್ ಪಕ್ಷದ ಬೆಂಬಲ ಪಡೆಯಬಾರದೆಂದು ನಿರ್ಧರಿಸಿದ್ದೇವು ಹೊರತು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿರಲಿಲ್ಲ.
ಈಗ ಬಿಜೆಪಿಯವರು ಅನವಶ್ಯಕವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಒಪ್ಪಂದವಾಗಿದ್ದರೆ ಅಂದೇ ಧ್ವನಿ ಎತ್ತಿ ಬಹಿರಂಗವಾಗಿ ಹೇಳಬೇಕಾಗಿತ್ತು. ನಾವು ಎಂದೂ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ, ನಮ್ಮ ಪಕ್ಷದವರು ಯಾರಾದರೂ ಅವರೊಂದಿಗೆ ಕೈಜೊಡಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ರಾಜೀ ಮಾಡಿಕೊಳ್ಳುವ ಸಂದರ್ಭ ಎದುರಾರದರೆ ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಸ್ಪಷ್ಟನೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಈಗ 17 ಸದಸ್ಯರ ಬೆಂಬಲವಿದ್ದು ಸಂಪೂರ್ಣ ಬಹುಮತ ಹೊಂದಿದ್ದೇವೆ. ನಮ್ಮ ಪಕ್ಷದ ಒಮ್ಮತದ ಅಭ್ಯರ್ಥಿಯೊಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತೇವೆಂದು ಹೇಳಿದ್ದಾರೆ.
ವಚನಭ್ರಷ್ಟರಾದರೆ ನಿರಂತರ ಹೋರಾಟ – ಎಸ್.ಬಿ.ದಾನಪ್ಪಗೌಡರ
ಒಳ ಒಪ್ಪಂದ ಮಾಡಿಕೊಳ್ಳುವ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಅನೀಲಕುಮಾರ ಪಾಟೀಲ ಅವರು ಇರಲಿಲ್ಲ. ಸ್ಥಳೀಯ ನಾಯಕರಾದ ಮಾಜಿ ಸಚಿವ ಕೆ.ಎನ್.ಗಡ್ಡಿ, ವಿನೋದ ಅಸೂಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ಧನಗೌಡ ಹಿರೇಗೌಡರ ಹಾಗೂ ಹಿರಿಯ ಮುಖಂಡ ವಿ.ಪಿ.ಪಾಟೀಲ ಅವರಿದ್ದರು. ಕೊಟ್ಟ ಮಾತಿನಂತೆಯೇ ಅಧ್ಯಕ್ಷ ಉಪಾಧ್ಯಕ್ಷ ಕಾಂಗ್ರೆಸ್ ಪಕ್ಷದವರಿಗೆ, ಸ್ಥಾಯಿ ಕಮೀಟಿ ಚೇರಮನ್ ಬಿಜೆಪಿಯವರಿಗೆ ಕೊಡಬೇಕೆಂದು ಕರಾರು ಇದ್ದ ಕಾರಣ ಬಿಜೆಪಿ ಸದಸ್ಯ ಬಸವರಾಜ ಕಟ್ಟಿಮನಿ ಅವರನ್ನು ಸ್ಥಾಯಿ ಕಮೀಟಿ ಚೇರಮನ್‍ರಾಗಿ ಆಯ್ಕೆ ಮಾಡಿ ಅಧಿಕಾರ ಹಂಚಿಕೆ ಮಾಡಿದ್ದು ಸುಳ್ಳಾಗುವುದಿಲ್ಲ. ಸಾರ್ವಜನಿಕ ವಲಯದಲ್ಲಿ ಇದು ತೆರೆದಿಟ್ಟ ಪುಸ್ತಕದಂತಿದೆ.

ಹಿಂದೆ ತಾಲ್ಲೂಕು ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿಯೂ ಕಾಂಗ್ರೆಸ್ ಜೊತೆ ಸ್ಥಳೀಯವಾಗಿ ಹೊಂದಾಣಿಕೆ ಮಾಡಿಕೊಂಡು ಆಡಳಿತ ನಡೆಸಿದ್ದೇವೆ. ಆದರೆ ಈಗ ಹಿರಿತನದಲ್ಲಿಯೇ ಇಲ್ಲದವರ ಹೇಳಿಕೆಯನ್ನು ನಾವು ನಂಬುವುದಿಲ್ಲ. ಸ್ಥಳೀಯ ನಾಯಕರ ಮೇಲೆ ನಮಗೆ ವಿಶ್ವಾಸವಿದೆ. ಕೊಟ್ಟ ಮಾತಿನಂತೆಯೇ ಅವರು ನಡೆದುಕೊಳ್ಳುತ್ತಾರೆಂಬ ನಂಬುಗೆ ಇದೆ. ಒಂದು ವೇಳೆ ಸ್ಥಳೀಯ ನಾಯಕರು ವಚನಭ್ರಷ್ಟರಾದರೆ ನಿರಂತರ ಹೋರಾಟ ಮಾಡುತ್ತೇವೆಂದು ತಾಲ್ಲೂಕಾ ಬಿಜೆಪಿ ಅಧ್ಯಕ್ಷ ಎಸ್.ಬಿ.ದಾನಪ್ಪಗೌಡರ ಎಚ್ಚರಿಕೆ ನೀಡಿದ್ದಾರೆ.