ವಿಜಯಸಾಕ್ಷಿ ಸುದ್ದಿ, ಗದಗ
ಕೆಲವರ ಕಿರುಕಳಕ್ಕೆ ಬೇಸತ್ತು ತಾಲೂಕಿನ ಲಕ್ಕುಂಡಿ ಗ್ರಾಮದ ಮನೆಯಲ್ಲಿ ಪೊಲೀಸ್ ಪೇದೆಯೊಬ್ಬರು ಡೆತ್‌ನೋಟ್ ಬರೆದಿಟ್ಟು ಸಾವಿಗೆ ಶರಣಾಗಿರುವ ಘಟನೆ ಬುಧವಾರ ನಡೆದಿದೆ.
ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲಕ್ಕುಂಡಿ ಗ್ರಾಮದ ಅಜ್ಜುಗೌಡ ಪಾಟೀಲ್ ಸಾವಿಗೆ ಶರಣಾಗಿದ್ದಾರೆ.
ಕಳೆದ ವರ್ಷ ಹಣ ಡಬ್ಲಿಂಗ್ ಪ್ರಕರಣದಲ್ಲಿ ಆರೋಪಿ ಒಬ್ಬನನ್ನು ಬಂಧಿಸಲಾಗಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಸಂದರ್ಭದಲ್ಲಿ ಆರೋಪಿಯ ಸಂಬಂಧಿಯೊಬ್ಬಳ ಜೊತೆ ಮೃತ ಪೇದೆ ಪ್ರೇಮಪಾಶದಲ್ಲಿ ಬಿದ್ದಿದ್ದನೆಂದು ಆರೋಪ ಕೇಳಿ ಬಂದಿತ್ತು. ಈ ವೇಳೆ ಮೊಬೈಲ ಚಾಟಿಂಗ್ ಸಂದರ್ಭದಲ್ಲಿ ಅರೆಬರೆ ದೃಶ್ಯವೊಂದರ ವಿಡಿಯೋ ವೈರಲ್ ಆಗಿತ್ತು ಎನ್ನಲಾಗಿದೆ. ವೈರಲ್ ಆಗಿದ್ದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಮೃತ ಪೇದೆಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ವಿಷಯ ಕುಟುಂಬದವರಿಗೂ ತಿಳಿದಿತ್ತು ಎನ್ನಲಾಗಿದೆ. ಇದರಿಂದ ಬೇಸತ್ತಿದ್ದ ಅಜ್ಜುಗೌಡ ಮಾನಸಿಕವಾಗಿ ಕುಗ್ಗಿದ್ದ ಎಂದು ಹೇಳಲಾಗುತ್ತಿದೆ. ಅಲ್ಲದೆ, ಅಜ್ಜುಗೌಡ ತನಗೆ ಯಾರ‍್ಯಾರು ಬ್ಲಾಕ್ ಮೇಲ್ ಮಾಡುತ್ತಿದ್ದರು ಎಂದು ಆಪ್ತರೆದುರಿಗೆ ಬಾಯಿ ಬಿಟ್ಟಿದ್ದ ಎನ್ನಲಾಗಿದೆ. ಬುಧವಾರ ಕುಟುಂಬಸ್ಥರು ಊರಿಗೆ ಹೋಗಿದ್ದನ್ನೇ ಅವಕಾಶವೆಂದು ಭಾವಿಸಿಕೊಂಡ ಅಜ್ಜುಗೌಡ ಮಹಡಿ ಮನೆಯ ಬೆಡ್ ರೂಮ್‌ನಲ್ಲಿ ಹಗ್ಗದಿಂದ ನೇಣು ಬಿಗಿದುಕೊಂಡಿದ್ದಾನೆ.
ಸಾವಿಗೂ ಮುನ್ನ ನಾಲ್ಕು ಪುಟಗಳ ಸುದೀರ್ಘ ಡೆತ್‌ನೋಟ್ ಬರೆದಿಟ್ಟಿದ್ದಾನೆ ಎನ್ನಲಾಗಿದೆ. ಡೆತ್‌ನೋಟ್‌ನಲ್ಲಿ ಕೆಲವರ ಹೆಸರನ್ನು ಬರೆದಿಟ್ಟಿದ್ದಾನೆ ಎಂದು ಹೇಳಲಾಗುತ್ತಿದ್ದು, ಅಜ್ಜುಗೌಡಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದವರು ಯಾರು ಎಂಬುವುದು ಪೊಲೀಸರ ನಿಷ್ಪಕ್ಷಪಾತ ತನಿಖೆಯಿಂದ ಹೊರಬರಬೇಕಿದೆ.
ಸುದ್ದಿ ತಿಳಿದ ತಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಯ ಕುರಿತು ಮಾಹಿತಿ ಕೇಳಲು ಗ್ರಾಮೀಣ ಠಾಣೆಯ ಇನ್ಸ್‌ಪೆಕ್ಟರ್ ರವಿ ಕಪ್ಪತನವರಿಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ.