ವಿಜಯಸಾಕ್ಷಿ ಸುದ್ದಿ, ನವಲಗುಂದ
ಪಟ್ಟಣದ ಜಲದೇವತೆಯಂದೇ ಖ್ಯಾತಿ ಪಡೆದಿರುವ ಚೆನ್ನಮ್ಮನ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದ್ದರೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರು ಶುದ್ಧ ಕುಡಿಯುವ ನೀರಿಗಾಗಿ ಪರದಾಡಬೇಕಾದಂತಹ ಪರಿಸ್ಥಿತಿ ನಿರ್ಮಾಣ ಉಂಟಾಗಿದೆ.
ಸುಮಾರು 50 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣದಲ್ಲಿ ಬೇಸಿಗೆಯಲ್ಲಿ ಶುದ್ದ ಕುಡಿಯುವ ನೀರು ಪೂರೈಕೆಗೆ ಯಾವುದೇ ತೊಂದರೆಯಾಗಬಾರದೆಂದು ಚೆನ್ನಮ್ಮ ಜಲಾಗಾರದಲ್ಲಿ ಮುಂದಿನ ಐದು ತಿಂಗಳಿಗಾಗುವಷ್ಟು ನೀರಿನ ಶೇಖರಣೆ ಮಾಡಲಾಗಿದೆ.
ಕೊಟ್ಯಂತರ ರೂಪಾಯಿ ಖರ್ಚು ಮಾಡಿ ನೀರೆತ್ತುವ ಪಂಪ್‍ಗಳನ್ನು ಅಳವಡಿಸಲಾಗಿದೆ. ಹೊಸದಾಗಿ ಪೈಪ್‍ಲೈನ್‍ಗಳ ಜೋಡಣೆ ಮಾಡಲಾಗಿದ್ದು, ನಿರ್ವಹಣೆಗೆ ಬೇಕಾದಂತಹ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಒಂದುವೇಳೆ ನೀರೆತ್ತುವ ಪಂಪ್ ದುರಸ್ತಿ ಬಂದರೆ ನೀರು ಪೂರೈಕೆಯಲ್ಲಿ ಯಾವುದೇ ತೊಂದರೆಯಾಗಬಾರದೆಂದು ಮುನ್ನೆಚ್ಚರಿಕೆಯಾಗಿಯೇ ಮೀಸಲಾಗಿ ಸುಸಜ್ಜಿತವಾದ ಇನ್ನೊಂದು ಪಂಪ್‍ನ್ನು ಕಾಯ್ದಿರಿಸುವ ವ್ಯವಸ್ಥೆ ಇಲ್ಲಿ ಅಳವಡಿಸಲಾಗಿದೆ.
ಆದರೆ ನಿರ್ವಹಣೆ ಮಾಡಬೇಕಾದ ಸಿಬ್ಬಂದಿ ಹಾಗೂ ಮುಖ್ಯಾಧಿಕಾರಿಗಳ ನಿಷ್ಕಾಳಜಿಯಿಂದಾಗಿ ನೀರೆತ್ತುವ ಎರಡು ಪಂಪ್‍ಗಳು ಸುಟ್ಟಿವೆ. ಇದರಿಂದಾಗಿ ನಿರಂತರವಾಗಿ ಪಟ್ಟಣಕ್ಕೆ ನೀರು ಪೂರೈಕೆ ಮಾಡಲಾಗದೇ ಸಿಬ್ಬಂದಿ ಕೈಚೆಲ್ಲಿ ಕುಳಿತಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆಯೇ ಒಂದು ಪಂಪ್‍ಸೆಟ್ ಸುಟ್ಟಿತ್ತು, ಪಂಪ್‍ಸೆಟ್ ದುರಸ್ತಿ ಮಾಡಿಸುವಂತೆ ತಮ್ಮ ಮೇಲಾಧಿಕಾರಿಗಳಿಗೆ ಸಿಬ್ಬಂದಿ ಹೇಳುತ್ತಲೇ ಬಂದಿದ್ದರಾದರೂ ನೀರು ಪೂರೈಕೆಯಲ್ಲಿ ಯಾವುದೇ ತೊಂದರೆಯಾಗಬಾರದೆಂದು ಕಾಯ್ದಿರಿಸಿದ ಪಂಪ್‍ಸೆಟ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿತ್ತು. ಈಗ ಕಾಯ್ದಿರಿಸಿದ ಪಂಪ್‍ಸೆಟ್ ಕೂಡ ಸುಟ್ಟಿರುವುದರಿಂದ ನೀರೆತ್ತಬೇಕಾದ ಎರಡು ಪಂಪ್‍ಸೆಟ್‍ಗಳು ಬಂದ್ ಆಗಿದ್ದರ ಫಲವೇ ಪಟ್ಟಣಕ್ಕೆ ಶುದ್ದ ಕುಡಿಯುವ ನೀರು ಪೂರೈಕೆ ಸ್ಥಗಿತಗೊಂಡಿದೆ.
ಈ ಮೊದಲು ಕುಡಿಯುವ ನೀರಿನ ಪೂರೈಕೆಯಲ್ಲಿ ತೊಂದರೆಯಾದರೇ ಸಾರ್ವಜನಿಕರು ಪಟ್ಟಣದ ಹೃದಯಭಾಗದಲ್ಲಿರುವ ನೀಲಮ್ಮನ ಕೆರೆಗೆ ಹೋಗಿ ನೀರು ತರುತ್ತಿದ್ದರು. ಈಗ ನೀಲಮ್ಮನ ಕೆರೆಯ ನೀರನ್ನೆಲ್ಲ ಹೊರಹಾಕಿ ಹೂಳೆತ್ತುವ, ತಡೆಗೊಡೆ, ಪಾದಚಾರಿಗಳ ಮಾರ್ಗದ ದುರಸ್ತಿ ಕೆಲಸ ಮಾಡುತ್ತಿರುವುದರಿಂದ ನೀರಿಲ್ಲದೇ ಜನರು ಪರದಾಡುತ್ತಿದ್ದಾರೆ.
