ಗದಗ-ಬೆಟಗೇರಿ ನಗರಸಭೆ ಚುನಾವಣೆ ವಿಶೇಷ

ವಿಜಯಸಾಕ್ಷಿ ವಿಶೇಷ, ಗದಗ
ಗದಗ-ಬೆಟಗೇರಿ ನಗರಸಭೆ ಚುನಾವಣೆ ಅವಳಿ ನಗರದ ಜನರಲ್ಲಿ ದಿನದಿಂದ ದಿನಕ್ಕೆ ಸಾಕಷ್ಟು ಕುತೂಹಲ ಕೆರಳಿಸಿದ್ದು, ಹಲವು ವೈಶಿಷ್ಟ್ಯಗಳನ್ನು ಕಂಡಿದೆ. ಕೆಲವು ಅಭ್ಯರ್ಥಿಗಳಿಗೆ ಊಹೆಗೂ ಮೀರಿ ಟಿಕೆಟ್ ಸಿಕ್ಕಿದೆ. ಇನ್ನು ಕೆಲವರು ನಿರೀಕ್ಷಿಸದೆ ಚುನಾವಣಾ ಅಖಾಡಕ್ಕೆ ಇಳಿದಿದ್ದು, ಹಲವರ ಮಧ್ಯೆ ನಿರೀಕ್ಷಿಸದಷ್ಟು ಸ್ಪರ್ಧೆ ಏರ್ಪಟ್ಟಿದೆ.
ಅವಳಿ ನಗರ ಸ್ಥಳೀಯ ಸಂಸ್ಥೆಯ ಚುನಾವಣೆಯ ಕಣದಲ್ಲಿ ಸಂಬಂಧಿಗಳು, ಸ್ನೇಹಿತರು, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು ಎದುರು ಬದುರಾಗಿದ್ದಾರೆ. ಚುನಾವಣೆಗೂ ಮುನ್ನ ಸ್ನೇಹಿತರು, ಸಂಬಂಧಿಗಳಾಗಿದ್ದವರು ಇದೀಗ ಎದುರಾಳಿಗಳಾಗಿ ಚುನಾವಣೆಗೆ ಅಣಿಯಾಗಿದ್ದಾರೆ.
ಒಬ್ಬ ಸಾಮಾನ್ಯ ಚಹಾವಾಲಾ ಸಹಿತ ಈ ದೇಶದ ಪ್ರಧಾನಿಯಾಗಬಲ್ಲ ಎಂಬ ಜನ ಸಂದೇಶ ಸಾರಿರುವ ಬಿಜೆಪಿ, ಗದಗ-ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಚಹಾ ಮಾರಾಟ ಮಾಡುವ ವ್ಯಕ್ತಿಗೆ ಟಿಕೆಟ್ ನೀಡಿದೆ.
ಸ್ನೇಹಿತರ ಸವಾಲ್

ನಗರದ ವಾರ್ಡ್ ನಂ.19ರಲ್ಲಿ ಕಾಂಗ್ರೆಸ್‌ನ ಸಂಗಮೇಶ ಕವಳಿಕಾಯಿ ಹಾಗೂ ಬಿಜೆಪಿಯ ಮಹಾಂತೇಶ ನಲವಡಿ, ವಾರ್ಡ್ ನಂ. 7ರಲ್ಲಿ ಬಿಜೆಪಿಯ ರಾಘವೇಂದ್ರ ಯಳವತ್ತಿ ಹಾಗೂ ಕಾಂಗ್ರೆಸ್‌ನ ನಾಗಲಿಂಗ ಐಲಿ ಆತ್ಮೀಯ ಸ್ನೇಹಿತರಾಗಿದ್ದಾರೆ. ರಾಘವೇಂದ್ರ ಹಾಗೂ ನಾಗಲಿಂಗ 2013ರ ನಗರಸಭೆ ಚುನಾವಣೆಯಲ್ಲಿ ಗೆದ್ದು ಬಂದ ಮೇಲೆ ಇಬ್ಬರ ನಡುವೆ ಸ್ನೇಹ ಗಾಢವಾಗಿ ಬೆಳೆದಿತ್ತು. ಈ ಸ್ನೇಹಕ್ಕೆ ಎಂಟು ವರ್ಷಗಳಾಗಿವೆ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಹಿಂದುಳಿದ ವರ್ಗ ‘ಎ’ ಮೀಸಲಾತಿ ಬಂದಿರುವ ಕಾರಣ ಇಬ್ಬರು ಒಂದೇ ಪಕ್ಷದಲ್ಲಿದ್ದುಕೊಂಡೇ ಟಿಕೆಟ್ ಗಾಗಿ ಬೇಡಿಕೆ ಇಟ್ಟಿದ್ದರು.

