ವಿಜಯಸಾಕ್ಷಿ ಸುದ್ದಿ, ಗದಗ:
ಕೋವಿಡ್ ಸೋಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಜ.19ರವರೆಗೆ ಜಾರಿಯಲ್ಲಿದ್ದ ನೈಟ್ ಕರ್ಪ್ಯೂ ಹಾಗೂ ವಾರಾಂತ್ಯ ಕರ್ಪ್ಯೂನ ಅವದಿಯನ್ನು ಜ.31ರವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಆದೇಶಿಸಿದ್ದಾರೆ.
ಜಿಲ್ಲೆಯಲ್ಲಿ ಎಂದಿನಂತೆ ಜನೇವರಿ 31ರವರೆಗೆ ರಾತ್ರಿ 10ರಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಪ್ಯೂ ಜಾರಿಯಲ್ಲಿರಲಿದೆ. ಅದರಂತೆ, ಶುಕ್ರವಾರ ರಾತ್ರಿ 10 ರಿಂದ ಸೋಮವಾರ ಬೆಳಗಿನ 5ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ತಿಳಿಸಿದ್ದಾರೆ.
ವೈಕುಂಠ ಏಕಾದಶಿ ಹಾಗೂ ಸಂಕ್ರಾಂತಿ ಹಬ್ಬಗಳ ಪ್ರಯುಕ್ತ ದೇವಾಲಯದ ಶಾಸ್ತ್ರ ಸಂಪ್ರದಾಯದಂತೆ ದೇವಾಲಯಗಳ ಒಳ ಆವರಣದಲ್ಲಿ ಮಾತ್ರ ದೈನಂದಿನ ಪೂಜಾ ಕೈಂಕರ್ಯಗಳನ್ನು ನಡೆಸಲು ಅನುಮತಿಸಿದ್ದಾರೆ. ವೈಕುಂಠ ಏಕಾದಶಿ ದಿನದಂದು ಈಗಾಗಲೇ ನಿಗದಿಪಡಿಸಿರುವಂತೆ ಪೂರ್ಣ ಪ್ರಮಾಣದ ಕೋವಿಡ್ ಲಸಿಕೆ ಪಡೆದ 50ಜನರಿಗೆ ಮಾತ್ರ ಒಂದು ಬಾರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಸೂಚಿಸಿದ್ದಾರೆ.
ಈ ವೇಳೆ ಯಾವುದೇ ಇನ್ನಿತರ ಸೇವೆ ಇತ್ಯಾದಿಗಳಿಗೆ ಅವಕಾಶವಿರುವುದಿಲ್ಲ. ಹಬ್ಬಗಳ ಆಚರಣೆಯ ವೇಳೆ ಮೆರವಣಿಗೆ, ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ. ಒಂದು ವೇಳೆ ಈ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ
.