ಭೂತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ರೈತರು
ವಿಜಯಸಾಕ್ಷಿ ಸುದ್ದಿ, ನವಲಗುಂದ
ರೈತರ ಸಂಭ್ರಮದ ಹಬ್ಬವಾಗಿರುವ ಎಳ್ಳು ಅಮವಾಸ್ಯೆಯ ದಿನದಂದು ಭೂತಾಯಿಗೆ ವಿಶೇಷ ಪೂಜೆ ಸಲ್ಲಿಸಿ ಚರಗಾ ಚೆಲ್ಲುವುದು ಈ ನಾಡಿನ ಸಂಪ್ರದಾಯ.

ಪ್ರತಿ ವರ್ಷದಂತೆ ಈ ವರ್ಷವು ರೈತರು ತಮ್ಮ ಕುಟುಂಬ ಪರಿವಾರದೊಂದಿಗೆ ಚಕ್ಕಡಿ, ಟ್ರ್ಯಾಕ್ಟರ್, ಕಾರು, ದ್ವಿಚಕ್ರವಾಹನದಲ್ಲಿ ಹೊಸ ಹೊಸ ಬಟ್ಟೆಗಳನ್ನು ತೊಟ್ಟು ಜಮೀನಿನಲ್ಲಿನ ಬನ್ನಿಗಿಡಕ್ಕೆ ವಿಶೇಷ ಪೂಜೆ ಸಲ್ಲಿಸಿ ಸಾಮೂಹಿಕ ಭೋಜನ ಮಾಡುತ್ತಿರುವ ದೃಶ್ಯಗಳು ಶುಕ್ರವಾರ ಕಂಡುಬಂದವು.

ಹಿಂಗಾರು ಹಂಗಾಮಿನಲ್ಲಿ ಸ್ವಲ್ಪ ತಡವಾದರೂ ಮಳೆಯಾಗಿದ್ದರಿಂದ ಹೊಲ ಗದ್ದೆಗಳೆಲ್ಲ ಹಚ್ಚು ಹಸಿರಾಗಿ ಭೂತಾಯಿ ಕಂಗೊಳಿಸುತ್ತಿದ್ದಳು. ರೈತರು ಬಂಧುಬಳಗವನ್ನು ಕರೆದುಕೊಂಡು ಸಂತಸದಿಂದ ಭೂತಾಯಿ ಮಡಿಲಿಗೆ ಉಡಿ ತುಂಬಿ ರುಚಿಕಟ್ಟಾದ ಹುರಕ್ಕಿ, ಶೇಂಗಾ, ಎಳ್ಳು ಹೋಳಿಗೆ, ಕರಿಗಡಬು, ಪುಂಡಿಪಲ್ಲೆ, ಕುಚ್ಚಿದ ಕಾರ, ಮೊಸರು, ಗುರಳ್ಳ ಹಿಂಡಿ, ಉಂಡಗಡಬು ಹೀಗೆ ವಿವಿಧ ಭಕ್ಷಗಳನ್ನು ಸವಿದು ಸಂತಸಪಟ್ಟರು.
ರೈತ ಮಹಿಳೆಯರು ತಲೆಮೇಲೆ ಬುತ್ತಿಗಂಟು ಹೊತ್ತುಕೊಂಡು ಚಿಕ್ಕ ಮಕ್ಕಳೊಂದಿಗೆ ಸಾಮೂಹಿಕ ಪೂಜೆ ಸಲ್ಲಿಸಿ ಭೋಜನ ಮಾಡಿದ್ದು ಕಣ್ಣುತುಂಬುವಂತಿತ್ತು.
..