* `ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ’ ಅಂಗವಾಗಿ ಕ್ರೀಡಾ ಇಲಾಖೆಯ ವಿಶೇಷ ಕಾರ್ಯಕ್ರಮ
ವಿಜಯಸಾಕ್ಷಿ ಸುದ್ದಿ, ಗದಗ
ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಚೇರಿಯಲ್ಲಿ ಮಂಗಳವಾರ ಅದೆಂಥದೋ ಸಂಭ್ರಮದ ವಾತಾವರಣವಿತ್ತು. ಅಧಿಕಾರಿಯ ಖುರ್ಚಿಯಲ್ಲಿ ಕುಳಿತಿದ್ದ ಯುವ ಅಧಿಕಾರಿಯ ಗಾಂಭೀರ್ಯ, ಸಭೆಯನ್ನು ನಿರ್ವಹಿಸುತ್ತ, ಕಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುತ್ತಿರುವ ದೃಶ್ಯ ನೋಡಿದವರು `ಅಬ್ಬಾ! ಇಷ್ಟು ಸಣ್ಣ ವಯಸ್ಸಿನಲ್ಲೇ ಇಂಥದೊಂದು ಹುದ್ದೆ ಅಲಂಕರಿಸಿದ ಈ ಹೆಣ್ಣುಮಗಳು, ಅವರ ಪಾಲಕರು, ಜಿಲ್ಲೆಯ ಜನರೂ ಖರೇ ಅದೃಷ್ಟ ಮಾಡ್ಯರ‍್ರೀ…’ ಅನ್ನುವಂತಿತ್ತು. ಗೊಂದಲಗಳಿಲ್ಲದ, ಸೌಮ್ಯವಾದ ಆ ಅಧಿಕಾರಿಯ ಕಣ್ಣುಗಳಲ್ಲಿ ಸಾವಿರ ದೀಪಗಳ ಬೆಳಕಿತ್ತು!

ನಿಜವೇ! ಹೆಣ್ಣು ಯಾವುದರಲ್ಲಿ ಕಡಿಮೆ ಹೇಳಿ?! ಕೇವಲ ಮನೆಯನ್ನು ಸಮರ್ಥವಾಗಿ ನಿಭಾಯಿಸುವ ಹಂತವನ್ನು ದಾಟಿ, ಇಡೀ ದೇಶವನ್ನೇ ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ಯುವ ಸಾಮರ್ಥ್ಯ ಹೆಣ್ಣಿಗೂ ಇದೆ. ಜೆಟ್ ವಿಮಾನಗಳನ್ನೋಡಿಸುವುದಲ್ಲದೇ, ನಭಕ್ಕೆ ಚಿಮ್ಮುವ ರಾಕೆಟ್ ಏರಿ ಮಂಗಳಯಾನವನ್ನೂ ಯಶಸ್ವಿಯಾಗಿ ನಿಭಾಯಿಸುವ ಗಟ್ಟಿತನವೂ ಇದೆ. ಹೀಗಿರುವಾಗ, ಜಿಲ್ಲೆಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನೇತೃತ್ವ ವಹಿಸುವುದು ಅಸಾಧ್ಯವಾ? ಇಲ್ಲವೇ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ ಶಿಲ್ಪಾ ಬೂದಿಹಾಳ.
ಅಂದಹಾಗೆ, ನಾವೀಗ ಹೇಳುತ್ತಿರುವುದು, `ಒಂದು ದಿನದ ಕ್ರೀಡಾಧಿಕಾರಿ’ಯ ಬಗ್ಗೆ!
