ವಿಜಯಸಾಕ್ಷಿ ಸುದ್ದಿ, ನವಲಗುಂದ
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವೈಫಲ್ಯವನ್ನು ವಿರೋಧಿಸಿ ಸ್ಥಳೀಯ ವಿಧಾನಸಭಾ ಕ್ಷೇತ್ರದ ಮಾಜಿ ಸಚಿವ ಕೆ.ಎನ್.ಗಡ್ಡಿ ಹಾಗೂ ಧಾರವಾಡ ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ಶಿವಾನಂದ ಕರಿಗಾರ ನೇತ್ರತ್ವದಲ್ಲಿ ಡಿ.20 ರಂದು ಬೆಳಿಗ್ಗೆ 11 ಗಂಟೆಗೆ ಇಲ್ಲಿಯ ರೈತ ಭವನದ ಎದುರಿಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಭಾನುವಾರ ಇಲ್ಲಿಯ ಲೋಕೊಪಯೋಗಿ ಇಲಾಖೆಯ ನಿರೀಕ್ಷಣಾಲಯದಲ್ಲಿ ಮಾಜಿ ಸಚಿವ ಕೆ.ಎನ್.ಗಡ್ಡಿ ಹಾಗೂ ಶಿವಾನಂದ ಕರಿಗಾರ ಜಂಟಿಯಾಗಿ ಪತ್ರಿಕಾಗೋಷ್ಠಿ ಏರ್ಪಡಿಸಿ ರೈತ ಪ್ರತಿಭಟನೆಯ ರೂಪ ರೇಷೆಗಳನ್ನು ವಿವರಿಸಿದರು.
2022 ರಲ್ಲಿ ಅತಿವೃಷ್ಠಿ ಹಾಗೂ ನೆರೆಹಾವಳಿಯಿಂದ ರೈತರು ಜನಸಾಮಾನ್ಯರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಕೃಷಿ ಚಟುವಟಿಕೆಗಾಗಿ ಸಾಲ ಮಾಡಿ ದುಬಾರಿ ಬೀಜ, ಗೊಬ್ಬರ, ಕ್ರಿಮಿನಾಶಕ ಸಿಂಪರಣೆ ಹಾಗೂ ಕೃಷಿ ಕೂಲಿ ಕಾರ್ಮಿಕರ ದಿನಗೂಲಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ಅತಿವೃಷ್ಠಿಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ರೈತಾಪಿ ವರ್ಗ ದಿಕ್ಕು ತೋಚದಂತಾಗಿದ್ದಾರೆ.
ಅದರಲ್ಲೂ ದಿನಬಳಕೆಯ ವಸ್ತುಗಳ ಬೆಲೆ, ಪೆಟ್ರೋಲ್, ಡಿಸೇಲ್, ಗ್ಯಾಸ್ ಸಿಲಿಂಡರ್ ಬೆಲೆ ಗಗನಕ್ಕೆರಿದ್ದರಿಂದ ದುಡಿದ ಹಣದಲ್ಲಿ ಕುಟುಂಬ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಇತ್ತಕಡೆ ಬ್ಯಾಂಕಿನಲ್ಲಿ ಮಾಡಿದ ಸಾಲದ ಒತ್ತಡ ಸಹಿಸಲಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರ ಘೋಷಣೆ ಮಾಡಿದ ಪರಿಹಾರ ಮಾತ್ರ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಯಂತಾಗಿ ಅತಿ ಕನಿಷ್ಟವಾಗಿದೆ.
ಸರ್ಕಾರಕ್ಕೆ ರೈತಪರವಾದ ಬೇಡಿಕೆಗಳನ್ನು ಈಡೇರಿಸುವಂತೆ ಹಲವಾರು ಬಾರಿ ಮನವಿ ಮಾಡಿದರೂ ದಪ್ಪ ಚರ್ಮದ ಈ ಬಿಜೆಪಿ ಸರ್ಕಾರ ಕಣ್ಣು ಕಾಣದೇ ಕಿವಿಯೂ ಕೇಳದಂತಾಗಿ ರೈತ ಹಾಗೂ ಸಾಮಾನ್ಯ ಜನರ ವಿರೋಧಿಯಾಗಿದೆ.
ಕ್ಷೇತ್ರದಲ್ಲಿ ಬಹುತೇಕ ರಸ್ತೆಗಳಲ್ಲಿ ಗುಂಡಿ ಬಿದ್ದು ಸಂಚಾರ ಅಸ್ತವ್ಯಸ್ತವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಬಸ್‍ಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲವಾದ್ದರಿಂದ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮವರೇ ಆದ ಜಿಲ್ಲಾ ಮಂತ್ರಿಗಳಾಗಲಿ, ಮುಖ್ಯಮಂತ್ರಿಗಳಾಗಲಿ ಅಷ್ಟೇ ಅಲ್ಲದೇ ಕೇಂದ್ರ ಸಚಿವರು ಕೂಡ ಸ್ಪಂದಿಸುತ್ತಿಲ್ಲವಾದ್ದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವೈಫಲ್ಯವನ್ನು ಖಂಡಿಸಿ ಬೃಹತ್ತ ರೈತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಪ್ರತಿಭಟನೆಯಲ್ಲಿ ಸುಮಾರು 5 ಸಾವಿರ ರೈತರು ಪಾಲ್ಗೊಳ್ಳುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಪ್ರಮುಖ ಬೇಡಿಕೆಗಳಾದ ಬೆಳೆಹಾನಿ ಹಾಗೂ ಬೆಳೆವಿಮೆ ಪರಿಹಾರದ ಹಣವನ್ನು ಶೀಘ್ರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು. ಸಂಪೂರ್ಣವಾಗಿ ಬೆಳೆಸಾಲ ಮನ್ನಾ ಮಾಡಬೇಕು, ಗುಂಡಿ ಬಿದ್ದಿರುವ ಎಲ್ಲ ರಸ್ತೆಗಳನ್ನು ಹೊಸದಾಗಿ ನಿರ್ಮಿಸಬೇಕು, ಅತಿವೃಷ್ಠಿಯಿಂದ ಹಾನಿಯಾದ ಮನೆಗಳಿಗೆ ಶೀಘ್ರದಲ್ಲಿಯೇ ಪರಿಹಾರ ನೀಡಬೇಕೆಂದು ಒತ್ತಾಯಿಸುತ್ತೇವೆ.
ಬೇಡಿಕೆ ಈಡೇರಿಸದೇ ಇದ್ದಲ್ಲಿ ಕ್ಷೇತ್ರದಲ್ಲಿ ಪಾದಯಾತ್ರೆ ಮಾಡಿ ಸರ್ಕಾರ ಕಿತ್ತೊಗುವವರೆಗೂ ನಿರಂತರ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆಂದು ಮಾಜಿ ಸಚಿವ ಕೆ.ಎನ್.ಗಡ್ಡಿ, ಶಿವಾನಂದ ಕರಿಗಾರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಲತೇಶ ಗೊರವರ, ಶಿವರಾಯಪ್ಪ ಮಾದರ, ಅರುಣಕುಮಾರ ಮಜ್ಜಗಿ, ಬಸವರಾಜ ಶಲವಡಿ, ಬಸವರಾಜ ದಿವಟರ, ಶಿರಾಜಅಹ್ಮದ ಧಾರವಾಡ ಪಾಲ್ಗೊಂಡಿದ್ದರು.