ಚೆನ್ನಮ್ಮನ ಜಲಾಶಯದಿಂದಲೂ ನೀರು ಪೂರೈಕೆಯಾಗುತ್ತಿಲ್ಲ, ನೀಲಮ್ಮನ ಕೆರೆಯಲ್ಲಿಯೂ ನೀರಿಲ್ಲದೇ ಸಾರ್ವಜನಿಕರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಸುಸಜ್ಜಿತವಾದ ವ್ಯವಸ್ಥೆಯನ್ನು ಹಾಳು ಮಾಡಿರುವ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಶಿಸ್ತು ಕ್ರಮ ಜರುಗಿಸಬೇಕು, ಎರಡು ಪಂಪ್‍ಸೆಟ್‍ಗಳು ಸುಟ್ಟು ಹೋಗುವವರೆಗೆ ಅಧಿಕಾರಿಗಳು ಯಾಕೆ ನಿರ್ಲಕ್ಷ್ಯ ವಹಿಸಿದರು. ಮೇಲಿಂದ ಮೇಲೆ ಪಂಪ್‍ಸೆಟ್‍ಗಳು ಸುಟ್ಟು ಹೋಗುತ್ತಿರುವುದೇಕೆ ? ನಿರ್ವಹಣೆ ಮಾಡಬೇಕಾದ ಸಿಬ್ಬಂದಿಯ ನಿಷ್ಕಾಳಜಿಯೇ ? ತಾಂತ್ರಿಕ ಸಮಸ್ಯೆ ಏನಾದರೂ ಇದೆಯೇ ? ಅಥವಾ ಕುಡಿಯುವ ನೀರು ಪೂರೈಕೆಯಲ್ಲಿ ತೊಂದರೆ ಉಂಟು ಮಾಡಿದರೆ ಬೇಕಾದಷ್ಟು ಹಣವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ ಎಂಬ ದುರುದ್ದೇಶವೇನಾದರೂ ಅಡಗಿದೆಯೇ ಎಂಬೆಲ್ಲ ಪ್ರಶ್ನೆಗಳು ಎದುರಾಗಿದ್ದು, ಮೇಲಾಧಿಕಾರಿಗಳು ತನಿಖೆ ಕೈಗೊಂಡು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರ ಒತ್ತಾಸೆಯಾಗಿದೆ.
ಕೊಟ್ಯಾಂತರ ರೂಪಾಯಿ ಖರ್ಚು ಮಾಡಿ ಅಳವಡಿಸಲಾಗಿರುವ ನೀರೆತ್ತುವ ಪಂಪ್‍ಸೆಟ್‍ಗಳು ಮೇಲಿಂದ ಮೇಲೆ ಸುಡುತ್ತಿರುವುದಾದರೂ ಯಾತಕ್ಕಾಗಿ, ವಿದ್ಯುತ್ ಪೂರೈಕೆಯಲ್ಲಿ ಏನಾದರೂ ತೊಂದರೆಯಾಗಿದೆಯೇ ಎಂಬೆಲ್ಲ ಯಕ್ಷ ಪ್ರಶ್ನೆಗಳಿಗೆ ಸಂಬಂದಪಟ್ಟ ಅಧಿಕಾರಿಗಳು ಉತ್ತರಿಸಬೇಕಾಗಿದೆ.
ಗ್ಯಾರಂಟಿ ನಂಬಿ ತಪ್ಪಾಯಿತು
ಮೇಲಿಂದ ಮೇಲೆ ಪಂಪ್‍ಸೆಟ್‍ಗಳು ದುರಸ್ತಿ ಬರುತ್ತಿರುವ ಹಿನ್ನಲೆಯಲ್ಲಿ ಗ್ಯಾರಂಟಿ ಕೊಡುವಂತೆ ದುರಸ್ತಿದಾರರಿಗೆ ಮನವಿ ಮಾಡಿದ್ದೇವು. ಹುಬ್ಬಳ್ಳಿಯ ಇಲೆಕ್ಟ್ರಿಕಲ್ ಇಂಜನಿಯರ್ ಅಂಗಡಿಯವರಿಗೆ ಉಚಿತವಾಗಿ ದುರಸ್ತಿ ಮಾಡಿ ಕೊಡುವಂತೆ ಒತ್ತಾಯಿಸಿದ್ದವು. ಆದರೆ ಅವರು ಇಲೆಕ್ಟ್ರಿಕಲ್ ಮಷಿನ್‍ಗಳಿಗೆ ಗ್ಯಾರಂಟಿ ಕೊಡುವುದಿಲ್ಲ ಎಂದು ಹೇಳುತ್ತಿದ್ದರಿಂದ, ಹಗ್ಗ ಜಗ್ಗಾಟದ ನಡುವೆ ವಿಳಂಬವಾಗಿ ಈ ಸಮಸ್ಯೆ ಎದುರಾಗಿದೆ. ಸೋಮವಾರದಿಂದ ನೀರಂತರ ನೀರು ಸರಬರಾಜು ಮಾಡಲು ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆಂದು ಪುರಸಭೆಯ ಕಿರಿಯ ಅಭಿಯಂತರ ಪ್ರವೀಣ ಗ್ವಾರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.