ಭಕ್ತಿ ಭಾವದಿಂದ ಯಶಸ್ವಿಯಾಗಿ ನಡೆದ ಧಾರ್ಮಿಕ ಕಾರ್ಯಕ್ರಗಳು
ವಿಜಯಸಾಕ್ಷಿ ಸುದ್ದಿ, ನವಲಗುಂದ
ದೇವರನ್ನು ನಂಬುವ, ನಂಬದೇ ಇರುವ ಜನರಿದ್ದಾರೆ. ಆದರೆ ನಂಬುವವರ ಸಂಖ್ಯೆ ಹೆಚ್ಚಾಗಿರುವುದರಿಂದಲೇ ದೇವಸ್ಥಾನಗಳ ಸಂಖ್ಯೆಯು ಹೆಚ್ಚಾಗುತ್ತಿವೆ. ಸಾವಿರಾರು ವರ್ಷಗಳ ಹಿಂದೆ ಈ ದೇಶದಲ್ಲಿ ಕಟ್ಟಿರುವ ದೇವಸ್ಥಾನಗಳು ಇಂದಿಗೂ ವಿಜ್ಞಾನಕ್ಕೆ ಸವಾಲಾಗಿವೆ ಎಂದು ಶಿರಹಟ್ಟಿಯ ಭಾವೈಕ್ಯತಾ ಮಹಾಸಂಸ್ಥಾನ ಮಠದ ಫಕ್ಕೀರದಿಂಗಾಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.
ಗುರುವಾರ ಬಸ್ತಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಸಿದ್ಧಿವಿನಾಯಕ ಹಾಗು ಆಂಜನೇಯ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳ ಸಮಾರೋಪ ಧರ್ಮಸಭೆಯಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಾವಿರಾರು ವರ್ಷಗಳ ಹಿಂದೆ ಯಾವುದೇ ಯಂತ್ರಗಳ ಸಹಾಯವಿಲ್ಲದೇ ಸಮುದ್ರದ ಆಳದಲ್ಲಿ ನಿರ್ಮಿಸಿರುವ ರಾಮೇಶ್ವರ ದೇವಾಲಯದಲ್ಲಿನ ಸಿಹಿನೀರಿನ ಬಾವಿಗಳು, ತಂಜಾವೂರಿನ ಬೃಹದೇಶ್ವರ ದೇವಾಲಯದ ಗೋಪುರದ ವಿಶೇಷತೆ, ಒಡಿಸ್ಸಾದಲ್ಲಿರುವ ಪುರಿ ಜಗನ್ನಾಥ ದೇವಾಲಯದ ಧ್ವಜದ ವಿಶೇಷತೆಗಳು ಇಂದಿಗೂ ವಿಜ್ಞಾನಕ್ಕೆ ಸವಾಲಾಗಿವೆ. ದಿಕ್ಕಿಲ್ಲದವರಿಗೆ ದೇವರೆ ಗತಿ, ದಿಕ್ಕಿಲ್ಲದ ದೇವಸ್ಥಾನಗಳಿಗೆ ಭಕ್ತರೆ ಗತಿ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು.
ದೇವಸ್ಥಾನ ಕಟ್ಟುವುದು ಮುಖ್ಯವಲ್ಲ, ಶರಣರು ಹೇಳಿದಂತೆ ದೇಹವನ್ನು ದೇವಾಲಯವನ್ನಾಗಿ ಮಾಡಿಕೊಂಡು ಜಾತ್ಯಾತೀತ ಮನೊಭಾವನೆಯಿಂದ ನಂಬುಗೆ ವಿಶ್ವಾಸ ಸಂಸ್ಕಾರದಿಂದ ನಡೆದುಕೊಳ್ಳಬೇಕು.
ಇಲ್ಲಿ ನಿರ್ಮಿಸಿರುವ ದೇವಾಲಯವು ಕೂಡ ಅತೀ ಅಚ್ಚುಕಟ್ಟಾಗಿದ್ದು ದೇವಸ್ಥಾನ ನಿರ್ಮಾಣಕ್ಕೆ ಸಹಕರಿಸಿದ ಎಲ್ಲ ದಾನಿಗಳಿಗೂ, ಭಕ್ತರಿಗೆ ಶುಭವಾಗಲಿ ಎಂದು ಹಾರೈಸಿದರು.
ಸಿದ್ಧಿವಿನಾಯಕ ನಗರ ಹಾಗೂ ಲಕ್ಷ್ಮೀ ಪಾರ್ಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್. ವಾಯ್. ಬಾರಕೇರ ಅಧ್ಯಕ್ಷತೆ ವಹಿಸಿ ದೇವಸ್ಥಾನ ನಿರ್ಮಾಣಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿ ಖರ್ಚು ವೆಚ್ಚದ ವಿವರಗಳನ್ನು ತಿಳಿಸಿದರು.

ಜ.22 ರಿಂದ ನಿರಂತರವಾಗಿ ಐದು ದಿನ ದೇವಸ್ಥಾನದಲ್ಲಿ ನಡೆದ ನೂತನ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಈ ನಾಡಿನ ಹರಗುರು ಚರಮೂರ್ತಿಗಳು, ಜನಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ದಾನಿಗಳು, ಮಾಜಿ ಸೈನಿಕರು, ಪತ್ರಕರ್ತರು, ಹಾಸ್ಯ ಹಾಗೂ ಜಾನಪದ ಕಲಾವಿದರು, ಎಲೆ ಮರೆ ಕಾಯಿಯಂತೆ ಸೇವೆ ಸಲ್ಲಿಸಿದ ಎಲ್ಲರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರತಿನಿತ್ಯವು ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. .
ದೇವಸ್ಥಾನ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಡಿ.ಜೆ.ನಾಯ್ಕರ, ಪ್ರಧಾನ ಕಾರ್ಯದರ್ಶಿ ಎಸ್. ಜಿ. ಇನಾಮತಿ, ಸದಸ್ಯರಾದ ಎಂ.ಎನ್.ಗಂಗನಗೌಡ್ರ, ಬಿ.ಎಸ್.ಕಟ್ಟಿಮನಿ, ವಿ.ಎಚ್.ಕಿರೇಸೂರ, ಎಂ.ಆರ್.ಹುಯಿಲಗೋಳ, ಆರ್.ಬಿ.ಬಾಳನಗೌಡ್ರ, ಪಿ.ಆರ್.ಹಿರೇಮಠ, ಜೆ.ಎ.ರಂಗಣ್ಣವರ, ಆರ್.ಎಚ್.ನೇಗಲಿ, ಬಿ.ಎಸ್.ಬಾಗಲಕೋಟಿ, ಎಂ.ಎಫ್.ಮಾಳವಾಡ ಹಾಗೂ ಪಿ.ಎಂ.ಹಡಪದ ಉಪಸ್ಥಿತರಿದ್ದರು.