ವಿಜಯಸಾಕ್ಷಿ ಸುದ್ದಿ, ನವಲಗುಂದ:
ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಒಳಒಪ್ಪಂದದಂತೆ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಅವಧಿ ಮುಗಿದಿದ್ದು ರಾಜೀನಾಮೆ ಕೊಡುವಂತೆ ಬಿಜೆಪಿ ಪಕ್ಷದವರು ಪುರಸಭೆ ಎದುರು ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದನ್ನು ತಾತ್ಕಾಲಿಕವಾಗಿ ಹಿಂಪಡೆದುಕೊಂಡಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿದ ತಾಲ್ಲೂಕಾ ಬಿಜೆಪಿ ಅಧ್ಯಕ್ಷ ಎಸ್.ಪಿ.ದಾನಪ್ಪಗೌಡರ, ಒಳ ಒಪ್ಪಂದದಂತೆ ಎರಡೂ ಪಕ್ಷದವರಿಗೆ ಅಧಿಕಾರ ಹಂಚಿಕೆ ಮಾಡಲಾಗಿತ್ತು. ಈಗ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಉಪಾಧ್ಯಕ್ಷರ ಅವಧಿ ಮುಗಿದಿರುವ ಕಾರಣ ರಾಜೀನಾಮೆ ಕೊಡುವಂತೆ ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಗೆ ಮಣಿದ ಪುರಸಭೆ ಅಧ್ಯಕ್ಷ ಮಂಜುನಾಥ ಜಾಧವ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ ಉಪಾಧ್ಯಕ್ಷರಾದ ಖೈರುನಬಿ ನಾಶಿಪುಡಿ ಇನ್ನು ರಾಜೀನಾಮೆ ಕೊಡದ ಕಾರಣ ಪ್ರತಿಭಟನೆಯನ್ನು ಮುಂದುವರೆಸಿದ್ದೇವು. ಆದರೆ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಗಳು ಇರುವ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂಬ ಕಾರಣದಿಂದ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆದಿದ್ದೇವೆ ಎಂದರು.
ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆಂಬ ವಿಶ್ವಾಸದಲ್ಲಿದ್ದೇವೆ. ಒಂದು ವೇಳೆ ರಾಜೀನಾಮೆ ಕೊಡದಿದ್ದರೆ ಮುಂದೆ ಮತ್ತೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.
ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡದ ಕಾರಣ ಖೈರುನಬಿ ನಾಶಿಪುಡಿ ಅವರ ಪುತ್ರ ಸುಲೇಮಾನ ನಾಶಿಪುಡಿ ಅವರನ್ನು ಸಂಪರ್ಕಿಸಿದಾಗ, ನಮ್ಮ ತಾಯಿಯವರು ಊರಲ್ಲಿರದ ಕಾರಣ ರಾಜೀನಾಮೆ ಕೊಟ್ಟಿಲ್ಲ, ಅವರು ಬಂದ ತಕ್ಷಣ ರಾಜೀನಾಮೆ ಕೊಡಿಸುತ್ತೇವೆಂದು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ಬಿಸಿತುಪ್ಪ
