ಸೂರಿಲ್ಲದ ಜಿಲ್ಲೆಯ ಜನರಿಗೆ ಸಿಹಿಸುದ್ದಿ; 4 ಸಾವಿರ ಬಡವರಿಗೆ ಮನೆ, ಜ.20ರೊಳಗೆ ಫಲಾನುಭವಿಗಳ ಆಯ್ಕೆ

0
Spread the love

Advertisement

ಸಿಹಿಸುದ್ದಿ: 4,190 ಬಡವರಿಗೆ ಸೂರು ಮಂಜೂರು,

ವಿವಿಧ ವಸತಿ ಯೋಜನೆಯಡಿ ಗ್ರಾಮೀಣ ಪ್ರದೇಶಕ್ಕೆ ಗುರಿ ನಿಗದಿ, ಜ. 20ರೊಳಗಾಗಿ ಫಲಾನುಭವಿಗಳ ಆಯ್ಕೆ ಮಾಡುವಂತೆ ಸಿಇಒ ಸೂಚನೆ,

ಎಸ್‌ಸಿ, ಎಸ್‌ಟಿ ವರ್ಗಕ್ಕೆ 1007, ಅಲ್ಪಸಂಖ್ಯಾತರ ಹಾಗೂ ಸಾಮಾನ್ಯ ವರ್ಗದವರಿಗೆ 3,183 ಮನೆಗಳ ಗುರಿ

ವಿಜಯಸಾಕ್ಷಿ ವಿಶೇಷ, ಗದಗ:

ಬಹು ದಿನಗಳಿಂದ ವಸತಿ ಯೋಜನೆಯಡಿ ಹೊಸ ಮನೆಗಳಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಾ ಕುಳಿತಿದ್ದ ಜಿಲ್ಲೆಯ ಜನರು ಸ್ವಲ್ಪ ನಿಟ್ಟಿಸಿರು ಬಿಟ್ಟಿದ್ದಾರೆ. ಹೊಸ ಮನೆ ಕಟ್ಟಿಸಿಕೊಳ್ಳಬೇಕೆಂಬ ನಿರೀಕ್ಷೆಯಲ್ಲಿದ್ದ ನೂತನ ಫಲಾನುಭವಿಗಳಿಗೆ ಅಂತೂ ಇಂತೂ ಕಾಲ ಕೂಡಿ ಬಂದಿದೆ.

ಕಳೆದೆರಡು ವರ್ಷದಿಂದ ಹೊಸ ಮನೆ ಮಂಜೂರಿಗಾಗಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬೇಡಿಕೆ ಹೆಚ್ಚಿತ್ತು. ಇದರಿಂದ ಕಳೆದೊಂದು ವರ್ಷದಿಂದ ಗ್ರಾಮ ಪಂಚಾಯತಿ ಸದಸ್ಯರ ಮೇಲೆ ಒತ್ತಡವಿತ್ತು. ರಾಜ್ಯ ಸರ್ಕಾರದ ಈ ನಿರ್ಧಾರ ಗ್ರಾಮೀಣ ಜನರ ಖುಷಿಗೆ ಕಾರಣವಾಗಿದೆ.

ರಾಜ್ಯ ಸರ್ಕಾರ ಘೋಷಿಸಿರುವ 5 ಲಕ್ಷ ಮನೆಗಳಲ್ಲಿ, ಗ್ರಾಮೀಣ ಭಾಗಕ್ಕೆ ಮೀಸಲಿರುವ 4 ಲಕ್ಷ ಮನೆಗಳ ಪೈಕಿ ಗದಗ ಜಿಲ್ಲೆಗೆ ವಿವಿಧ ವಸತಿ ಯೋಜನೆಯಡಿ 4,190 ಮನೆಗಳ ಗುರಿ ನಿಗದಿಪಡಿಸಿದ್ದು, ಆಯಾ ಗ್ರಾಮ ಪಂಚಾಯತಿ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಮನೆ ಹಂಚಿಕೆಯಾಗಲಿವೆ.

ಜಿಲ್ಲೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಯಡಿ 1,007, ಬಸವ ವಸತಿ ಯೋಜನೆಯಡಿ 3,183 ಸೇರಿ ಒಟ್ಟು 4,190 ಮನೆಗಳ ಗುರಿ ನಿಗದಿಪಡಿಸಲಾಗಿದೆ. ಅದರಲ್ಲಿ ಡಾ| ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಯಡಿ ಪರಿಶಿಷ್ಟ ಜಾತಿ 719, ಪರಿಶಿಷ್ಟ ಪಂಗಡ 291 ಮನೆಗಳು ನಿಗದಿಯಾಗಿವೆ. ಅದರಂತೆ, ಬಸವ ವಸತಿ ಯೋಜನೆಯಡಿ ಅಲ್ಪಸಂಖ್ಯಾತರಿಗೆ 419, ಸಾಮಾನ್ಯ ವರ್ಗದವರಿಗೆ 2,764 ಮನೆಗಳು ನಿಗದಿಯಾಗಿದೆ ಎಂದು ಜಿ.ಪಂ. ಸಿಇಒ ಭರತ್ ಕೆ. ಅವರು ತಿಳಿಸಿದ್ದಾರೆ.

ವಿಧಾನಸಭೆ ಕ್ಷೇತ್ರವಾರು ವಿವರ

ಗದಗ ವಿಧಾನಸಭಾ ಕ್ಷೇತ್ರದ 12 ಗ್ರಾ.ಪಂ.ಗಳಿಗೆ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಯಡಿ 112, ಬಸವ ವಸತಿ ಯೋಜನೆಯಡಿ 348, ನರಗುಂದ ವಿಧಾನಸಭಾ ಕ್ಷೇತ್ರದ 35 ಗ್ರಾ.ಪಂ.ಗಳಿಗೆ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಯಡಿ 288, ಬಸವ ವಸತಿ ಯೋಜನೆಯಡಿ 912, ರೋಣ ವಿಧಾನಸಭಾ ಕ್ಷೇತ್ರದ 39 ಗ್ರಾ.ಪಂ.ಗಳಿಗೆ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಯಡಿ 320, ಬಸವ ವಸತಿ ಯೋಜನೆಯಡಿ 1,010 ಹಾಗೂ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ 36 ಗ್ರಾ.ಪಂ.ಗಳಿಗೆ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಯಡಿ 287, ಬಸವ ವಸತಿ ಯೋಜನೆಯಡಿ 913 ಮನೆಗಳ ಗುರಿ ನಿಗದಿಯಾಗಿದೆ.

ಗ್ರಾ.ಪಂ. ಸದಸ್ಯನಾಗಿ ಒಂದು ವರ್ಷ ಕಳೆದರೂ ವಸತಿರಹಿತ ಕುಟುಂಬಗಳಿಗೆ ಸೂರು ಕಲ್ಪಿಸಿ ಕೊಡಲಾಗದೆ ತುಂಬಾ ನಿರಾಸೆಯಾಗಿತ್ತು. ಸದ್ಯ ನಮ್ಮ ಪಂಚಾಯತಿಗೆ 40 ಮನೆಗಳು ಬರಲಿದ್ದು, 22 ಸದಸ್ಯರ ಮಧ್ಯೆ ಹಂಚಿಕೆಯಾಗಿ ಪ್ರತಿ ಸದಸ್ಯರಿಗೆ ಕನಿಷ್ಠ 2 ಮನೆಗಳು ಬರಲಿವೆ. ಇದು ತೃಪ್ತಿದಾಯಕವಲ್ಲದಿದ್ದರೂ, ಸ್ವಲ್ಪ ಸಮಾಧಾನ ತರಿಸಿದೆ.

ಚಂದ್ರಶೇಖರ್ ಹರಿಜನ, ಗ್ರಾ.ಪಂ. ಸದಸ್ಯ

ಜಿಲ್ಲೆಯ 122 ಗ್ರಾ.ಪಂ.ಗಳಿಗೆ 4190 ಮನೆಗಳ ಗುರಿ ನಿಗದಿಯಾಗಿದ್ದು, ಜ.20ರೊಳಗಾಗಿ ಜಿಲ್ಲೆಯ ಎಲ್ಲ ಗ್ರಾ.ಪಂ.ಗಳು ಅರ್ಹ ಫಲಾನುಭವಿಗಳನ್ನು ಗ್ರಾಮ ಸಭೆಗಳ ಮೂಲಕ ಆಯ್ಕೆ ಮಾಡಬೇಕು.

ಭರತ್ ಕೆ., ಜಿ.ಪಂ. ಸಿಇಒ

Spread the love

LEAVE A REPLY

Please enter your comment!
Please enter your name here