ವಿಜಯಸಾಕ್ಷಿ ಸುದ್ದಿ, ನವಲಗುಂದ
ಜಗತ್ತಿನಲ್ಲಿಯೇ ಅತ್ಯಂತ ಬಲಿಷ್ಠವಾದ ಪ್ರಜಾಪ್ರಭುತ್ವ ಹೊಂದಿರುವ ಈ ದೇಶದಲ್ಲಿ ಪ್ರಜೆಗಳಿಂದಲೇ ನೇರವಾಗಿ ಸರ್ಕಾರವನ್ನು ಆಯ್ಕೆ ಮಾಡುವ ಹಕ್ಕು ಸಂವಿಧಾನಾತ್ಮಕವಾಗಿ ಬಂದಿರುವುದರಿಂದ ಭವ್ಯ ಭಾರತದ ನಿರ್ಮಾಣಕ್ಕಾಗಿ ಮುಂಬರುವ ಚುನಾವಣೆಯಲ್ಲಿ ನಿರ್ಭೀತರಾಗಿ ಧರ್ಮ, ಜಾತಿ, ಮತ, ಭಾಷೆ ಹಾಗೂ ಇನ್ನಿತರ ಯಾವುದೇ ಪ್ರೇರಣೆಗಳಿಗೆ ಪ್ರಭಾವಿತರಾಗದೆ ಪ್ರಭಲ ಅಸ್ತ್ರವಾಗಿರುವ ಮತವನ್ನು ಕಡ್ಡಾಯವಾಗಿ ಚಲಾಯಿಸುವಂತೆ ತಹಸೀಲ್ದಾರ್ ಅನಿಲ ಬಡಿಗೇರ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.
ಬುಧವಾರ ಕಾಲೇಜು ಶಿಕ್ಷಣ ಇಲಾಖೆ, ನ್ಯಾಯಾಂಗ ಇಲಾಖೆ ಹಾಗೂ ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಯುವ ಮತದಾರರನ್ನು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮತದಾನದ ಹಕ್ಕು ನೀಡಲಾಗಿದೆ. ಇಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದರಿಂದ ತಮಗೆ ನೀಡಿರುವ ಪರಮಾಧಿಕಾರವನ್ನು ಉಪಯೋಗಿಸಿಕೊಂಡು ಶೇ.100 ರಷ್ಟು ಮತ ಚಲಾವಣೆ ಮಾಡಿದಾಗ ಮಾತ್ರ ರಾಷ್ಟ್ರೀಯ ಮತದಾರರ ದಿನಾಚರಣೆಗೆ ಒಂದು ಅರ್ಥ ಬರುತ್ತದೆ ಎಂದು ತಹಸೀಲ್ದಾರ್ ಅನಿಲ ಬಡಿಗೇರ ತಿಳಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಕೀಲರಾದ ಎಸ್.ವಿ.ಮರಡ್ಡಿ ಮಾತನಾಡಿ, ಮತದಾನ ಎಂಬುದೇ ಇದೊಂದು ‘ಉಡುಗೊರೆ’ ಇದ್ದಂತೆ. ಯೋಚನೆ ವಿವೇಚನೆ ಮಾಡಿ ನಿರ್ಭಿಡೆಯಿಂದ ಮತದಾನ ಮಾಡುವ ಮೂಲಕ ತಮಗಿಷ್ಟವಾದ ಸೂಕ್ತ ಜನಪ್ರತಿನಿಧಿಯನ್ನು ಚುನಾಯಿಸಿದಾಗ ಮಾತ್ರ ಸಮಾಜ ಸುಧಾರಣೆ ಸಾಧ್ಯ ಎಂದು ಸಲಹೆ ನೀಡಿ ಕಾನೂನಿನ ಬಗ್ಗೆ ಅರಿವು ಮೂಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಮಹಾದೇವ ಬಾಗಡಿ, ನಮ್ಮ ಮಹಾವಿದ್ಯಾಲಯದಲ್ಲಿ ಬಹುತೇಕ ಎಲ್ಲ ವಿದ್ಯಾರ್ಥಿಗಳು ಮತದಾನದ ಹಕ್ಕು ಪಡೆದವರಿದ್ದಾರೆ. ಶೇ.100 ರಷ್ಟು ಮತದಾನ ಮಾಡಲು ಎಲ್ಲರೂ ಸಂಕಲ್ಪ ಮಾಡಬೇಕು. ಮಹಾವಿದ್ಯಾಲಯದಿಂದ ಎಲ್ಲ ಸಹಕಾರ ನೀಡಿ ಮತದಾರರ ದಿನಾಚರಣೆಯನ್ನು ಯಶಸ್ವಿಗೊಳಿಸುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಅನಿಲ ಬಡಿಗೇರ ವಿದ್ಯಾರ್ಥಿಗಳಿಗೆ ಮತದಾರರ ಪ್ರತಿಜ್ಞಾ ವಿಧಿ ಭೋದನೆ ಮಾಡಿ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿಯನ್ನು ವಿತರಣೆ ಮಾಡಿದರು. ನಂತರ ಕಾಲೇಜಿನ ಎಲ್ಲ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿ ‘ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ’ ಎಂಬ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು.
ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ.ಮಲ್ಲಾಡದ, ತಾಲೂಕು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಅಧ್ಯಕ್ಷ ಚರಂತಯ್ಯ ಹಿರೇಮಠ, ಉಪ ತಹಸೀಲ್ದಾರ್ ಎಸ್.ಸಿ.ಹುಕ್ಕೇರಿ, ಶಿಕ್ಷಕ ಎಸ್.ಬಿ.ಬೆಂಚಿಗೇರಿ ಪಾಲ್ಗೊಂಡಿದ್ದರು. ಸಂಯೋಜಕರಾದ ವಿನಾಯಕ ಮಿರಜಕರ ಸ್ವಾಗತಿಸಿದರು. ಸವಿತಾ ಚಿಕ್ಕಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಸೂಡಿ ವಂದಿಸಿದರು.
ದಿ ಬ್ಯಾಲೆಟ್ ಇಸ್ ದಿ ಸ್ಟ್ರಾಂಗರ್ ದ್ಯಾನ್ ಬುಲೆಟ್
ಮತದಾನ ಮಾಡುವುದಕ್ಕಿಂತ ಶ್ರೇಷ್ಟವಾದುದು ಯಾವುದು ಇಲ್ಲ. ನಾನು ಮತದಾನವನ್ನು ಕಡ್ಡಾಯವಾಗಿ ಮಾಡಿಯೇ ಮಾಡುತ್ತೇನೆ. ನಾನು ಸಮರ್ಥವಾಗಿ ಮತ ಚಲಾವಣೆ ಮಾಡದಿದ್ದರೇ ಸಮಾಜದಲ್ಲಿ ನಾನು ಇದ್ದು ಸತ್ತಂತೆ ಮತ್ತು ನಿಷ್ಕ್ರೀಯವಾದಂತೆ ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿ ಹೇಳಿದ ಅವರು ಅಮೇರಿಕದ ಅಧ್ಯಕ್ಷರಾಗಿದ್ದ ಅಬ್ರಾಂ ಲಿಂಕನ್ ಹೇಳಿದ ‘ದಿ ಬ್ಯಾಲೆಟ್ ಇಸ್ ದಿ ಸ್ಟ್ರಾಂಗರ್ ದ್ಯಾನ ಬುಲೆಟ್’ ಎಂಬ ಮಾತನ್ನು ಸವಿತಾ ಚಿಕ್ಕಣ್ಣವರ ನೆನಪಿಸಿದರು.