ಬಹುಮತ ಇಲ್ಲದ ಸಂದರ್ಭದಲ್ಲಿ ಒಳ ಒಪ್ಪಂದ ಮಾಡಿಕೊಂಡಿದ್ದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಅಧಿಕಾರ ಹಂಚಿಕೆ ಮಾಡಿಕೊಂಡಿದ್ದವು. ಆದರೆ ಬದಲಾದ ರಾಜಕೀಯ ಬೆಳವಣಿಗೆಯಿಂದಾಗಿ ಈಗ ಕಾಂಗ್ರೆಸ್ ಪಕ್ಷದ ಬಲ 17 ಸ್ಥಾನಕ್ಕೇರಿದ್ದು ಸ್ಪಷ್ಟ ಬಹುಮತದಲ್ಲಿದ್ದಾರೆ. ಪಕ್ಷದ ಹಿರಿಯರ ಸಲಹೆಯಂತೆ ಅಧ್ಯಕ್ಷರು ರಾಜೀನಾಮೆ ಸಲ್ಲಿಸಿದ್ದಾರೆ, ಉಪಾಧ್ಯಕ್ಷರು ಸಲ್ಲಿಸಬಹುದು. ಆದರೆ ಅಧಿಕಾರವನ್ನು ಈಗ ಬಿಜೆಪಿಗೆ ಬಿಟ್ಟುಕೊಡುವುದಾದರೂ ಹೇಗೆಂಬ ಪ್ರಶ್ನೆ ಉದ್ಭವಿಸಿದ್ದು ನುಂಗಲಾರದ ಬಿಸಿತುಪ್ಪವಾಗಿದೆ. ಅಧಿಕಾರ ಬಿಟ್ಟುಕೊಡುವ ಬಗ್ಗೆ ಕಾಂಗ್ರೆಸ್ ಪಕ್ಷದ ಮುಖಂಡರು ಯಾರು ಸ್ಪಷ್ಟನೆ ಕೊಡುತ್ತಿಲ್ಲ. ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಕೋಮುವಾದಿ ಬಿಜೆಪಿ ಪಕ್ಷದ ಜೊತೆ ಕೈಜೋಡಿಸಿದರೆ ಸಾರ್ವಜನಿಕ ವಲಯದಲ್ಲಿ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ. ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಬೇಕೆಂಬ ಉದ್ದೇಶದಿಂದಲೇ ಜೆಡಿಎಸ್ ಪಕ್ಷದ 9 ಸದಸ್ಯರು ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ.
ಈಗ ಬಿಜೆಪಿಯೊಂದಿಗೆ ಈ ಹಿಂದೆ ನುಡಿದಂತೆ ನಡೆದುಕೊಳ್ಳಬೇಕೆ ಅಥವಾ ಸಂಪೂರ್ಣ ಬಹುಮತ ಇರುವ ಕಾರಣ ನಾವೇ ಅಧಿಕಾರದ ಗದ್ದುಗೆ ಏರಬೇಕೆಂಬ ಪ್ರಶ್ನೆ ಕಾಂಗ್ರೆಸ್ ಪಕ್ಷದಲ್ಲಿ ಕಗ್ಗಾಂಟಾಗಿರುವ ಕಾರಣ ಸ್ಥಳೀಯ ನಾಯಕರು ಚೆಂಡನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಬಳಿ ತೆಗೆದುಕೊಂಡು ಹೋಗಿದ್ದು ಅವರು ಕೊಡುವ ಸೂಚನೆಯಂತೆಯೇ ನಡೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂದು ಕಾಂಗ್ರೆಸ್ ವಲಯದಿಂದ ತಿಳಿದುಬಂದಿದೆ.
ಬಿಜೆಪಿಗೆ ಅಧಿಕಾರ ಸಿಕ್ಕರೆ ನಮ್ಮವರೆ ಸಚಿವರಿದ್ದಾರೆ, ನಮ್ಮದೇ ಡಬಲ್ ಎಂಜಿನ್ ಸರ್ಕಾರವಿದ್ದು ಹೆಚ್ಚು ಅನುದಾನ ತಂದು ಪಟ್ಟಣದ ಅಭಿವೃದ್ಧಿ ಮಾಡುವುದಾಗಿ ನಗರ ಘಟಕದ ಅಧ್ಯಕ್ಷ ಅಣ್ಣಪ್ಪ ಬಾಗಿಯವರು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಕಗ್ಗಂಟನ್ನು ಬಗೆಹರಿಸುವಲ್ಲಿ ನಿಸ್ಸಿಮರಾಗಿರುವ ಬಿಜೆಪಿಯ ಮುಖಂಡ ರಾಯನಗೌಡ ಪಾಟೀಲ ಯಾವ ನಡೆ ಇಡುತ್ತಾರೆಂಬುದು ಬಹು ಚರ್ಚಿತ ವಿಷಯವಾಗಿದೆ.