ವಿಜಯಸಾಕ್ಷಿ ಸುದ್ದಿ, ಗದಗ
ಇತ್ತೀಚೆಗೆ ದೇಶದೆಲ್ಲೆಡೆ ಎಸ್ಡಿಪಿಐ ಹಾಗೂ ಪಿಎಫ್ಐ ಮುಖಂಡರ ಮೇಲೆ ಎನ್ಐಎ ತನಿಖಾ ತಂಡ ದಾಳಿ ಮಾಡಿ ಬಂಧಿಸಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ಗದಗ ಶಹರ ಪೊಲೀಸರು ಇಬ್ಬರನ್ನು, ಬೆಟಗೇರಿ ಪೊಲೀಸರು ಓರ್ವ ಪಿಎಫ್ಐ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಶಹರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಜಯಂತ ಗೌಳಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ರಹಮತ್ ನಗರದ ನಿವಾಸಿ ರುಸ್ತುಂ, ಕಾಗದಗಾರ ಓಣಿಯ ಸರ್ಫರಾಜ್ ಹಾಗೂ ಬೆಟಗೇರಿಯ ಪೊಲೀಸ್ ಇನ್ಸ್‌ಪೆಕ್ಟರ್ ಸುಬ್ಬಾಪೂರಮಠ ಅವರ ನೇತೃತ್ವದಲ್ಲಿ ಸನಾವುಲ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.
ಈಗಾಗಲೇ ರುಸ್ತುಂ ಗೌಂಡಿ ಹಾಗೂ ಸರ್ಫರಾಜ್ ದಂಡಿನ ತಹಸೀಲ್ದಾರ್ ಅವರ ಮುಂದೆ ಹಾಜರು ಪಡಿಸಿಲಾಗಿದ್ದು, ತಹಸೀಲ್ದಾರ್ ಕಿಶನ್ ಕಲಾಲ ಅವರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಬೆಟಗೇರಿಯ ಸನಾವುಲ್ಲ್ ಶಲವಡಿ ಎಂಬಾತನನ್ನು ವಶಕ್ಕೆ ಪಡೆದಿರುವ ಬೆಟಗೇರಿ ಪೊಲೀಸರು, ತೀವ್ರ ವಿಚಾರಣೆ ನಡೆಸಿದ್ದು, ಆತನನ್ನು ತಹಸೀಲ್ದಾರ್ ಅವರ ಮುಂದೆ ಹಾಜರು ಪಡಿಸಿಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಶಹರ ಠಾಣೆ, ಬೆಟಗೇರಿ ಠಾಣೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.