ವಿಜಯಸಾಕ್ಷಿ ಸುದ್ದಿ, ಮುಂಡರಗಿ
ತಾಲೂಕಿ ಗ್ರಾಮಗಳ ರೈತರು 2016-17ನೇ ಹಿಂಗಾರು ಹಂಗಾಮಿನಲ್ಲಿ ಖುಷ್ಕಿ ಜಮೀನುಗಳಲ್ಲಿ ಬೆಳೆದ ಜೋಳ ಮತ್ತು ಕಡಲೆ ಬೆಳೆಗಳಿಗೆ ವಿಮೆ ಮಾಡಿಸಿದ್ದರು. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ವಿಮೆ ಹಣದೊಂದಿಗೆ ಅರ್ಜಿ ಸಲ್ಲಿಸಿದ್ದರು. ಆ ಅವಧಿಯಲ್ಲಿ ಸರಿಯಾಗಿ ಮಳೆ ಬಾರದೆ ಬೆಳೆಗಳು ಒಣಗಿ ಫಸಲು ಬಾರದೆ ನಷ್ಟ ಉಂಟಾಗಿತ್ತು.
ಅನೇಕ ಸಲ ಸಂಬಂಧಪಟ್ಟ ಇಲಾಖೆಗಳಲ್ಲಿ ವಿಮಾ ಪರಿಹಾರ ಕೊಡಲು ಕೋರಿದರೂ ಪರಿಹಾರ ನೀಡಿರಲಿಲ್ಲ. ರೈತರು ರಸ್ತೆ ತಡೆ ನಡೆಸಿ, ಪ್ರತಿಭಟನೆ ನಡೆಸಿದಾಗ, ಜಿಲ್ಲಾಡಳಿತ ರೈತರಿಗೆ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿತ್ತು. ಜಿಲ್ಲಾಧಿಕಾರಿಗಳು, ಕೃಷಿ ಇಲಾಖೆಯ ಆಯುಕ್ತರು ಇವರಿಗೆ ಖುಷ್ಕಿ ಜಮೀನಿನಲ್ಲಿ ಬೆಳೆದ ಬೆಳೆಗಳು ಮಳೆ ಬಾರದೆ ಹಾನಿಯಾಗಿರುವುದರಿಂದ ರೈತರಿಗೆ ಪರಿಹಾರ ಕೊಡಲು ಪತ್ರ ಬರೆದಿದ್ದರು.
ಕೃಷಿ ವಿಮಾ ಕಂಪನಿಯವರು ಮೂರು ವರ್ಷಗಳ ನಂತರ 2019ರಲ್ಲಿ ರೈತರ ಬ್ಯಾಂಕ್ ಖಾತೆಗೆ ನೀರಾವರಿ ಬೆಳೆ ನಷ್ಟ ಆದ ಬಗ್ಗೆ ಹಣ ಜಮಾ ಮಾಡಿದ್ದರು. ರೈತರು ಖುಷ್ಕಿ ಜಮೀನಿಗೆ ವಿಮೆ ಹಣ ಪಾವತಿ ಮಾಡಿದ್ದರೂ ಸಹ, ಬ್ಯಾಂಕಿನವರು ನೀರಾವರಿ ಬೆಳೆಯ ವಿಮೆ ಹಣ ಅಂತಾ ನಿರ್ಲಕ್ಷ್ಯದಿಂದ ತಪ್ಪು ದಾಖಲು ಮಾಡಿ ವಿಮಾ ಕಂಪನಿಗೆ ಕಳಿಸಿದ್ದು, ವಿಮಾ ಕಂಪನಿ ದಾಖಲೆಗಳನ್ನು ಪರಿಶೀಲಿಸದೆ, ನೀರಾವರಿ ಬೆಳೆ ನಷ್ಟ ಅಂತಾ ಕಡಿಮೆ ಹಣ ಜಮಾ ಮಾಡಿ ಸೇವಾ ನ್ಯೂನತೆ ಎಸಗಿದ್ದಾರೆ ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಆಯೋಗದ ಅಧ್ಯಕ್ಷ ಡಿ ವಾಯ್ ಬಸಾಪುರ, ಸದಸ್ಯರಾದ ರಾಜು ನಾಮದೇವ ಮೇತ್ರಿ ಹಾಗೂ ಯಶೋಧಾ ಭಾಸ್ಕರ ಪಾಟೀಲರನ್ನು ಒಳಗೊಂಡ ಪೀಠವು ಸುದೀರ್ಘ ವಿಚಾರಣೆ ಮಾಡಿ, ರೈತರು ಹಾಜರುಪಡಿಸಿದ ಪಹಣಿಗಳನ್ನು ಹಾಗೂ ಜಿಲ್ಲಾಧಿಕಾರಿಗಳು ಸಲ್ಲಿಸಿದ ವರದಿಯನ್ನು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನವರು ಮತ್ತು ಕೃಷಿ ವಿಮಾ ಕಂಪನಿಯವರು ಕೂಲಂಕುಷವಾಗಿ ಪರಿಶೀಲಿಸಿ ಖುಷ್ಕಿ ಬೆಳೆಗಳಿಗೆ ವಿಮಾ ಪರಿಹಾರ ನೀಡದೆ, ನೀರಾವರಿ ಬೆಳೆಗೆ ಕಡಿಮೆ ಹಣ ನೀಡಿ ಸೇವಾನ್ಯೂನತೆ ಎಸಗಿದ್ದು ಸಾಬೀತಾಗಿದೆ ಎಂದು ತೀರ್ಪು ನೀಡಿದ್ದು, ರೈತರಿಗೆ ಖುಷ್ಕಿ ಬೆಳೆಗಳ ಹಾನಿಯಾದ ಬಗ್ಗೆ ಪರಿಹಾರ ಕೊಡಲು ಆದೇಶಿಸಿದೆ.
ರೈತರ ಖಾತೆಗೆ ಈಗಾಲೇ ಜಮಾ ಮಾಡಿದ ಹಣ ವಜಾ ಮಾಡಿ ಉಳಿದ ಹಣವನ್ನು ಎರಡು ತಿಂಗಳ ಒಳಗಾಗಿ ಕೊಡಲು ಆದೇಶಿಸಿದೆ. ದೂರುದಾರರು ಆಯೋಗಕ್ಕೆ ಅಲೆದಾಡಿ ಮಾನಸಿಕ ಹಿಂಸೆ ಅನುಭವಿಸಿದ್ದರಿಂದ, 5 ಸಾವಿರ ರೂ.ಗಳ ಹೆಚ್ಚಿನ ಪರಿಹಾರ ಹಾಗೂ ಪ್ರಕರಣದ ಖರ್ಚು 2 ಸಾವಿರ ರೂ.ಗಳನ್ನು ಕೊಡಲು ಆದೇಶ ಮಾಡಿದೆ.