ವಿಜಯಸಾಕ್ಷಿ ಸುದ್ದಿ, ಗದಗ
ಜನರ ಮನಸ್ಸನ್ನು ಕೆಡಿಸಿ, ಗೊಂದಲ ಸೃಷ್ಟಿಸಿ, ರಾಜಕೀಯ ಲಾಭ ಪಡೆಯುವ ಉದ್ದೇಶ ಹೊಂದಿದ ಬಿಜೆಪಿಯ ಪ್ರಯತ್ನ ವಿಫಲವಾಗಲಿದೆ. ಭ್ರಷ್ಟಾಚಾರಾದ ಮೂಲಕ ಅಭಿವೃದ್ಧಿ ಕೆಲಸಗಳನ್ನು ಸ್ಥಗಿತಗೊಳಿಸಿದರು, ಬಡವರ ಕಲ್ಯಾಣ ಕೆಲಸಗಳನ್ನು ನಿರ್ಲಕ್ಷಿಸಿದರು. ಇದೇ ಕಾರಣಕ್ಕೆ ಬಿಜೆಪಿ ಸೋಲನುಭವಿಸುವಂತಾಯಿತು ಎಂದು ಕಾನೂನು-ಸಂಸದೀಯ ವ್ಯವಹಾರಗಳು, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ ಹೇಳಿದರು.
ಗದುಗಿನಲ್ಲಿ ಶುಕ್ರವಾರ `ಅಕ್ಕಿ ಹೊಂದಿಸಲು ಕೈಲಾಗದ ಸಿಎಂ’ ಎಂಬ ಬಿಜೆಪಿ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಅವರ ಪಕ್ಷದವರೇ ಆ ಸೋಲೊಪ್ಪಿಕೊಂಡಿದ್ದಾರೆ. ಅಕ್ಕಿ ಹೊಂದಿಸಲು ಆಗದಂತೆ ಪರಿಸ್ಥಿತಿ ನಿರ್ಮಾಣ ಮಾಡಿದ್ದೇ ಕೇಂದ್ರ ಸರ್ಕಾರ.
ಖಾಸಗಿಯವರಿಗೆ ಅಕ್ಕಿ ಮಾರಾಟ ಮಾಡಿ, ಆದರೆ ರಾಜ್ಯ ಸರ್ಕಾರಕ್ಕೆ ಅಕ್ಕಿ ಕೊಡಬೇಡಿ ಎಂದು ಹುರಿದುಂಬಿಸಿದ್ದೇ ರಾಜ್ಯ ಬಿಜೆಪಿ. ನೈತಿಕವಾಗಿ, ಕಾನೂನಾತ್ಮಕವಾಗಿ ಹಾಗೂ ಸಂವಿಧಾನಾತ್ಮಕವಾಗಿ ಇದು ಸರಿಯಾ? ಬಡವರ ಕಲ್ಯಾಣ ಕಾರ್ಯಕ್ರಮವನ್ನು ಬುಡಮೇಲು ಮಾಡುವ ನಿಮ್ಮ ಪ್ರಯತ್ನಕ್ಕೆ ಸರಿಯಾದ ಉತ್ತರ ನೀಡಬೇಕು ಎಂದರು.
ಇದರಿಂದ ಆರ್ಥಿಕ ಹೊರೆಯಾಗುತ್ತದೆ ಎಂಬುದು ಸತ್ಯವಾಗಿದ್ದರೂ, ನಾವು ಅದನ್ನು ನಿಭಾಯಿಸುತ್ತೇವೆ. ನಾವೇನೂ ಬಡವರಿಗೆ ದಾನ ಮಾಡುತ್ತಿಲ್ಲ. ಬಡವರಿಗೆ ಸಿಗಬೇಕಾಗಿರುವ ಹಕ್ಕದು. ನಮ್ಮ ದೇಶದಲ್ಲಿ ಬೆವರು ಸುರಿಸಿ ದುಡಿಯುವ ಜನಕ್ಕೆ ದಾನ ಮಾಡುವ ಶಕ್ತಿ ಯಾವ ಸರ್ಕಾರಕ್ಕೂ ಇಲ್ಲ. ನಾವು ಚುನಾವಣೆ ಸಮಯದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುತ್ತಿದ್ದೇವೆ.
ಕಾಂಗ್ರೆಸ್ ಪಕ್ಷವನ್ನು ಕಟ್ಟಿಹಾಕಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿಗೆ ಗೊತ್ತಾಗಿದೆ. ಹೀಗಾಗಿ, ಅಕ್ಕಿ ಕೊಡುತ್ತೇವೆಂದರೆ, ಅಕ್ಕಿಯಲ್ಲೂ ಕಲ್ಲು ಹುಡುಕುತ್ತಾರೆ. ಅಕ್ಕಿ ಬದಲು 34 ರೂ. ಕೊಡುತ್ತೇವೆಂದರೆ, 60 ಕೊಡಿ ಎಂದು ಅಸ್ತವ್ಯಸ್ತವಾಗಿ ಮಾತಾಡಲು ಪ್ರಾರಂಭಿಸಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಬಡವರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಉದ್ದೇಶದಿಂದ ಅಕ್ಕಿಯ ಬದಲಾಗಿ ಹಣ ಕೊಡಬೇಕೆಂದು ನಿರ್ಧಾರ ಕೈಗೊಳ್ಳಲಾಗಿದೆ. ಐದು ಕೆಜಿ ಅಕ್ಕಿ ಕೊಡುವ ಯೋಜನೆಯನ್ನು ರೈಟ್ ಟು ಫುಡ್ ಆ್ಯಕ್ಟ್ ಅಡಿಯಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಜಾರಿಗೆ ತಂದಿದ್ದು. ಇದೇನು ಕೇಂದ್ರ ಸರ್ಕಾರದ ಹೊಸ ಯೋಜನೆಯಲ್ಲ. ಅನ್ನಭಾಗ್ಯ ಯೋಜನೆ ಮೋದಿ ಪ್ರಧಾನಿಯಾಗುವ ಮುಂಚೆಯೇ ಜಾರಿಗೆ ಬಂದಿದೆ. ನಾವು ದುಡ್ಡು ಕೊಡುತ್ತೇವೆಂದರೂ ಗೋದಾಮಿನಲ್ಲಿ ಸಂಗ್ರಹವಿರುವ ಅಕ್ಕಿ ಕೊಡಲು ಕೇಂದ್ರ ಮುಂದಾಗುತ್ತಿಲ್ಲ.
-ಎಚ್ ಕೆ ಪಾಟೀಲ್, ಸಚಿವರು.