ವಿಜಯಸಾಕ್ಷಿ ಸುದ್ದಿ, ನವಲಗುಂದ
ಮುಂಬರುವ 2023 ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್‍ಗೆ ಹೆಚ್ಚಿನ ಬೇಡಿಕೆ ಇದ್ದರೂ ಕೊನೆಕ್ಷಣದಲ್ಲಿ ಟಿಕೆಟ್ ಒಬ್ಬರಿಗೆ ಮೀಸಲಾಗಿದ್ದರಿಂದ ಬಂಡಾಯ ಅಭ್ಯರ್ಥಿಗಳು ಈಗಾಗಲೇ ಜೆಡಿಎಸ್ ಬಾಗಿಲಿನ ಕದ ತಟ್ಟುತ್ತಿರುವುದು ಗೌಪ್ಯವಾಗಿ ಉಳಿದಿಲ್ಲವಾದರೂ ಜೆಡಿಎಸ್ ಹೈಕಮಾಂಡ್ ತಟಸ್ಥ ನಿಲುವು ಕಾಯ್ದುಕೊಂಡು ಪಕ್ಷಕ್ಕೆ ಬರುವವರಿಗೆ ತೆರೆದಿದೆ ಮನೆ ಓ.. ಬಾ ಅತಿಥಿ ಎಂದು ಕಾದು ಕುಳಿತಂತೆ ಕಾಣುತ್ತಿದೆ.
ಈ ಮೊದಲು ಜೆಡಿಎಸ್ ಪಕ್ಷದಲ್ಲಿದ್ದ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದರಿಂದ ಮೂಲ ಜೆ.ಡಿ.ಎಸ್ ಕಾರ್ಯಕರ್ತರಲ್ಲಿ ಈಗ ಎಲ್ಲಿಲ್ಲದ ಆಕ್ರೋಶ, ಕಿಚ್ಚು ಹೊತ್ತಿಕೊಂಡಿದೆ. ಎನ್.ಎಚ್.ಕೋನರಡ್ಡಿ ತಾವು ಪಕ್ಷಬಿಟ್ಟು ಹೋಗುವುದಿರಲಿ ಜೊತೆಗೆ ಪುರಸಭೆಯ ಎಲ್ಲ ಸದಸ್ಯರನ್ನು ತಮ್ಮ ಜೊತೆಗೆ ಕರೆದುಕೊಂಡು ಹೋಗಿ ಇದ್ದ ಮನೆಯನ್ನು ಬರಿದು ಮಾಡಿ ಪಕ್ಷಕ್ಕೆ ದ್ರೋಹ ಮಾಡಿದ್ದು ಕಾರ್ಯಕರ್ತರಲ್ಲಿ ಕಿಚ್ಚು ಹೆಚ್ಚು ಮಾಡಿದಂತೆ ಕಾಣುತ್ತಿದೆ.

ಕಳೆದ ಒಂದು ವರ್ಷದಿಂದ ಹೊಸದಾಗಿ ಪಕ್ಷ ಸಂಘಟನೆಗೆ ಹಲವಾರು ನಾಯಕರು ಹಗಲಿರುಳು ಶ್ರಮಿಸುತ್ತಿದ್ದು ಈ ಭಾರಿ ಹೇಗಾದರೂ ಮಾಡಿ ಜೆ.ಡಿ.ಎಸ್ ಗೆಲ್ಲಿಸಲೇ ಬೇಕೆಂದು ಧಾರವಾಡ ಜಿಲ್ಲಾಧ್ಯಕ್ಷ ಬಿ.ಬಿ.ಗಂಗಾಧರಮಠ ನೇತ್ರತ್ವದಲ್ಲಿ ಪಣ ತೊಟ್ಟು ನಿಂತಿದ್ದಾರೆ.

ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳು: ಪ್ರಮುಖವಾಗಿ ರಾಜ್ಯ ಕಾರ್ಯದರ್ಶಿಗಳಾದ ಪ್ರಕಾಶ ಅಂಗಡಿ, ದೇವರಾಜ ಕಂಬಳಿ, ನವಲಗುಂದ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಶ್ರೀಶೈಲ ಮೂಲಿಮನಿ, ಧಾರವಾಡ ಜಿಲ್ಲಾ ರೈತ ಘಟಕದ ಅಧ್ಯಕ್ಷ ಶಿವಶಂಕರ ಕಲ್ಲೂರ, ಜಿಲ್ಲಾ ಉಪಾಧ್ಯಕ್ಷ ಜಿ.ಎನ್.ತೋಟದ, ಅಣ್ಣಿಗೇರಿ ಅಂಜುಮನ್ ಸಂಸ್ಥೆಯ ಹಾಲಿ ಅಧ್ಯಕ್ಷ ಐ.ಜಿ.ಸಾಮುದ್ರಿ ಹಾಗೂ ಅಣ್ಣಿಗೇರಿ ಪುರಸಭೆಯ ಮಾಜಿ ಉಪಾಧ್ಯಕ್ಷ ನಿಂಗಪ್ಪ ಬಡೆಪ್ಪನವರ ಜೆಡಿಎಸ್ ಟಿಕೆಟ್‍ಗಾಗಿ ಅರ್ಜಿ ಸಲ್ಲಿದ್ದಾರೆ.
ಅಷ್ಟೇ ಅಲ್ಲದೇ ಒಗ್ಗಟ್ಟಾಗಿ ಎಲ್ಲರೂ ಜೊತೆಗೂಡಿಕೊಂಡು ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಪ್ರತಿ ಗ್ರಾಮ ಗ್ರಾಮಗಳಿಗೂ ಹೋಗಿ ಸಂಘಟನೆ ಮಾಡುತ್ತಿರುವ ಅವರು ರಾಜ್ಯದ ಹಿತ ಕಾಪಾಡಲು ಪ್ರಾದೇಶಿಕ ಪಕ್ಷದ ಅವಶ್ಯಕತೆ ಮತ್ತು ಮಹತ್ವಾಕಾಂಕ್ಷೆಯ ಪಂಚರತ್ನ ಯೋಜನೆ ಅನುಷ್ಠಾನದಿಂದ ಮಾತ್ರ ರಾಜ್ಯದ ಹಾಗೂ ರೈತರ ಅಭಿವೃದ್ಧಿ ಸಾಧ್ಯ ಎಂಬುದನ್ನು ಕರಪತ್ರದ ಮೂಲಕ ಸಾರಿ ಸಾರಿ ಹೇಳುತ್ತಿರುವುದು ಕಂಡುಬಂದಿದೆ.

ಅಣ್ಣಿಗೇರಿ ನಗರ ಘಟಕದ ಅಧ್ಯಕ್ಷ ವಿರೇಶ ಶಾನಭೋಗರ ಕೂಡ ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇದರಲ್ಲಿಯೇ ಕೆಲವರು ನಾವೇ ನಿಯೋಜಿತ ಅಭ್ಯರ್ಥಿಗಳೆಂದು ಪ್ರಚಾರ ಮಾಡುತ್ತಿರುವುದು ಇರುಸು ಮುರುಸು ಉಂಟು ಮಾಡಿದೆಯಾದರೂ, ನಮ್ಮ 7 ಜನರಲ್ಲಿ ಯಾರಿಗಾದರೂ ಟಿಕೆಟ್ ಕೊಡಿ ಜೆಡಿಎಸ್ ಅಭ್ಯರ್ಥಿಯನ್ನು ಒಮ್ಮತದಿಂದ ಚುನಾಯಿಸುತ್ತೇವೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರ ಮುಂದೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆಂದು ಜೆ.ಡಿ.ಎಸ್. ಮೂಲಗಳು ತಿಳಿಸಿವೆ.

