ವಿಜಯಸಾಕ್ಷಿ ಸುದ್ದಿ, ಗದಗ:
ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಟಗೇರಿ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಒಟ್ಟು 20,300 ರೂ ಮೌಲ್ಯದ 2300 ಗ್ರಾಂ ಗಾಂಜಾ ಹಾಗೂ 2.50 ಲಕ್ಷ ರೂ. ಬೆಲೆ ಬಾಳುವ ಸಿಪ್ಟ್ ಕಾರು(ಕೆಎ 05 ಎಎಫ್ 6723) ವಶಪಡಿಸಿಕೊಂಡಿದ್ದಾರೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಕೊನಸಾಗರ ಗ್ರಾಮದ ಚಾಲಕ ಪರಸಪ್ಪ ಖೀಗಪ್ಪ ಭಜಂತ್ರಿ ಹಾಗೂ ರೈತ ಹುಸೇನಸಾಬ ಯಮನೂರಸಾಬ ನಾಯ್ಕ್ ಎಂಬುವವರ ವಿರುದ್ಧ ಎನ್ ಡಿಪಿಎಸ್ ಆ್ಯಕ್ಟ್ ನಡಿ ಪ್ರಕರಣ ದಾಖಲಾಗಿದೆ.
ರೋಣದಿಂದ ಹುಬ್ಬಳಿ ಕಡೆಗೆ ಕಾರಿನಲ್ಲಿ ಅನಧಿಕೃತವಾಗಿ ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಬೆಟಗೇರಿ ಪೊಲೀಸ್ ಠಾಣೆಯ ಪಿಎಸ್ಐ ಪ್ರಕಾಶ ಬಣಕಾರ ಅವರಿಗೆ ಮಾಹಿತಿ ಬಂದಿದೆ. ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಹಾಗೂ ಡಿವೈಎಸ್ಪಿ ಶಿವಾನಂದ ಪಟ್ಟಣಶೆಟ್ಟಿ ಅವರ ನಿರ್ದೇಶನದಂತೆ ಬೆಟಗೇರಿ ಪೊಲೀಸ್ ಠಾಣೆಯ ಸಿಪಿಐ ಸುಬ್ಬಾಪೂರಮಠ ಅವರ ಮಾರ್ಗದರ್ಶನದಂತೆ ದಾಳಿ ನಡೆಸಿ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ಜಪ್ತಿ ಮಾಡಿದ್ದಾರೆ.
ಬೆಟಗೇರಿ ಹೊರವಲಯದ ದಂಡಿನ ದುರ್ಗಮ್ಮ ದೇವಸ್ಥಾನದ ಹತ್ತಿರ ನಿಂತುಕೊಂಡಿದ್ದ ಪೊಲೀಸರು ರೋಣ ಕಡೆಯಿಂದ ಬರುವ ಎಲ್ಲ ವಾಹನಗಳನ್ನು ತಪಾಸಣೆ ನಡೆಸಿದ್ದಾರೆ. ಈ ವೇಳೆ ಬಿಳಿಯ ಸ್ವಿಫ್ಟ್ ಕಾರೊಂದು ಬಂದಿದ್ದು, ನಿಲ್ಲಿಸಿ ಚಾಲಕನನ್ನು ವಿಚಾರಿಸಿದ್ದಾರೆ. ಗಾಬರಿಗೊಂಡ ಚಾಲಕ ಮಾತನಾಡಲು ತಡವರಿಸಿದ್ದು, ಆಗ ಪೊಲೀಸರು ಕಾರು ಸುತ್ತುವರಿದು ತಪಾಸಣೆ ನಡೆಸಿದ್ದಾರೆ. ಈ ವೇಳೆ ಡಿಕ್ಕಿಯಲ್ಲಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಅಡಗಿಸಿಟ್ಟಿದ್ದ
ಒಣಗಿದ ಗಾಂಜಾ ಪತ್ತೆಯಾಗಿದೆ.
ಈ ವೇಳೆ ಪೊಲೀಸರು ಕಾರು ಚಾಲಕ ಪರಸಪ್ಪನನ್ನು
ವಿಚಾರಣೆ ನಡೆಸಿದ್ದು, ‘ಒಂದು ವರ್ಷದ ಹಿಂದೆ ಲಾರಿ ಚಾಲನೆ ಮಾಡುತ್ತಿದ್ದಾಗ ವಿಜಯಪುರ ಹತ್ತಿರದ ಗಾಂಜಾ ಮಾರುತ್ತಿದ್ದವನ ಬಳಿ ತಂದಿದ್ದೇನೆ. ಆದರೆ, ಅವನು ಯಾರು? ಎಲ್ಲಿಯವನು ಅಂತಾ ಗೊತ್ತಿಲ್ಲ. ನಾನು ಹುಬ್ಬಳ್ಳಿಗೆ ಹೆಚ್ಚಿನ ಹಣಕ್ಕಾಗಿ ಗಾಂಜಾ ಮಾರಾಟಮಾಡಲು ಹೊರಟ್ಟಿದ್ದೇನೆ’ ಎಂದು ಬಾಯ್ಬಿಟ್ಟಿದ್ದಾನೆ. ಆದರೆ ಇದು ಕಟ್ಟುಕಥೆ ಎನ್ನಲಾಗಿದೆ.
ಗದಗ ತಹಸೀಲ್ದಾರ ಕಿಶನ್ ಕಲಾಲ್, ಕಂದಾಯ ನಿರೀಕ್ಷಕ ರಂಗನಗೌಡ ಶಿವಶಂಕರಗೌಡ ಪಾಟೀಲ್ ಹಾಗೂ ಮದಗಾನೂರ ಗ್ರಾಮ ಲೆಕ್ಕಾಧಿಕಾರಿ ವಿಜಯಕುಮಾರ್ ಸಣ್ಣಯಲ್ಲಪ್ಪ ಗಾಜಿ ಎಂಬುವವರು ಗಾಂಜಾ ದಾಳಿ ವೇಳೆ ಇದ್ದರು. ಈ ಕುರಿತು ಪ್ರಕರಣ ದಾಖಲಿಸಿರುವ ಬೆಟಗೇರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.