ಟಿಪ್ಪರ್ ಹಾವಳಿಗೆ ಬೇಸತ್ತ ಸಾರ್ವಜನಿಕರು; ಟಿಪ್ಪರ್ ಸಂಚಾರಕ್ಕೆ ತಡೆವೊಡ್ಡಿ ಪ್ರತಿಭಟನೆ

0
Spread the love

ಬೇರೆ ಮಾರ್ಗದಲ್ಲಿ ಸಂಚಾರಕ್ಕೆ ಒತ್ತಾಯ…….

Advertisement

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದಲ್ಲಿ ಪ್ರತಿನಿತ್ಯ ಸಂಚರಿಸುವ ಟಿಪ್ಪರ್‌ಗಳ ಹಾವಳಿಯಿಂದ ಬೇಸತ್ತ ಮಹಿಳೆಯರು ಸೋಮವಾರ ಟಿಪ್ಪರ್‌ಗಳನ್ನು ತಡೆದು ಕೆಲಕಾಲ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಚನ್ನಮ್ಮ ಹೋರಿ, ರೇಶ್ಮಾ ನದಾಫ್, ಚನ್ನಪಟ್ಟಣ ರಸ್ತೆ ಮೂಲಕ ಗ್ರಾಮದ ಹೊರವಲಯದಿಂದ ಆಗಮಿಸುವ ನೂರಾರು ಟಿಪ್ಪರ್‌ಗಳು ಓಡಾಡುತ್ತಿರುವದರಿಂದ ಹಗಲು-ರಾತ್ರಿ ಜೀವಭಯದಲ್ಲಿ ಜೀವನವನ್ನು ನಡೆಸುತ್ತಿದ್ದೇವೆ.

ಇದೇ ರಸ್ತೆಯಲ್ಲಿ 3 ಅಂಗನವಾಡಿ ಕೇಂದ್ರಗಳಿದ್ದು, ಇಕ್ಕಟ್ಟಾದ ರಸ್ತೆಯಲ್ಲಿ ವೇಗವಾಗಿ ಸಂಚರಿಸುತ್ತಿರುವ ಟಿಪ್ಪರ್‌ಗಳಿಂದ ತುಂಬಾ ತೊಂದರೆಯಾಗುತ್ತಿದೆ. ಚಿಕ್ಕಮಕ್ಕಳಿಗೆ ಧೂಳಿನಿಂದ ಚರ್ಮದ ಅಲರ್ಜಿ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.

ಆದ್ದರಿಂದ ಈ ರಸ್ತೆಯಲ್ಲಿ ಟಿಪ್ಪರ್ ಸಂಚಾರ ಸ್ಥಗಿತಗೊಳಿಸಿ ಪರ್ಯಾಯ ರಸ್ತೆಯ ಮೂಲಕ ಸಂಚಾರ ಮಾಡಬೇಕೆಂದು ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ ಗ್ರಾ ಪಂ ಪಿಡಿಓ ಲಿಖಿತ ರೂಪದಲ್ಲಿ ಮನವಿ ನೀಡಿದರೆ, ಅದನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಇದೀಗ ಪ್ರತಿಭಟನೆಯನ್ನು ಹಿಂಪಡೆಯಬೇಕೆಂದು ಹೇಳಿದರು. ಇದಕ್ಕೆ ಮಹಿಳಾ ಪ್ರತಿಭಟನಾಕಾರರು, ಇದೀಗ ತಡೆದು ನಿಲ್ಲಿಸಿರುವ ಟಿಪ್ಪರ್‌ಗಳನ್ನು ಬಿಡುತ್ತೇವೆ. ತದನಂತರ ಬರುವ ಟಿಪ್ಪರ್‌ಗಳನ್ನು ಬಿಡುವದಿಲ್ಲ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ರಮೇಶ ಕೋಳಿವಾಡ, ಮಲ್ಲಮ್ಮ ಆಲೂರ, ಶರೀಫಮ್ಮ ನದಾಫ್, ಕೃಷ್ಣಮ್ಮ ದಾಸರ, ನೀಲಮ್ಮ ಭಜಂತ್ರಿ ಮುಂತಾದವರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here