ಹೌದು. ಅ.11ರಂದು `ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ’ಯನ್ನು ಆಚರಿಸಲಾಗುತ್ತದೆ. ಈ ದಿನದ ಅಂಗವಾಗಿ, ಹೆಣ್ಣುಮಕ್ಕಳಿಗೂ ಸಮಾನ ಅವಕಾಶ ಒದಗಿಸುವ ಹಾಗೂ ಲಿಂಗ ಸಮಾನತೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಹಾಗೂ ಗದಗದ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಅಪರ ಮುಖ್ಯಾಧಿಕಾರಿ ಶಾಲಿನಿ ರಜನೀಶ್‌ರ ಮಾರ್ಗದರ್ಶನದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಗದಗ ಯುವಜನ ಸಬಲೀಕರಣ/ಕ್ರೀಡಾ ಇಲಾಖೆಯ ವತಿಯಿಂದ `ಒಂದು ದಿನದ ಯುವ ಕ್ರೀಡಾಧಿಕಾರಿ’ ಕಲ್ಪನೆಯಲ್ಲಿ ೧೮-೨೩ ವಯೋಮಾನದ ಆಸಕ್ತರನ್ನು ಆಯ್ಕೆ ಮಾಡಿ, ಇಲಾಖೆಯು ಹೇಗೆ ಕಾರ್ಯನಿರ್ವಹಿಸುತ್ತದೆ, ಯೋಜನೆಗಳೇನು, ಅವುಗಳನ್ನು ಹೇಗೆ ಕಾರ್ಯರೂಪಕ್ಕೆ ತರಬೇಕು, ಯುವಕರನ್ನು ಒಗ್ಗೂಡಿಸುವ ಅಂಶಗಳನ್ನು ಮನದಟ್ಟು ಮಾಡಿಸುವ ಯೋಜನೆಯನ್ನು ರೂಪಿಸಲಾಗಿತ್ತು.
ಅದರಂತೆ, ಪ್ರಕಟಣೆ ನೀಡಿದಾಗ, ನಾಲ್ಕೈದು ಆಸಕ್ತರು ಅರ್ಜಿ ಸಲ್ಲಿಸಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕ್ರೀಡಾ ಇಲಾಖೆ ಹಾಗೂ ಎನ್‌ಎಸ್‌ಎಸ್ ವತಿಯಿಂದ ಸಭೆ ನಡೆಸಿ ಸೂಕ್ತ ಅಭ್ಯರ್ಥಿಯ ಆಯ್ಕೆಯನ್ನೂ ಮಾಡಲಾಗಿತ್ತು. ಇದರಂತೆ, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ವಿದ್ಯಾಲಯದ ಎಂಎಸ್‌ಡಬ್ಲ್ಯೂ ವಿದ್ಯಾರ್ಥಿನಿ ಶಿಲ್ಪಾ ಬೂದಿಹಾಳ ಆಯ್ಕೆಯಾಗಿ `ಒಂದು ದಿನದ ಯುವ ಕ್ರೀಡಾಧಿಕಾರಿ’ ಸ್ಥಾನವನ್ನು ಅಲಂಕರಿಸಿದರು.
ಯೋಜನೆಯಂತೆ, ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಅತ್ಯಂತ ಸಂತಸದಿಂದ ಮಾಹಿತಿ ವಿನಿಮಯ ನಡೆಸಿದ ಶಿಲ್ಪಾ ಅನೇಕ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿದರು. ಅಧಿಕಾರಿಗಳೊಂದಿಗೆ ಚರ್ಚಿಸಿ, ಇಲಾಖೆಯ ಕಾರ್ಯನಿರ್ವಹಣೆಯ ಬಗ್ಗೆ ಅಪಾರ ಮಾಹಿತಿಗಳನ್ನೂ ತಿಳಿದುಕೊಂಡರು. ಒಟ್ಟಿನಲ್ಲಿ, ಈ ಕಾರ್ಯಕ್ರಮ ಸರ್ಕಾರದ, ಇಲಾಖೆಯ ಹಾಗೂ ಆಸಕ್ತ ವಿದ್ಯಾರ್ಥಿನಿ ಶಿಲ್ಪಾ ಬೂದಿಹಾಳರ ಆಶಯಗಳು ನೆರವೇರಿ ಹೊಸತನಕ್ಕೆ ಸಾಕ್ಷಿಯಾಯಿತು.
ಈ ಸಂದರ್ಭದಲ್ಲಿ ತರಬೇತಿದಾರರಾದ ಅನಂತ ದೇಸಾಯಿ, ಶರಣಗೌಡ ಬೇಲೇರಿ, ಮಂಜುನಾಥ್ ಬಗಾಡೆ, ಮಂಜು ಮುಟಗಾರ, ವಿದ್ಯಾ ಕುಲಕರ್ಣಿ, ಸಿಬ್ಬಂದಿಗಳಾದ ಸವಿತಾ ಜಾಧವ್ ಹಾಗೂ ಕಲಾವತಿ ಸೇರಿದಂತೆ ಅನೇಕರಿದ್ದರು.