ಆದರೆ, ಟಿಕೆಟ್ ಸಿಗುವುದು ಅನುಮಾನ ಎಂಬುದನ್ನು ಅರಿತ ಐಲಿ ಅವರು ಕೊನೆಗಳಿಗೆಯಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ನೇಹಿತನ ಎದುರಾಳಿಯಾಗಿ ಪರಸ್ಪರ ಸವಾಲೊಡ್ಡಿದ್ದು, ಅವಳಿ ನಗರದಲ್ಲಿ ಭಾರೀ ಸಂಚಲನ ಮೂಡಿಸಿದೆ.
ದೂರದ ಸಂಬಂಧಿಗಳ ತ್ರಿಕೋನ ಸ್ಪರ್ಧೆ
ಗದಗ-ಬೆಟಗೇರಿಯ ವಾರ್ಡ್ ನಂ. 2ರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಕ್ಕೆ ಮೂವರು ದೂರದ ಸಂಬಂಧಿಗಳ ಮಧ್ಯೆ ಜಟಾಪಟಿ ನಡೆದಿದೆ. ಕಾಂಗ್ರೆಸ್‌ನ ಅಭ್ಯರ್ಥಿ ಸುರೇಶ ಕಟ್ಟಿಮನಿ, ಜೆಡಿಎಸ್‌ನ ರಮೇಶ ಗಡಾದ ಹಾಗೂ ಪಕ್ಷೇತರ ಅಭ್ಯರ್ಥಿ ಮೋಹನ್ ಕಟ್ಟಿಮನಿ ಕಣದಲ್ಲಿದ್ದಾರೆ. ಮೋಹನ್ ಕಟ್ಟಿಮನಿ ಕಾಂಗ್ರೆಸ್ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದರು. ಆದರೆ, ಪಕ್ಷದ ಟಿಕೆಟ್ ಸಿಗದೆ ಅಸಮಾಧಾನಗೊಂಡಿದ್ದು, ದೂರದ ಸಂಬಂಧಿ ಸುರೇಶ ಕಟ್ಟಿಮನಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ನಗರಸಭೆಯ ಅಧಿಕಾರದ ಮೆಟ್ಟಿಲೇರಿರುವ ಸುರೇಶ ಕಟ್ಟಿಮನಿ ಪುನಃ ಆಯ್ಕೆಯಾಗುವ ವಿಶ್ವಾಸದಲ್ಲಿಯೇ ವಾರ್ಡ್ ತುಂಬೆಲ್ಲ ಬಿರುಸಿನ ಪ್ರಚಾರ ನಡೆಸಿದ್ದಾರೆ. ಇತ್ತ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಬಂಡಾಯ ಅಭ್ಯರ್ಥಿ ಮೋಹನ್ ಕಟ್ಟಿಮನಿ ಹಾಗೂ ರಮೇಶ ಗಡಾದ ತಮ್ಮ ಬೆಂಬಲಿಗರೊಂದಿಗೆ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ.
ಮತದಾರರಿಂದಲೇ ಹಣ ಪಡೆದು ಮತಭಿಕ್ಷೆ
ಯಾವುದೇ ಚುನಾವಣೆಗಳಲ್ಲಿ ಅಭ್ಯರ್ಥಿಗಳು ಮತದಾರರಿಗೆ ಆಸೆ, ಆಮಿಷಗಳನ್ನೊಡ್ಡಿ ಮತ ಪಡೆಯುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ, ಅವಳಿ ನಗರದ ಪಕ್ಷೇತರ ಅಭ್ಯರ್ಥಿಗಳಾದ ವಾರ್ಡ್ 15ರ ವಿಶ್ವನಾಥ ಶೀರಿ ಹಾಗೂ ವಾರ್ಡ್ 21ರ ಮಂಜುನಾಥ ಬಿ.ಮುಳಗುಂದ ಚುನಾವಣಾ ಖರ್ಚಿಗಾಗಿ ಮತದಾರರಿಂದಲೇ ಹಣ ಪಡೆದು ಮತ ನೀಡುವಂತೆ ವಿಭಿನ್ನವಾಗಿ ಪ್ರಚಾರ ನಡೆಸಿದ್ದಾರೆ. ಮತದಾರರಿಗೆ ಹಣ ಹಂಚಿ, ಚುನಾವಣೆ ಗೆಲ್ಲುವ ಅಭ್ಯರ್ಥಿಗಳ ನಡುವೆ ವಿಶ್ವನಾಥ ಅವರ ವಿನೂತನ ಪ್ರಚಾರ ಶೈಲಿಗೆ ಅವಳಿ ನಗರದ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಚಹಾವಾಲಾಗೆ ಬಿಜೆಪಿ ಟಿಕೆಟ್!