ಒಂದು ವೇಳೆ ಜಿಲ್ಲಾಧ್ಯಕ್ಷರಾಗಿರುವ ಬಿ.ಬಿ.ಗಂಗಾಧರಮಠ ಅವರಿಗೆ ಟಿಕೆಟ್ ಕೊಟ್ಟರೇ ಅವರನ್ನು ಗೆಲ್ಲಿಸುತ್ತೇವೆಂದು ಹೇಳಿದ್ದಾರೆ. ಆದರೆ ಬಿ.ಬಿ.ಗಂಗಾಧರಮಠ ಅವರು ಆರೋಗ್ಯ ದೃಷ್ಟಿಯಿಂದ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ತೆರೆದಿದೆ ಮನೆ ಓ….. ಬಾ ಅತಿಥಿ :
ರೈತರ ಜೀವನಾಡಿ, ಬಂಡಾಯದ ನೆಲದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕೆಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಕೆಚ್ ಹಾಕಿದಂತೆ ಕಾಣುತ್ತಿದ್ದು, ಈಗ ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಿರುವವರಲ್ಲಿ ಯಾರು ಉತ್ತಮರು, ಗೆಲ್ಲುವ ಅಭ್ಯರ್ಥಿ ಯಾರು ? ಎಂಬ ಲೆಕ್ಕಾಚಾರ ಹಾಕುತ್ತಿರುವುದು ಒಂದೆಡೆಯಾದರೆ, ಕಾಂಗ್ರೆಸ್ ಟಿಕೆಟ್ ಮುಂಚೂಣಿಯಲ್ಲಿರುವ ಕೆ.ಎನ್.ಗಡ್ಡಿ, ಎನ್.ಎಚ್.ಕೋನರಡ್ಡಿ ಹಾಗೂ ವಿನೋದ ಅಸೂಟಿ ಮೂವರಲ್ಲಿ ಒಬ್ಬರಿಗೆ ಮಾತ್ರ ಟಿಕೆಟ್ ಸಿಗುವುದರಿಂದ, ಬಂಡಾಯ ಏಳುವ ಪ್ರಮುಖ ಕಾಂಗ್ರೆಸ್ ನಾಯಕರಿಗಾಗಿ ತೆರೆದಿದೆ ಮನೆ ಓ… ಬಾ ಅತಿಥಿ ಎಂದು ತಮ್ಮ ಪಕ್ಷದ ಅಭ್ಯರ್ಥಿಯ ಹೆಸರು ಘೋಷಣೆ ಮಾಡದೇ ಗೌಪ್ಯತೆಯನ್ನು ಕಾಯ್ದುಕೊಂಡಿದ್ದಾರೆ. ಈಗಾಗಲೇ ಪ್ರಮುಖ ಮೂವರು ಕಾಂಗ್ರೆಸ್ ಅಭ್ಯರ್ಥಿಗಳು ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದಾರೆಂಬುದು ತಿಳಿದುಬಂದಿದೆ.
ಪಕ್ಷದ ಸಿದ್ದಾಂತ ಒಪ್ಪಿ ಯಾರೇ ಬರಲಿ ಸೇರ್ಪಡೆ ಮಾಡಿಕೊಳ್ಳುತ್ತೇವೆ – ಬಿ.ಬಿ.ಗಂಗಾಧರಮಠ, ಧಾರವಾಡ ಜಿಲ್ಲಾಧ್ಯಕ್ಷ
ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿಗಳು ಜೆಡಿಎಸ್ ಪಕ್ಷಕ್ಕೆ ಬಂದರೆ ಸೇರ್ಪಡೆ ಮಾಡಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಜಿಲ್ಲಾಧ್ಯಕ್ಷರಾಗಿರುವ ಬಿ.ಬಿ.ಗಂಗಾಧರಮಠ ಮಾತನಾಡಿ ನಮ್ಮ ಪಕ್ಷದ ಸಿದ್ದಾಂತವನ್ನು ಒಪ್ಪಿಕೊಂಡು ಪಕ್ಷಕ್ಕೆ ಬರುವುದಾದರೆ ಸೇರ್ಪಡೆ ಮಾಡಿಕೊಳ್ಳುತ್ತೇವೆ. ರಾಜಕಾರಣದಲ್ಲಿ ಯಾರು ಸನ್ಯಾಸಿಗಳಲ್ಲ, ಏನು ಬೇಕಾದರೂ ಆಗಬಹುದು. ಒಂದು ವೇಳೆ ಎನ್.ಎಚ್.ಕೋನರಡ್ಡಿಯವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಸಿಗದಿದ್ದರೇ ಜೆಡಿಎಸ್ ಟಿಕೆಟ್ ಕೋಡುತ್ತೀರಾ ಎಂಬ ಪ್ರಶ್ನೆಗೆ ಅವರು, ಎನ್.ಎಚ್.ಕೋನರಡ್ಡಿಯವರು ನಮ್ಮ ಪಕ್ಷದ ನಾಯಕರಾಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆ ಈಗಲು ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಅವರು ಪಕ್ಷಕ್ಕೆ ಮರಳಿ ಬರುವುದಾದರೆ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರ ಜೊತೆ ಮಾತನಾಡಿ ನಿರ್ಧಾರ ಪ್ರಕಟಿಸುತ್ತೇವೆಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.