ಬಂದ ಅರ್ಜಿಗಳನ್ನು ಪರಿಶೀಲಿಸಿ, ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ, ಶಿಲ್ಪಾ ಬೂದಿಹಾಳರನ್ನು ಒಂದು ದಿನದ ಕ್ರೀಡಾಧಿಕಾರಿಯಾಗಿ ಆಯ್ಕೆ ಮಾಡಲಾಗಿತ್ತು. ಅವರಿಗೆ ಸಂಪೂರ್ಣ ಮಾಹಿತಿ ನೀಡಿದ್ದೇವೆ. ಜಿಲ್ಲೆಯಾದ್ಯಂತ ನಡೆಯುತ್ತಿರುವ ಕ್ರೀಡಾ ಚಟುವಟಿಕೆಗಳ ಕುರಿತು ತಿಳಿಸಿದ್ದೇವೆ. ಈ ಕಾರ್ಯಕ್ರಮ ಯುವ ಜನತೆಗೆ ಸಂದೇಶವಾಗಬೇಕು. ಯುವ ಜನತೆಯ ಅಭಿವೃದ್ಧಿಗಾಗಿ ಇಲಾಖೆ ಕೈಗೊಳ್ಳುತ್ತಿರುವ ಚಟುವಟಿಕೆಗಳ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿತ್ತು. ಇಂಥದೊಂದು ಅವಕಾಶಕ್ಕಾಗಿ ಎಲ್ಲ ಅಧಿಕಾರಿಗಳಿಗೂ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ವತಿಯಿಂದ ವಿಶೇಷ ಧನ್ಯವಾದ.
ವಿಠಲ ಜಾಬಗೌಡರ್, ಸಹಾಯಕ ನಿರ್ದೇಶಕರು, ಯುವಜನ ಸಬಲೀಕರಣ, ಕ್ರೀಡಾ ಇಲಾಖೆ, ಗದಗ
ನಾನೂ ಕೂಡ ಸರ್ಕಾರಿ ಅಧಿಕಾರಿಯಾಗಬೇಕೆಂಬುದು ನನ್ನ ಹಾಗೂ ಪಾಲಕರ ಕನಸಾಗಿತ್ತು. ಅಂಥದೊಂದು ಕನಸು ಒಂದು ದಿನದ ಮಟ್ಟಿಗೆ ಈ ಮೂಲಕ ಈಡೇರಿದೆ. ಸಮಾಜದಲ್ಲಿ ಪುರುಷರಷ್ಟೇ ಮಹಿಳೆಯರಿಗೂ ಸಮಾನ ಅವಕಾಶಗಳಿವೆ. ಅದನ್ನು ಸದುಪಯೋಗಪಡಿಸಿಕೊಂಡು ಸಮಾಜದ ಉನ್ನತಿಗೆ ಮುಂದಾಗಬೇಕಾಗಿರುವುದು ಇಂದಿನ ಅಗತ್ಯವೂ ಆಗಿದೆ. ನಮ್ಮ ಜಿಲ್ಲಾಧಿಕಾರಿ, ನಗರಸಭೆಯ ಅಧ್ಯಕ್ಷರೂ ಸೇರಿ, ವಿವಿಧ ಇಲಾಖೆಗಳಲ್ಲಿ ಮಹಿಳೆಯರು ಸಮರ್ಥವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂಥದೊಂದು ಅವಕಾಶ ನೀಡಿದ್ದಕ್ಕೆ ಇಲಾಖೆಗೆ ಹಾಗೂ ಎಲ್ಲ ಅಧಿಕಾರಿಗಳಿಗೂ ಧನ್ಯವಾದ. ಇನ್ನೂ ಹೆಚ್ಚು ವಿದ್ಯಾಭ್ಯಾಸ ಮಾಡಿ ಸಾಮಾಜಿಕ ಕಾರ್ಯಕರ್ತೆಯಾಗಿ ಜನಸೇವೆ ಮಾಡುವ ನನ್ನ ಆಸೆಗೆ ಈ ಹಿನ್ನೆಲೆಯಲ್ಲಿ ಇನ್ನಷ್ಟು ಧೈರ್ಯ ಬಂದಿದೆ.
ಶಿಲ್ಪಾ ಬೂದಿಹಾಳ, ಎಂಎಸ್‌ಡಬ್ಲ್ಯೂ
ವಿದ್ಯಾರ್ಥಿನಿ