ದೇಶದ ಪ್ರಧಾನಿ ನರೇಂದ್ರ ಮೋದಿ ರೈಲು ನಿಲ್ದಾಣವೊಂದರಲ್ಲಿ ಚಹಾ ಮಾರಾಟ ಮಾಡುತ್ತಿದ್ದರು ಎಂಬ ಬಗ್ಗೆ ಕೇಳಿದ್ದೇವೆ. ಸದ್ಯ ಅವರೀಗ ದೇಶದ ಉನ್ನತ ಹುದ್ದೆ ಅಲಂಕರಿಸಿರುವುದು ಇತಿಹಾಸ. ಅದರಂತೆ, ಗದಗ ಬೆಟಗೇರಿಯ ವಾರ್ಡ್ ನಂ. 23ರ ಬಿಜೆಪಿ ಟಿಕೆಟ್ ಅನ್ನು ಚೆನ್ನಪ್ಪ ದ್ಯಾಂಪುರ ಅವರಿಗೆ ನೀಡಿದೆ. ಬಿಜೆಪಿಯಲ್ಲಿ ಸಕ್ರಿಯರಾಗಿರುವ ಅವರು, ನಗರದ ರಾಚೋಟೇಶ್ವರ ದೇವಸ್ಥಾನದ ಎದುರುಗಡೆ ಚಹಾ ಅಂಗಡಿ ನಡೆಸುತ್ತಿದ್ದಾರೆ. ಗದಗ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚಹಾವಾಲಾನನ್ನು ಗೆಲ್ಲಿಸುವ ಮೂಲಕ ಇತಿಹಾಸ ಮರುಕಳಿಸಲು ಬಿಜೆಪಿ ಯತ್ನಿಸುತ್ತಿದೆ. ಅಲ್ಲದೇ, ಪಕ್ಷವು ಸಾಮಾನ್ಯ ಕಾರ್ಯಕರ್ತನನ್ನೂ ಗುರುತಿಸಿ ಟಿಕೆಟ್ ನೀಡುತ್ತಿದೆ ಎಂಬ ಸಂದೇಶ ಸಾರುತ್ತಿದೆ. ಆದರೆ, ಬಿಜೆಪಿ ತಂತ್ರ ಫಲಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉಳ್ಳವರೇ ಚುನಾವಣೆಗೆ ಸ್ಪರ್ಧಿಸಬೇಕೆಂಬ ಮನೋಭಾವನೆ ಬಂದಿದೆ. ಆದರೆ, ಹಣವಿಲ್ಲದಿದ್ದರೂ ಸ್ಪರ್ಧಿಸಬಹುದು ಎಂಬ ಸಂದೇಶ ಸಾರುವ ಸಲುವಾಗಿ ಮತದಾರರಿಂದಲೇ ಹಣ ಪಡೆದು ಮತಭಿಕ್ಷೆ ಕೇಳಲಾಗುತ್ತಿದೆ. ವಾರ್ಡ್‌ನಲ್ಲಿ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ಜನಸಾಮಾನ್ಯನೂ ಆಸೆ, ಆಮಿಷವೊಡ್ಡದೆ ಗೆಲ್ಲಬಹುದು ಎಂಬ ವಿಶ್ವಾಸ ಮೂಡಿಸಿದೆ.
ವಿಶ್ವನಾಥ ಶೀರಿ, ಪಕ್ಷೇತರರ ಅಭ್ಯರ್ಥಿ
ನಗರಸಭೆ ಚುನಾವಣೆಯಲ್ಲಿ ಒಂದು ಪಕ್ಷವನ್ನು ಪ್ರತಿನಿಧಿಸುತ್ತಿರುವ ಕಾರಣ ಒಬ್ಬರಿಗೊಬ್ಬರು ಎದುರಾಳಿಗಳಾಗಿದ್ದು, ವೈಯಕ್ತಿಕವಾಗಿ ಒಳ್ಳೆಯ ಸ್ನೇಹಿತರಾಗಿದ್ದೇವೆ. ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ಆ ಬಾಂಧವ್ಯ ಮುಂದುವರೆಯಲಿದೆ.
ಹೆಸರು ಹೇಳಲಿಚ್ಚಿಸದ ಅಭ್ಯರ್ಥಿ